Home Breaking Entertainment News Kannada ಬಾಲ್ಯದಲ್ಲಿ ಕಟ್ಟಿಗೆ ಮೂಟೆ ಹೊತ್ತು ಭುಜಕ್ಕೆ ಶಕ್ತಿ ತುಂಬಿಕೊಂಡಿದ್ದ ಹುಡುಗಿಗೆ ಇಂದು ಒಲಿಂಪಿಕ್ಸ್ ನಲ್ಲಿ ಬೆಳ್ಳಿ...

ಬಾಲ್ಯದಲ್ಲಿ ಕಟ್ಟಿಗೆ ಮೂಟೆ ಹೊತ್ತು ಭುಜಕ್ಕೆ ಶಕ್ತಿ ತುಂಬಿಕೊಂಡಿದ್ದ ಹುಡುಗಿಗೆ ಇಂದು ಒಲಿಂಪಿಕ್ಸ್ ನಲ್ಲಿ ಬೆಳ್ಳಿ | ಉದ್ಯೋಗದ ಜೊತೆಗೆ ಒಂದು ಕೋಟಿ ಬಹುಮಾನ ಘೋಷಿಸಿದ ಮಣಿಪುರಿ ಸರ್ಕಾರ

Hindu neighbor gifts plot of land

Hindu neighbour gifts land to Muslim journalist

ಅಂದು ತನ್ನ ಮನೆಯ ಅಗತ್ಯಗಳಿಗಾಗಿ ಆಕೆ ಹೊತ್ತಿದ್ದು ಕಟ್ಟಿಗೆ. ಕಾಡು ಹೊಕ್ಕಿ, ಕಟ್ಟಿಗೆ ಕಡಿದು, ಬಾಲ್ಯದಲ್ಲಿ ಹೊತ್ತಿದ್ದ ಕಟ್ಟಿಗೆ ಮೂಟೆ ಈಗ ಭುಜಗಳಿಗೆ ಶಕ್ತಿ ತುಂಬಿತ್ತು. ಅದೇ ಕಾರಣಕ್ಕೆ ಆ ಪುಟಾಣಿ ದೇಹವು ಬರೊಬ್ಬರಿ 87 ಕೆಜಿ ತೂಕವನ್ನು ಸಲೀಸಾಗಿ ಎತ್ತಿ, ಇಂದು ಕ್ರೀಡಾಲೋಕದ ತೀರ್ಥಕ್ಷೇತ್ರ ಒಲಿಂಪಿಕ್ಸ್ ನಲ್ಲಿ ಬೆಳ್ಳಿಯ ಪದಕ ಎತ್ತಿ ಹಿಡಿದಿದ್ದಾಳೆ !

ಆಕೆಯ ಇವತ್ತಿನ ಸಾಧನೆಯ ಕಟ್ಟೆಗೆ ಕಟ್ಟಿಗೆಯೇ ಇಟ್ಟಿಗೆಯಾಗಿತ್ತು ಎಂಬ ವಿಷಯವನ್ನು ಆಕೆಯ ಅಣ್ಣನೇ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದು, ಬೆಳೆಯುವ ಸಿರಿಗಾಗಿ ಮೊಳಕೆಯಲ್ಲೇ ಪ್ರಾಕ್ಟಿಕಲ್ ತಯಾರಿ ನಡೆದಿತ್ತು ಎಂಬುದಕ್ಕೆ ಪುಷ್ಟಿ ಸಿಕ್ಕಂತಾಗಿದೆ.

ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮೀರಾಬಾಯಿ ಚಾನು ವೇಟ್‌ಲಿಫ್ಟಿಂಗ್‌ನಲ್ಲಿ ರಜತ ಪದಕ ಗಳಿಸಿದ ಹಿನ್ನೆಲೆಯಲ್ಲಿ ಮಣಿಪುರದ ಇಂಫಾಲದ ನಾಂಗೈ ಕಚ್ಚಿಂಗ್‌ನ ಅವರ ಮನೆಯಲ್ಲಿ ಕುಟುಂಬ ಸದಸ್ಯರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರ ಅಣ್ಣ ಬಿಯಾಂಟ್ ಮೀಟಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
“ಅಂದು ನಾವು ಮನೆಗೆ ಕಟ್ಟಿಗೆ ತರಲು ಹೋಗುತ್ತಿದ್ದಾಗ ಆಕೆ ಯಾರೂ ಎತ್ತಲಾಗದಷ್ಟು ಹೊರೆ ಹೊರುತ್ತಿದ್ದಳು. ನನ್ನ ತಂಗಿ ನನಗೂ ಎತ್ತಲಾಗದಷ್ಟು ಕಟ್ಟಿಗೆ ಹೊತ್ತುಕೊಂಡು ಬರುತ್ತಿದ್ದಳು. ಇಂದು ಆಕೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಪದಕ ತಂದುಕೊಟ್ಟಿರುವುದು ತುಂಬಾ ಸಂತೋಷ ಎನಿಸುತ್ತಿದೆ ಎಂದು ಸಂಭ್ರಮದಿಂದ ಹೇಳಿಕೊಂಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನ ಮೊದಲ ದಿನವೇ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಮೀರಾಬಾಯಿ ಚಾನುಗೆ ದೇಶಾದ್ಯಂತ ಸಾಕಷ್ಟು ಪ್ರಶಂಸೆಗಳ ಸುರಿಮಳೆ ಹರಿದುಬರುತ್ತಿದೆ. ಇದೀಗ ಮೀರಾಬಾಯಿ ಚಾನು ಸಾಧನೆಗೆ ತಲೆಬಾಗಿರುವ ಮಣಿಪುರ ಸರ್ಕಾರ ಮೀರಾಗೆ ಬಹುಮಾನವಾಗಿ 1 ಕೋಟಿ ರೂಪಾಯಿಗಳನ್ನು ಘೋಷಿಸಿದೆ.

