

ಬಾಲಿವುಡ್ ದಿವಂಗತ ನಟ ಸುಶಾಂತ ಸಿಂಗ್ ರಜಪೂತ್ ಕುಟುಂಬಕ್ಕೆ ಮತ್ತೊಂದು ಅಘಾತವಾಗಿದ್ದು, ರಸ್ತೆ ಅಪಘಾತವೊಂದರಲ್ಲಿ ಸುಶಾಂತ್ ಕುಟುಂಬದ ಐವರು ದುರ್ಮರಣ ಹೊಂದಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇಂದು ಮುಂಜಾನೆ ಸುಮಾರಿಗೆ ಬಿಹಾರದ ಲಖಿಸರಾಯ್ ಜಿಲ್ಲೆಯ ಪಿಪ್ರಾ ಗ್ರಾಮದ ಶೇಕ್ ಪುರ-ಸಿಕಂದ್ರ ರಸ್ತೆಯಲ್ಲಿ ಟ್ರಕ್ ಹಾಗೂ ಟಾಟಾ ಸುಮೋ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸುಶಾಂತ್ ಕುಟುಂಬದ ಐವರು ಮೃತಪಟ್ಟಿದ್ದು, ಉಳಿದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪಾಟ್ನಾದಲ್ಲಿ ನಡೆದ ಅಂತ್ಯಸಂಸ್ಕಾರ ವೊಂದಕ್ಕೆ ತೆರಳಿ ಮರಳುತ್ತಿದ್ದಾಗ ಯಮನಂತೆ ರಸ್ತೆಯಲ್ಲಿ ಬಂದ ಟ್ರಕ್ ಒಂದಕ್ಕೆ ಇವರಿದ್ದ ಟಾಟಾ ಸುಮೋ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಸುಮೋ ಚಾಲಕ ಸ್ಥಳದಲ್ಲೇ ಮೃತಪಟ್ಟರೆ ಉಳಿದವರು ಆಸ್ಪತ್ರೆಗೆ ಕೊಂಡೊಯ್ಯುವ ದಾರಿಮಧ್ಯೆ ಮೃತಪಟ್ಟಿದ್ದಾರೆ. ಮೃತರನ್ನು ಲಾಲ್ ಜೀತ್ ಸಿಂಗ್, ನೇಮಾನಿ ಸಿಂಗ್, ರಾಮ್ ಚಂದ್ರ ಸಿಂಗ್, ಬೇಬಿ ದೇವಿ,ಅನಿತಾ ದೇವಿ ಹಾಗೂ ಪ್ರೀತಮ್ ಕುಮಾರ್ ಎಂದು ಗುರುತಿಸಲಾಗಿದೆ.
ಸುಶಾಂತ್ ಸಿಂಗ್ ಮೃತಪಟ್ಟ ಬಳಿಕ ಅದು ಆತ್ಮಹತ್ಯೆಯಲ್ಲ ಕೊಲೆ ಎಂಬ ಹಲವು ಅನುಮಾನಗಳಿದ್ದು, ಸುಶಾಂತ್ ಮರಣದಿಂದ ತತ್ತರಿಸಿದ್ದ ಕುಟುಂಬಕ್ಕೆ ಇನ್ನೊಂದು ಆಘಾತವಾಗಿದೆ.ಒಂದೇ ಬಾರಿಗೆ ಐವರನ್ನು ಕಳೆದುಕೊಂಡ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಕುಟುಂಬಸ್ಥರ ರೋದನೆ ಮುಗಿಲುಮುಟ್ಟಿತ್ತು.













