Home Education ಕರ್ನಾಟಕ ಕಾನೂನು ವಿವಿ ಪರೀಕ್ಷೆಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್ !! | ನವೆಂಬರ್ 15...

ಕರ್ನಾಟಕ ಕಾನೂನು ವಿವಿ ಪರೀಕ್ಷೆಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್ !! | ನವೆಂಬರ್ 15 ರಂದು ನಡೆಯಬೇಕಾಗಿದ್ದ ಪರೀಕ್ಷೆಗಳಿಗೆ ತಡೆಯಾಜ್ಞೆ‌ ನೀಡಿ ಆದೇಶ ಹೊರಡಿಸಿದ ನ್ಯಾಯಾಲಯ

Hindu neighbor gifts plot of land

Hindu neighbour gifts land to Muslim journalist

ಇದೇ ನವೆಂಬರ್ 15 ರಂದು ನಡೆಯಬೇಕಾಗಿದ್ದ ಕರ್ನಾಟಕ ಕಾನೂನು ವಿವಿ ಪರೀಕ್ಷೆಗಳಿಗೆ ಇದೀಗ ‌ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಕಿಣಗಿ ನೇತೃತ್ವದ ಹೈಕೋರ್ಟ್ ನ ಏಕಸದಸ್ಯ ಪೀಠವು ಸೋಮವಾರದಿಂದ (ನವೆಂಬರ್ 15ರಿಂದ) ಆರಂಭವಾಗಬೇಕಾಗಿದ್ದ ಕಾನೂನು ವಿವಿಯ ಸೆಮಿಸ್ಟರ್ ಪರೀಕ್ಷೆಗಳಿಗೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿ ಆದೇಶ ಹೊರಡಿಸಿದೆ.

ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ವಿಧಿಸಲಾಗಿದ್ದ ಲಾಕ್ ಡೌನ್ ನಿಂದಾಗಿ ವಿವಿ ತರಗತಿಗಳು ಆನ್ ಲೈನ್ ಮೂಲಕ ನಡೆದಿದ್ದವು. ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಹಾಗೂ ಯುಜಿಸಿ, ಆದೇಶಗಳ ಅನುಸಾರವಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದಿರುವ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್ ಗಳಿಗೆ ಬಡ್ತಿ ನೀಡಬೇಕೆಂದು ತಮ್ಮ ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿತ್ತು.

ಇದರನ್ವಯ ರಾಜ್ಯದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ, ಬೆಂಗಳೂರು ನಗರ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಬಡ್ತಿ ನೀಡಿದ್ದವು. ಆದರೆ ಸರ್ಕಾರದ ಹಾಗೂ ಯುಜಿಸಿ ನಿಯಮಾವಳಿಗನುಸಾರವಾಗಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಬಡ್ತಿ ಮಾಡದೆ ತರಾತುರಿಯಲ್ಲಿ ಪರೀಕ್ಷಾ ದಿನಾಂಕವನ್ನು ಘೋಷಿಸುವ ಮೂಲಕ ಕರ್ನಾಟಕ ಕಾನೂನು ವಿವಿಯು ಎಲ್ಲ ನಿಯಮಾವಳಿಗಳನ್ನು ಕಡೆಗಣಿಸಿತ್ತು.

ಈಗ ವಿವಿಯ ಈ ನಡೆಯನ್ನು ಪ್ರಶ್ನಿಸಿ ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್ ನ ಮೊರೆ ಹೋಗಿದ್ದರು. ಶುಕ್ರವಾರದಂದು ವಿದ್ಯಾರ್ಥಿಗಳ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಅಶೋಕ ಕಿಣಗಿ ನೇತೃತ್ವದ ಹೈಕೋರ್ಟ್ ನ ಏಕಸದಸ್ಯ ಪೀಠವು ನವೆಂಬರ್ 15 ರಂದು ಏಕಾಏಕಿ ಪರೀಕ್ಷೆಯನ್ನು ನಡೆಸಲು ಮುಂದಾಗಿದ್ದ ಕಾನೂನು ವಿವಿಯ ಪರೀಕ್ಷಾ ವೇಳಾಪಟ್ಟಿಗೆ ಮಧ್ಯಂತರ ತಡೆಯಾಜ್ಞೆ ಆದೇಶವನ್ನು ಹೊರಡಿಸಿದೆ.

ಈ ಆದೇಶದ ಹಿನ್ನಲೆಯಲ್ಲಿ ಡಿಸೆಂಬರ್ 20 ರವರೆಗೆ ಯಾವುದೇ ತರಗತಿಯ ಪರೀಕ್ಷೆಯನ್ನು ನಡೆಸುವಂತಿಲ್ಲ, ಅಷ್ಟೇ ಅಲ್ಲದೆ ಇನ್ನಿತರ ಯಾವುದೇ ಅಧಿಸೂಚನೆಗಳನ್ನು ಹೊರಡಿಸುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇನ್ನೂ ಪ್ರಕರಣದ ಪ್ರಮುಖ ವಿಷಯವಾಗಿರುವ ಬಡ್ತಿ ವಿಚಾರವನ್ನು ಡಿಸೆಂಬರ್ 20 ರಿಂದ ಸುದೀರ್ಘ ವಿಚಾರಣೆಗೆ ಒಳಪಡಿಸಲಿದೆ ಎಂದು ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಉಲ್ಲೇಖಿಸಿದೆ.

ಇನ್ನೊಂದೆಡೆಗೆ ಕರ್ನಾಟಕ ಕಾನೂನು ವಿವಿ ಪದೇ ಪದೇ ತನ್ನ ಅಧಿಸೂಚನೆಗಳನ್ನು ಹೊರಡಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಗೊಂದಲವನ್ನು ಸೃಷ್ಟಿ ಮಾಡಿತ್ತು. ಅಷ್ಟೇ ಅಲ್ಲದೆ ಈ ಹಿಂದೆ ತನ್ನ ಅಕಾಡಿಮಿಕ್ ಕ್ಯಾಲೆಂಡರ್ ಪ್ರಕಾರ ನಡೆದುಕೊಳ್ಳದೆ ವಿಳಂಬ ನೀತಿಯನ್ನು ಅನುಸರಿಸಿತ್ತು. ಈಗ ವಿದ್ಯಾರ್ಥಿಗಳು ಕಾನೂನು ವಿವಿಯ ನಡೆಯನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವ ಮೂಲಕ ತಡೆಯಾಜ್ಞೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.