

ಕೊಡಗು: ಜಿಲ್ಲೆಯ ಸಂಪಾಜೆ ಗೇಟ್ ಬಳಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರೊಂದು ರಿಕ್ಷಾಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಪರಿಣಾಮ ರಿಕ್ಷಾ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರನ್ನು ಸುಂದರ ಚಿಟ್ಟಿಕ್ಕಾನ ಎಂದು ಗುರುತಿಸಲಾಗಿದೆ.
ರಿಕ್ಷಾವು ಸಂಪಾಜೆ ಗೇಟ್‌ನಿಂದ ಚೆಡಾವು ಕಡೆಗೆ ಸಂಚರಿಸುತ್ತಿದ್ದಾಗ, ಕೊಡಗು ಸಂಪಾಜೆ ಪೆಟ್ರೋಲ್ ಪಂಪ್ ಬಳಿಯ ತಿರುವಿನಲ್ಲಿ ಅತಿವೇಗದಿಂದ ಬಂದ ಕಾರು ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಿಕ್ಷಾ ಚಾಲಕ ಸುಂದರ ಅವರು ಘಟನೆ ನಡೆದ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ರಿಕ್ಷಾದಲ್ಲಿದ್ದ ಮತ್ತೊಬ್ಬ ಪ್ರಯಾಣಿಕನಿಗೂ ಗಂಭೀರ ಗಾಯಗಳಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಎಸಗಿದ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.