ಮೀರಾಬಾಯಿ ಮಣಿಪುರ ಮೂಲದವರು. ರಾಜ್ಯಕ್ಕೆ ಕೀರ್ತಿ ತಂದುಕೊಟ್ಟ ಗೌರವಪೂರ್ವಕವಾಗಿ ಮಣಿಪುರ ಮುಖ್ಯಮಂತ್ರಿ ಎನ್. ಬೈರೆನ್ ಸಿಂಗ್ ಶನಿವಾರ ಒಂದು ಕೋಟಿ ಬಹುಮಾನ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯ ಸರ್ಕಾರವು ಮೀರಾಬಾಯಿಗೆ ಉದ್ಯೋಗ ನೀಡುವ ಭರವಸೆಯನ್ನು ನೀಡಿದೆ. ಪ್ರಸ್ತುತ ಮೀರಾಬಾಯಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಪದಕ ಗೆದ್ದ ಬಳಿಕ ಮೀರಾಬಾಯಿ ಜತೆ ಮಾತನಾಡಿದ ವಿಡಿಯೋವನ್ನು ಸಿಎಂ ಬೈರೆನ್ ಸಿಂಗ್ ಶೇರ್ ಮಾಡಿಕೊಂಡಿದ್ದು, ಇನ್ಮುಂದೆ ರೈಲು ನಿಲ್ದಾಣ ಮತ್ತು ರೈಲಿನಲ್ಲಿ ಟಿಕೆಟ್ ಸಂಗ್ರಹಿಸಬೇಕಾಗಿಲ್ಲ. ನಿನಗಾಗಿ ವಿಶೇಷ ಉದ್ಯೋಗವೊಂದನ್ನು ಕಾಯ್ದಿರಿಸಿದ್ದೇನೆ. ಆದರೆ, ಆ ಪೋಸ್ಟ್ ಯಾವುದು ಎಂದು ಹೇಳುವುದಿಲ್ಲ. ಸದ್ಯ ಅದು ರಹಸ್ಯವಾಗಿಯೇ ಇರಲಿದೆ. ಭಾರತಕ್ಕೆ ಬಂದಾಗ ಏನೆಂದು ತಿಳಿಯಲಿದೆ ಎಂದು ಬೈರೆನ್ ಸಿಂಗ್ ಹೇಳಿದ್ದಾರೆ.

ಹಾಗೆಯೇ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮೀರಾಬಾಯಿ ಅವರ ಐತಿಹಾಸಿಕ ಸಾಧನೆಯ ನಂತರ ತರಬೇತುದಾರ ವಿಜಯ್ ಶರ್ಮಾ ಅವರಿಗೆ 10 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದೆ.

26 ವರ್ಷದ ಮೀರಾಬಾಯಿ 49ಕೆ.ಜಿ ಭಾರ ಎತ್ತುವ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಒಟ್ಟು 20 ಕೆಜಿ (87 ಕೆಜಿ + 115 ಕೆಜಿ) ಭಾರ ಎತ್ತಿದರು. 2000ದಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಮ್ ಮಲ್ಲೇಶ್ವರಿ ಅವರು ಕಂಚಿನ ಪದಕವನ್ನು ಬೇಟೆಯಾಡಿದ್ದರು. ಅಂದಿನಿಂದ ಭಾರ ಎತ್ತುವ ಸ್ಪರ್ಧೆಯಲ್ಲಿ ಪದಕವು ಮರೀಚಿಕೆ ಆಗಿತ್ತು.

ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ದಿನವೇ ಪದಕ ಗೆಲ್ಲುವ ಮೂಲಕ ಮೀರಾಬಾಯಿ ಮಹತ್ತರ ಸಾಧನೆ ಮಾಡಿದ್ದಾರೆ. ಅಲ್ಲದೆ, ಇದುವರೆಗೂ ಭಾರತ ಒಲಿಂಪಿಕ್ಸ್‌ನ ಮೊದಲ ದಿನವೇ ಪದಕ ಬೇಟೆ ಆಡಿರಲಿಲ್ಲ. ಆದರೆ, ಮೀರಾಬಾಯಿ ಆ ಕೊರಗನ್ನು ನೀಗಿಸಿದ್ದಾರೆ. ಹಾಗೆಯೇ ಮೀರಾಬಾಯಿ ಅವರು ತನ್ನ ಗೆಲುವನ್ನು ದೇಶಕ್ಕೆ ಅರ್ಪಿಸಿದ್ದಾರೆ.

ಅದಲ್ಲದೆ ಮೀರಾಬಾಯಿ ಚಾನುಗೆ ಜೀವನಪೂರ್ತಿ ಉಚಿತವಾಗಿ ಪಿಝಾ ನೀಡುವುದಾಗಿ ಡೊಮಿನೊಸ್ ಇಂಡಿಯಾ ಘೋಷಿಸಿದೆ. ಹೀಗೆ ಹಲವು ಸಂಸ್ಥೆಗಳು ಬೇರೆ ಬರೆ ರೀತಿಯ ಬಹುಮಾನಗಳನ್ನು ಘೋಷಿಸಿವೆ.