Home Entertainment ಯುವ ಪೀಳಿಗೆ ಮೂಲಕ ಭಾರತ-ಪೋಲೆಂಡ್ ಒಂದಾಗುತ್ತಿದೆ: ಮಾಲ್ಗೊರ್ಝಾಟ

ಯುವ ಪೀಳಿಗೆ ಮೂಲಕ ಭಾರತ-ಪೋಲೆಂಡ್ ಒಂದಾಗುತ್ತಿದೆ: ಮಾಲ್ಗೊರ್ಝಾಟ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು, 30 ಜನವರಿ 2026: ಯುವ ಪೀಳಿಗೆಯ ಇಬ್ಬರು ಶ್ರೇಷ್ಠ ವಿಜ್ಞಾನಿಗಳು ಅಂದರೆ ಇಬ್ಬರು ಗಗನಯಾತ್ರಿಗಳ ಮೂಲಕ ಭಾರತ ಮತ್ತು ಪೋಲೆಂಡ್ ಒಂದಾಗುತ್ತಿವೆ. ಭಾರತದ ಶುಭಾಂಶು ಶುಕ್ಲಾ ಅವರು ಮತ್ತು ಪೋಲೆಂಡ್‌ನ ರೊಸ್ನಾಸ್ಕಿ ಅವರು ಇತ್ತೀಚೆಗಷ್ಟೇ ಒಟ್ಟಾಗಿ ಬಾಹ್ಯಾಕಾಶ ಯಾನದಲ್ಲಿ ಭಾಗವಹಿಸಿದ್ದರು. ಒಂದೇ ಮಿಷನ್‌ನಲ್ಲಿ ಭಾರತ ಮತ್ತು ಪೋಲೆಂಡ್‌ನ ಗಗನಯಾತ್ರಿಗಳು ಜೊತೆಯಾಗಿ ಕೆಲಸ ಮಾಡಿದ್ದು ಹೆಮ್ಮೆಯ ವಿಷಯ. ಇಂತಹ ಮಹತ್ವದ ಭೇಟಿಗಳನ್ನು ಮತ್ತು ಸಹಕಾರಗಳನ್ನು ಸಂಸ್ಕೃತಿಯ ಕ್ಷೇತ್ರದಲ್ಲೂ ವಿಸ್ತರಿಸಲು ನಾವು ಶ್ರಮಿಸುತ್ತಿದ್ದೇವೆ ಎಂದು ನವದೆಹಲಿಯಲ್ಲಿರುವ ಪೋಲಿಷ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕಿ ಮತ್ತು ಪೋಲಿಷ್ ರಾಜತಾಂತ್ರಿಕ ನಿಯೋಗದ ಪ್ರತಿನಿಧಿ ಮಾಲ್ಗೊರ್ಝಾಟ ಮಾತನಾಡಿದರು.

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಅವರು, ʼಭಾರತ ಮತ್ತು ಪೋಲೆಂಡ್ ನಡುವೆ ಸಂಸ್ಕೃತಿಯ ಮೂಲಕ ಏರ್ಪಡುತ್ತಿರುವ ಈ ನಿಕಟ ಸಂಬಂಧ, ಪರಸ್ಪರ ತಿಳುವಳಿಕೆ ಮತ್ತು ಸಹಕಾರದ ಬಗ್ಗೆ ಸಂತೋಷವಿದೆ’ ಎಂದರು. ಹಾಗೆಯೇ ರಾಜತಾಂತ್ರಿಕ ಅಧಿಕಾರಿಗಳಾಗಿ ನಾವು ನಮ್ಮ ದೇಶವನ್ನು ಮಾತ್ರವಲ್ಲದೆ, ನಮ್ಮ ಸಂಸ್ಕೃತಿಯನ್ನೂ ವಿಶಾಲ ಅರ್ಥದಲ್ಲಿ ಪ್ರತಿನಿಧಿಸುತ್ತೇವೆ. ಕೇವಲ ಸಿನಿಮಾ, ನಾಟಕ ಅಥವಾ ಸಾಹಿತ್ಯ ಮಾತ್ರವಲ್ಲದೆ, ಈ ಎಲ್ಲಾ ಮಾಧ್ಯಮಗಳ ಮೂಲಕ ಭಾರತೀಯ ಪ್ರೇಕ್ಷಕರಿಗೆ ಪೋಲೆಂಡ್ ದೇಶದ ಕಥೆ ಏನು? ನಮ್ಮ ಇತಿಹಾಸವೇನು? ಎಂಬುದನ್ನು ತಿಳಿಸಲು ನಾವು ಇಚ್ಛಿಸುತ್ತೇವೆʼ ಎಂದರು.

