ಸುಳ್ಯದಲ್ಲಿ ಬೆಳಕು ಪಡೆಯುವ ನೈಸರ್ಗಿಕ ಎಲೆ ಪತ್ತೆ | ಬತ್ತಿಯಂತೆಯೇ ಉರಿಯುತ್ತದೆಯಂತೆ ಈ ಎಲೆಯ ಚಿಗುರು

ಇಂದಿನ ಜಗತ್ತು ಅದೆಷ್ಟೇ ಮುಂದುವರಿದರೂ ನಮ್ಮ ಹಳೆಯ ಸಂಸ್ಕೃತಿ ಮಾತ್ರ ಮಾಸುವಂತಹುದು ಅಲ್ಲ.ಆಚಾರ-ವಿಚಾರದಿಂದ ಹಿಡಿದು ಪ್ರತಿಯೊಂದು ಕಾರ್ಯವು ಹಿಂದಿನ ಪೀಳಿಗೆಯಂತೆಯೇ ಇದೆ.ಮನೆ ಬೆಳಗೋ ದೀಪಕ್ಕೂ ಕೂಡ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಿದೆ.ಆದರೂ ಪುರಾತನ ಕಾಲದ ನೆನಪು ಮಾತ್ರ ಅಳಿಯುವುದಿಲ್ಲ .

ಹೌದು. ಇದೀಗ ನಾವು ಹೇಳಲು ಹೊರಟಿರುವುದು ಇಂತಹುದೇ ಒಂದು ವಿಷಯ.ಇಂದು ನಾವೆಲ್ಲ ನೆಲೆ ಊರಲು ಮನೆಯನ್ನು ನಿರ್ಮಿಸಿದ್ದೇವೆ. ಆದರೆ
ಹಿಂದಿನ ಕಾಲದಲ್ಲಿ ಕಾಡುಗಳಲ್ಲೇ ಜೀವನ ಸಾಗಿಸುತಿದ್ದರು.ಆಹಾರ ತಯಾರಿಕೆಗೆ,ಚಳಿಯಿಂದ ರಕ್ಷಿಸಲು ಕಲ್ಲಿನಿಂದ ಉಜ್ಜಿ ಬೆಂಕಿ ತಯಾರಿಸುತ್ತಿದ್ದರು ಎನ್ನುವುದು ಇತಿಹಾಸವಾಗಿದ್ದು. ಇದೀಗ ಹೀಗೆ ತಯಾರಿಸಿದ ಬೆಂಕಿಯನ್ನು ಬೆಳಕಾಗಿ ಉಪಯೋಗಿಸಲು ಬಳಸುತ್ತಿದ್ದ ಪ್ರಕೃತಿಯ ಮಡಿಲಲ್ಲಿ ಸಿಗುವ ಅಪರೂಪದ ಗಿಡವೊಂದು ಇದೀಗ ಪತ್ತೆಯಾಗಿದೆ.

ಸುಳ್ಯ ತಾಲೂಕಿನ ಪಂಜ ಎಂಬಲ್ಲಿ ಈ ಅಪರೂಪದ ಗಿಡ ಪತ್ತೆಯಾಗಿದೆ. ಪಂಜದ ಅಳ್ಪೆ ನಿವಾಸಿ ಜಿನ್ನಪ್ಪ ಎನ್ನುವವರ ರಬ್ಬರ್ ತೋಟದಲ್ಲಿ ಈ ಗಿಡ ಪತ್ತೆಯಾಗಿದ್ದು, ಈ ಗಿಡ ಜಿನ್ನಪ್ಪ ಅವರ ಗಮನಕ್ಕೆ ಬರಲೂ ಒಂದು ಕಾರಣವಿದೆ. ಬೆಳದಿಂಗಳ ರಾತ್ರಿಯಲ್ಲಿ ಈ ಗಿಡದ ಎಲೆಯ ಚಿಗುರುಗಳು ಪ್ರಕಾಶಮಾನವಾಗಿ ಮಿಂಚುತ್ತಿರುವುದನ್ನು ಗಮನಿಸಿದ್ದ ಜಿನ್ನಪ್ಪರು ಬೆಳಿಗ್ಗಿನ ಜಾವ ಈ ಗಿಡದ ಬಳಿ ಬಂದು ಪರಿಶೀಲನೆ ನಡೆಸಿದ್ದರು. ಆದರೆ ಯಾವುದೇ ರೀತಿಯ ವಿಶೇಷತೆಯನ್ನು ಅಂದು ಅವರು ಗಮನಿಸಿರಲಿಲ್ಲ. ಮತ್ತೆ ರಾತ್ರಿ ಸಂದರ್ಭದಲ್ಲಿ ಅದೇ ರೀತಿಯ ಹೊಳಪು ಆ ಗಿಡದ ಎಲೆಗಳ ಚಿಗುರುಗಳಿಂದ ಕಂಡು ಬಂದ ಹಿನ್ನಲೆಯಲ್ಲಿ ಯಾವುದೇ ಬೆಳಕಿನ ಅಂಶವಿರುವ ಗಿಡವಾಗಿರಬಹುದೆಂದು ತಿಳಿದುಕೊಂಡಿದ್ದಾರೆ.’

