

Maharashtra: ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ಸ್ವಯಂ ಘೋಷಿತ ದೇವಮಾನವನೊಬ್ಬ ಜನರನ್ನು ಕೋಲುಗಳಿಂದ ಹೊಡೆಯುವುದು, ಬಾಯಿಯಲ್ಲಿ ಬೂಟುಗಳನ್ನು ಹಿಡಿಯುವಂತೆ ಒತ್ತಾಯಿಸುವುದು ಮತ್ತು ಭೂತೋಚ್ಚಾಟನೆಯ ಹೆಸರಿನಲ್ಲಿ ಮೂತ್ರ ಕುಡಿಸುವುದು ಮುಂತಾದ ಕೃತ್ಯ ಮಾಡುವ ವಿಡಿಯೋ ವೈರಲ್ ಆಗಿದೆ. ಇದೀಗ ಈ ಕುರಿತು ವರದಿಗಳು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಆತನ ಮೇಲೆ ತೀವ್ರ ನಿಗಾ ಇಡಲಾಗಿದೆ. ದೇವಮಾನವ ತನ್ನ ಅನುಯಾಯಿಗಳೊಂದಿಗೆ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ. ಮಹಿಳೆಯರನ್ನು ಅನುಚಿತವಾಗಿ ಮುಟ್ಟಿದ ಆರೋಪವೂ ಈತನ ಮೇಲಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಸಂಜಯ್ ರಂಗನಾಥ್ ಪಗರ್ ಎಂದು ಗುರುತಿಸಲ್ಪಟ್ಟ ದೇವಮಾನವ, ಡ್ರಮ್ ಬಾರಿಸುತ್ತಾ “ಅಲಖ್ ನಿರಂಜನ್, ಅಲಖ್ ನಿರಂಜನ್” ಎಂದು ಘೋಷಣೆ ಕೂಗುತ್ತಾ ವ್ಯಕ್ತಿಯೊಬ್ಬನ ಮೇಲೆ ಬಣ್ಣ ಎರಚುತ್ತಿರುವುದು ಕಂಡುಬರುತ್ತದೆ. ನಂತರ ಯುವಕನನ್ನು ಬಲವಂತವಾಗಿ ಎತ್ತಿ ಶೂನಿಂದ ಮೂಗಿಗೆ ಹೊಡೆಯುವ ದೃಶ್ಯ ವೈರಲ್ ಆಗಿದೆ.
ಜುಲೈ 17 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ರೆಕಾರ್ಡ್ ಮಾಡಲಾದ ವೀಡಿಯೊದಲ್ಲಿ, ‘ಬಾಬಾ’ ಎಂದು ಕರೆಯಲಾಗುವ ವ್ಯಕ್ತಿ, ಓರ್ವನನ್ನು ನೆಲದ ಮೇಲೆ ಮಲಗಿಸಲು ಒತ್ತಾಯಿಸುವುದು, ಆ ವ್ಯಕ್ತಿಯ ಕುತ್ತಿಗೆಯ ಮೇಲೆ ಕಾಲು ಒತ್ತುವುದು ಮತ್ತು ಹೊಟ್ಟೆಯ ಮೇಲೆ ಇಟ್ಟಿದ್ದ ಮರದ ಕೋಲಿನಿಂದ ಹೊಡೆಯುವುದನ್ನು ಕಾಣಬಹುದು.
ಈ ಘಟನೆಯನ್ನು ಛತ್ರಪತಿ ಸಂಭಾಜಿನಗರ ಮೂಢನಂಬಿಕೆ ವಿರೋಧಿ ಸಮಿತಿಯ ಗಮನಕ್ಕೆ ತರಲಾಯಿತು. ಕೂಡಲೇ ಅವರು ಗ್ರಾಮಕ್ಕೆ ತಲುಪಿ, ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.
ಅಂದಿನಿಂದ ಸ್ವಯಂ ಘೋಷಿತ ದೇವಮಾನವ ಕಾಣೆಯಾಗಿದ್ದಾನೆ. ಪೊಲೀಸರು ಎರಡು ತಂಡಗಳನ್ನು ರಚಿಸಿ ಹುಡುಕಾಟ ಆರಂಭಿಸಿದ್ದಾರೆ. ಮೂಢನಂಬಿಕೆಗಳನ್ನು ಬಿತ್ತರಿಸುವ ಯಾರನ್ನಾದರೂ ಬಿಡಲಾಗುವುದಿಲ್ಲ ಮತ್ತು ಕಠಿಣ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಸ್ಥಳೀಯ ಪೊಲೀಸರು ಎಚ್ಚರಿಸಿದ್ದಾರೆ.