ಹಾಗೆಯೇ ʼಈ ಕಥೆಗಳ ಮೂಲಕ ಭಾರತ ಮತ್ತು ಪೋಲೆಂಡ್‌ನ ಜನರನ್ನು ಹತ್ತಿರಕ್ಕೆ ತರುವುದು ನಮ್ಮ ಕನಸಾಗಿದೆ. ಎರಡೂ ದೇಶಗಳ ನಡುವೆ ಪರಸ್ಪರರ ಸಂಸ್ಕೃತಿ, ಸಂಪ್ರದಾಯ ಮತ್ತು ಕನಸುಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಮೂಡಿಸುವುದು ನಮ್ಮ ಗುರಿ. ಈ ವರ್ಷದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFES) ಪೋಲೆಂಡ್ ದೇಶವನ್ನು ‘ಫೋಕಸ್ ಕಂಟ್ರಿ’ ಎಂದು ಆಹ್ವಾನಿಸಿದ ಕರ್ನಾಟಕ ಸರ್ಕಾರ ಮತ್ತು ಚಿತ್ರೋತ್ಸವದ ತಂಡಕ್ಕೆ ನಾವು ಆಭಾರಿಗಳು. ಭಾರತೀಯ ಪ್ರೇಕ್ಷಕರಿಗೆ ಕೇವಲ ಆಸಕ್ತಿದಾಯಕ ಮಾತ್ರವಲ್ಲದೆ, ಅತ್ಯಂತ ಮೌಲ್ಯಯುತವಾದ ಸಿನಿಮಾಗಳನ್ನು ಇಲ್ಲಿ ಪ್ರದರ್ಶಿಸಲು ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದೇವೆ. ರಾಜತಾಂತ್ರಿಕರಾದ ನಾವು ಎಲ್ಲವನ್ನೂ ವಿವರವಾಗಿ ವಿವರಿಸುವ ಅಗತ್ಯವಿಲ್ಲ, ಬದಲಾಗಿ ನಾವು ತಂದಿರುವ ಕಲೆ ಮತ್ತು ಸಂಸ್ಕೃತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ. ಪೊಲೆಂಡ್‌ ಸಿನಿಮಾಗಳು ಕೇವಲ ಕಮರ್ಷಿಯಲ್‌ ದೃಷ್ಟಿಯಲ್ಲಿ ಸಿನಿಮಾ ಮಾಡುವುದಿಲ್ಲ.

ಅದು ಹೆಚ್ಚಾಗಿ ಅಲ್ಲಿನ ನೋವಿನ ಕಥೆಗಳು, ಇತಿಹಾಸ, ಸಂಸ್ಕೃತಿ ಹಾಗೂ ಜನರ ಮನಸ್ಥಿತಿಯನ್ನು ಪ್ರತಿನಿಧಿಸುತ್ತವೆʼ ಎಂದು ಹೇಳಿದರು. ಕಳೆದ ಆರು ವರ್ಷಗಳಿಂದ ಪೋಲೆಂಡ್‌ನ ಗೌರವಾನ್ವಿತ ರಾಯಭಾರಿ ಸಲಹೆಗಾರರಾಗಿರುವ ರಘು ರಾಜಪ್ಪ ಮಾತನಾಡಿ, ʼಚಲನಚಿತ್ರಗಳ ಮೂಲಕ ನಾವು ಇತರ ದೇಶಗಳಲ್ಲಿ ಏನು ನಡೆಯುತ್ತಿದೆ ಮತ್ತು ನಮ್ಮಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಬಹುದು’ ಎಂದರು. ಈ ಬಾರಿ ನಾವು ಸುಮಾರು 14 ಪೋಲಿಷ್ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದ್ದೇವೆ. ಬೆಂಗಳೂರು ಮತ್ತು ಕರ್ನಾಟಕದ ಸಮಸ್ತ ಜನತೆ ಈ ಪೋಲಿಷ್ ಚಲನಚಿತ್ರಗಳನ್ನು ವೀಕ್ಷಿಸಬೇಕೆಂದು ರಘು ಮನವಿ ಮಾಡಿಕೊಂಡರು.