ಈ ಕಾರಣಕ್ಕೆ ಗಿಡದ ಚಿಗುರುಗಳನ್ನು ಮನೆಗೆ ಕೊಂಡೊಯ್ದು, ದೀಪಕ್ಕೆ ಎಣ್ಣೆ ಹಾಕಿ ಹತ್ತಿಯ ಬತ್ತಿ ಬದಲು ಈ ಚಿಗುರುಗಳನ್ನು ಎಣ್ಣೆಯಲ್ಲಿ ಅದ್ದಿ ಬೆಂಕಿ ಕೊಟ್ಟಿದ್ದಾರೆ. ಹತ್ತಿಯ ಬತ್ತಿಗಿಂತಲೂ ಪ್ರಕಾಶಮಾನವಾಗಿ ಈ ಎಲೆಯ ಚಿಗುರು ಉರಿಯುತ್ತಿರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ವಿಚಾರವನ್ನು ತಮ್ಮ ಪರಿಚಯವಿರುವ ಧಾರ್ಮಿಕ ಆಚರಣೆಯ ವ್ಯಕ್ತಿಯೊಬ್ಬರಲ್ಲಿ ತಿಳಿಸಿದಾಗ ಅವರು ಈ ಗಿಡದ ಬಗ್ಗೆ ಜಿನ್ನಪ್ಪರಿಗೆ ಮಾಹಿತಿ ನೀಡಿದ್ದಾರೆ. ಜಿನ್ನಪ್ಪ ಮಾಹಿತಿ ಪ್ರಕಾರ ಅಪರೂಪವಾಗಿ ಕಂಡ ಈ ಗಿಡ ‘ಪ್ರನತಿಪತ್ರ’ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಹತ್ತಿ ಅಥವಾ ಬಟ್ಟೆಯ ಬತ್ತಿಯನ್ನು ನಿರಂತರ ಒಂದೆರಡು ಗಂಟೆಗಳ ಕಾಲ ಉರಿಸಿದಲ್ಲಿ ಬತ್ತಿಯು ಕರಗಿ ಹೋದರೆ ಈ ಚಿಗುರು ಎಣ್ಣೆ ಹಾಕುತ್ತಿರುವವರೆಗೂ ನಿರಂತರವಾಗಿ ಉರಿಯುತ್ತದೆ. ಜಿನ್ನಪ್ಪರ ಪ್ರಕಾರ ಈ ಗಿಡ ಪತ್ತೆಯಾದ ಬಳಿಕ ಅವರ ಮೂಲ ಮನೆಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯ ಸಂದರ್ಭದಲ್ಲಿ ಇದೇ ಎಲೆಯ ಚಿಗುರುಗಳನ್ನು ಬತ್ತಿಯ ರೂಪದಲ್ಲಿ ಬಳಸಿಕೊಂಡಿದ್ದು, ಬೆಳಿಗ್ಗಿನಿಂದ ಸಂಜೆಯ ತನಕ ಇದು ನಿರಂತರ ಉರಿಯುವುದನ್ನು ಪರಿಶೀಲನೆ ನಡೆಸಿರುವುದಾಗಿಯೂ ಜಿನ್ನಪ್ಪರು ಹೇಳುತ್ತಾರೆ.

ಗಿಡವನ್ನು ಹತ್ತಿರದಿಂದ ಗಮನಿಸಿದ ಜಿನ್ನಪ್ಪರು,ಈ ಗಿಡದ ಕುರಿತು ಹಲವರ ಜೊತೆ ಮಾಹಿತಿ ಪಡೆದುಕೊಂಡಿದ್ದು, ಮಾನವ ಕಾಡಿನಲ್ಲಿ ಇರುವ ಸಂದರ್ಭದಲ್ಲಿ ಪ್ರಕೃತಿಯಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ತನ್ನ ಅವಶ್ಯಕತೆಗಳನ್ನು ಪೂರೈಸುತ್ತಿದ್ದ. ಇಂಥಹ ಅವಶ್ಯಕತೆಗಳಲ್ಲಿ ಈ’ ಪ್ರಣತಿಪತ್ರ ‘ ಗಿಡವೂ ಆಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಲ್ಲುಗಳನ್ನು ಉಜ್ಜಿ ಬೆಂಕಿ ತಯಾರಿಸುತ್ತಿದ್ದ ಜನ, ಕಾಡಿನಲ್ಲೇ ಸಿಗುವ ಪುಂಡಿ ಮರ ಎನ್ನುವ ಮರದಿಂದ ಸಿಗುವ ಕಾಯಿಯನ್ನು ಬಳಸಿಕೊಂಡು ಎಣ್ಣೆಯನ್ನು ಪಡೆಯುತ್ತಿದ್ದು, ಈ ಗಿಡದ ಎಲೆಯ ಚಿಗುರುಗಳನ್ನು ಬತ್ತಿಯಾಗಿ ಬಳಸಿಕೊಂಡು ರಾತ್ರಿ ಕಳೆಯುತ್ತಿದ್ದರು. ಅತ್ಯಂತ ಅಪರೂಪವಾಗಿ ಕಾಣಸಿಗುವ ಈ ಗಿಡ ಜಿನ್ನಪ್ಪರ ತೋಟದಲ್ಲಿ ಸುರಕ್ಷಿತವಾಗಿದ್ದು, ಈ ಬಾರಿಯ ದೀಪಾವಳಿಯಲ್ಲಿ ದೀಪಗಳನ್ನು ಇದೇ ಎಲೆಯ ಚಿಗುರುಗಳನ್ನು ಬಳಸಿ ಉರಿಸಲಿದ್ದಾರೆ.

Leave A Reply

Your email address will not be published.