ಮೂರು ವರ್ಷ ಹಿಂದಷ್ಟೇ ನಿರ್ಮಿಸಿದ ಕೆಂಪೇಗೌಡ ಪಾರ್ಕ್ನ ಕೋಟೆ ಗೋಡೆ ಕುಸಿತ!!|ಕಳಪೆ ಕಾಮಗಾರಿಯೇ ಕಾರಣ ಎಂದು ಸಿಡಿದೆದ್ದ ಸ್ಥಳೀಯರು
ಬೆಂಗಳೂರು: ಕೇವಲ 3 ವರ್ಷಗಳ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಮಿಸಿದ್ದ ಗೋಡೆಯೊಂದು ಎಡೆಬಿಡದೆ ಸುರಿಯುತ್ತಿರುವ ಮಹಾ ಮಳೆಗೆ ಕುಸಿದಿದೆ.
ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ವಾರ್ಡ್ ನಂ 13 ಮಲ್ಲಸಂದ್ರದಲ್ಲಿರುವ ಕೆಂಪೇಗೌಡ ಪಾರ್ಕ್ನಲ್ಲಿ ಕಳಪೆ ಕಾಮಗಾರಿಯಿಂದ 25 ಅಡಿ ಎತ್ತರದ ಕೋಟೆಯ ಗೋಡೆ ಕುಸಿದಿದೆ.ಸರ್ವೆ ನಂಬರ್ 33ರಲ್ಲಿ, 7 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಕೆಂಪೇಗೌಡ ಬೃಹತ್ ಪಾರ್ಕ್ ಇದಾಗಿದ್ದು, ಪಾರ್ಕ್ನಲ್ಲಿ ಆಡಿಟೋರಿಯಂ, ಪ್ರತಿಮೆಗಳು ಸೇರಿದಂತೆ 24 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು BBMP ಕೈಗೊಂಡಿತ್ತು.
ಕೆಂಪೇಗೌಡ ಪಾರ್ಕ್ ನಲ್ಲಿ ಕೋಟೆಯ ಪಶ್ಚಿಮ ದಿಕ್ಕಿನ ಗೋಡೆ ಕುಸಿದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ. ಗೋಡೆ ಸಡಿಲಗೊಂಡು ಮತ್ತಷ್ಟು ಬಿದ್ದರೆ ಬಯಲು ರಂಗಮಂದಿರಕ್ಕೆ ತೊಂದರೆಯಾಗುವುದು ಖಚಿತ ಎನ್ನಲಾಗಿದೆ.
ಪಾರ್ಕ್ಗಾಗಿ BBMPಗೆ ಜಮೀನು ಇನ್ನೂ ಹಸ್ತಾಂತರವಾಗಿಲ್ಲ. ಆದರೂ KRIDL ಯೋಜನೆ ಅಡಿ ಅಭಿವೃದ್ದಿ ಕಾಮಗಾರಿ ನಿರ್ಮಾಣವಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲಿ (29/08/2020) ಸ್ಥಳೀಯ ಜನಪ್ರತಿನಿಧಿಗಳ ವಿರೋಧದ ನಡುವೆ ಪಾರ್ಕ್ ಉದ್ಘಾಟನೆಯಾಗಿತ್ತು. ಪ್ರತಿಭಟನೆ ಮಾಡುತ್ತಿದ್ದವರನ್ನ ಬಂಧಿಸಲಾಗಿತ್ತು. ಇದರ ನಡುವೆಯೇ ಬಿಜೆಪಿ ಸಂಸದ ಸದಾನಂದ ಗೌಡ, ಬಿಜೆಪಿ ಕಾರ್ಪೊರೇಟ್ ಲೋಕೇಶ್ ನೇತೃತ್ವದಲ್ಲಿ ಪಾರ್ಕ್ ಉದ್ಘಾಟನೆ ಶಾಸ್ತ್ರ ಮುಗಿದಿತ್ತು.
ಆಗಿನ ಕಾರ್ಪೊರೇಟರ್ ಲೋಕೇಶ್ ಟೆಂಡರ್ ಕರೆಯದೆ ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ. ತಮ್ಮ ಬೇನಾಮಿ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಎಂಬ ಗಂಭೀರ ಅರೋಪ ಕೇಳಿಬಂದಿತ್ತು. ಇದೀಗ ಹೀಗೆ ಕಟ್ಟಿದ ಗೋಡೆಗಳೇ ಮೂರೇ ವರ್ಷಕ್ಕೆ ಕುಸಿಯುತ್ತಿದೆ. ನಿರಂತರವಾಗಿ ಅವಘಡಗಳು ಸಂಭವಿಸುತ್ತಲೇ ಇದೆ. ಇದಕ್ಕೆ ಹೊಣೆ ಯಾರು ಎಂದು ಸ್ಥಳೀಯರು ಕಿಡಿಕಿಡಿಯಾಗಿದ್ದಾರೆ.