ಈ ವರ್ಷ ಪ್ರದರ್ಶನಗೊಳ್ಳಲಿರುವ ಸಿನಿಮಾಗಳ ಬಗ್ಗೆ ಮಾತನಾಡಿದ ಮುರ್ತಾಝಾ, ʼವಿಶೇಷವಾಗಿ ಈ ವರ್ಷ, ನಾವು ಪೋಲಿಷ್ ಚಿತ್ರರಂಗದ ದೈತ್ಯ ಪ್ರತಿಭೆ ಆಂಡ್ರೆ ವಾಜ್ದಾ (Andrzej Wajda) ಅವರ ಜನ್ಮಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ. ಅವರ ಸ್ಮರಣಾರ್ಥವಾಗಿ ನಾವು ಅವರ ಏಳು ಅತ್ಯುತ್ತಮ ಚಿತ್ರಗಳ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದೇವೆ. ಈ ವರ್ಷ ಪೋಲಿಷ್ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕಿ ಜೋವಾನ್ನಾ ವಪಿನ್ಸ್ಕಾ ಅವರು ನಮ್ಮೊಂದಿಗೆ ಇದ್ದಾರೆ. ಅವರು ಇಲ್ಲಿನ ಏಷ್ಯಾ ವಿಭಾಗದ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿದ್ದಾರೆ. ಅವರ ಉಪಸ್ಥಿತಿಯು ಪೋಲೆಂಡ್‌ನ ಅತ್ಯುತ್ತಮ ಸಮಕಾಲೀನ ಚಿತ್ರಗಳನ್ನು ಮತ್ತು ಶ್ರೇಷ್ಠ ಕ್ಲಾಸಿಕ್ ಚಿತ್ರಗಳನ್ನು ಇಲ್ಲಿಗೆ ತರುವಲ್ಲಿ ಸಹಕಾರಿಯಾಗಿದೆ. ಖ್ಯಾತ ಸಂಗೀತಗಾರ ಫ್ರೆಡೆರಿಕ್ ಚೋಪಿನ್ ಅವರ ಜೀವನ ಆಧಾರಿತ ಬಯೋಪಿಕ್, ಲೆಜೆಂಡರಿ ನಿರ್ದೇಶಕಿ ಅಗ್ನಿಸ್ಕಾ ಹಾಲೆಂಡ್ ಅವರು ನಿರ್ದೇಶಿಸಿದ ಫ್ರಾಂಜ್ ಕಾಫ್ಕಾ ಅವರ ಬಯೋಪಿಕ್.

ಪೋಲೆಂಡ್‌ನಿಂದ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದ ಡೇಮಿಯನ್ ಕೊಜುರ್ ಅವರ ‘ಅಂಡರ್ ದಿ ವಲ್ಕೆನೊ’ ಚಿತ್ರ. ಡೇಮಿಯನ್ ಅವರು ಇಲ್ಲಿಗೆ ಆಗಮಿಸಿ ಮುಂದಿನ ದಿನಗಳಲ್ಲಿ ‘ಡೈರೆಕ್ಟಿಂಗ್ ಮಾಸ್ಟರ್‌ಕ್ಲಾಸ್’ ಕೂಡ ನಡೆಸಿಕೊಡಲಿದ್ದಾರೆ. ‘ಲೆಟರ್ಸ್ ಫ್ರಮ್ ವುಲ್ಫ್ ಸ್ಟ್ರೀಟ್’ ಎಂಬ ಪ್ರಮುಖ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ನವೀನ ಸಿನಿಮಾಗಳು, ಕ್ಲಾಸಿಕ್‌ಗಳು ಮತ್ತು ಸಾಕ್ಷ್ಯಚಿತ್ರಗಳು ಸೇರಿದಂತೆ ಎಲ್ಲಾ ಸ್ತರದ ಸಿನಿಮಾಗಳನ್ನು ನಾವು ಪ್ರೇಕ್ಷಕರಿಗಾಗಿ ತಂದಿದ್ದೇವೆʼ ಎಂದು ವಿವರಿಸಿದರು.

ಸಮನ್ವಯಕಾರರಾಗಿ ಮಾತನಾಡಿದ ಬೆಂಗಳೂರು ಚಿತ್ರೋತ್ಸವದ ಮಾಜಿ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್, ‘ಕಳೆದ ಸುಮಾರು 40 ವರ್ಷಗಳಿಂದ ನಮ್ಮಂತಹ ದೇಶಗಳ ಚಿತ್ರೋತ್ಸವಗಳಲ್ಲಿ ಪೋಲಿಷ್ ಸಿನಿಮಾಗಳು ಯಾವಾಗಲೂ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿವೆ. ಪೋಲಿಷ್ ಸಿನಿಮಾಗಳ ಮೂಲಕ ನಾವು ಅಲ್ಲಿನ ಸಂಸ್ಕೃತಿ ಮತ್ತು ಪೂರ್ವ ಯುರೋಪ್ ಹಿಂದೆ ಎದುರಿಸಿದ್ದ ಅಸ್ತಿತ್ವದ ಬಿಕ್ಕಟ್ಟು ಹಾಗೂ ಸಂದಿಗ್ಧ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡಿದ್ದೇವೆ.

ಪೋಲೆಂಡ್‌ನ ಚಿತ್ರಗಳು ಈ ವಿಷಯಗಳನ್ನು ನಮಗೆ ಕೇವಲ ತಿಳಿಸಿದ್ದು ಮಾತ್ರವಲ್ಲ, ಅವುಗಳನ್ನು ಆಳವಾಗಿ ಗ್ರಹಿಸಲು ನಮಗೆ ಸಹಾಯ ಮಾಡಿವೆ. ಕಳೆದ 30-40 ವರ್ಷಗಳಲ್ಲಿ ಪೂರ್ವ ಯುರೋಪ್‌ನಲ್ಲಿ ಸಂಭವಿಸಿದ ರಾಜಕೀಯ ಸ್ಥಿತ್ಯಂತರಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಬಹಳ ಸಹಕಾರಿಯಾಗಿವೆ. ಈ ಬದಲಾವಣೆಗಳು ಸಿನಿಮಾದ ಮೂಲಕವೇ ನಮಗೆ ಹೆಚ್ಚು ಹತ್ತಿರವಾಗಿವೆ. ಒಂದು ಅರ್ಥದಲ್ಲಿ, ಪೂರ್ವ ಯುರೋಪಿನ ದೇಶಗಳೊಂದಿಗೆ ನಮಗೆ ದೊಡ್ಡ ಮಟ್ಟದ ಸಾಂಸ್ಕೃತಿಕ ಒಡನಾಟವಿದೆ. ಏಕೆಂದರೆ ಆ ದೇಶಗಳು ವಿಭಿನ್ನ ಸಾಂಸ್ಕೃತಿಕ ಸನ್ನಿವೇಶಗಳಲ್ಲಿ ವಿವಿಧ ಸಮಸ್ಯೆಗಳನ್ನು ಎದುರಿಸಿ ದಾಟಿ ಬಂದಿವೆ’ ಎಂದು ಹೇಳಿದರು.