ಪುತ್ತೂರಿನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಮಾನವನ್ನೇ ಹೋಲುವ ಬೃಹತ್ ಆಕಾರದ ಕುಲೆ!! ಅತೀ ವಿರಳ,ವಿಶೇಷವಾದ ಕುಲೆ ಕಂಡು ಅರೆಕ್ಷಣ ತಬ್ಬಿಬ್ಬಾದ ಜನ
ಪುತ್ತೂರಿನಲ್ಲಿ ಇದ್ದಕ್ಕಿದ್ದಂತೆ ಕುಲೆಯೊಂದು ಪ್ರತ್ಯಕ್ಷವಾಗಿ ಕೆಲ ಕಾಲ ನೋಡುಗರನ್ನು ಅಚ್ಚರಿಯ ಜೊತೆಗೆ ಖುಷಿಯ ಅಲೆಯಲ್ಲಿ ತೇಲಿಸಿದ ಘಟನೆಯೊಂದು ನವರಾತ್ರಿಯಲ್ಲಿ ನಡೆದಿದ್ದು, ಸದ್ಯ ಕುಲೆಯ ಫೋಟೋ, ವೀಡಿಯೋ ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಕುಲೆ ಕಂಡ ನೆಟ್ಟಿಗರು ಖುಷಿಯ ಜೊತೆಗೆ ಕುಲೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೌದು. ನವರಾತ್ರಿಯಂದು ವಿಧ ವಿಧವಾದ ಹಲವು ವೇಷಗಳು ಕಾಣಸಿಗುವುದು ಸಾಮಾನ್ಯ. ಅಂತೆಯೇ ಪುತ್ತೂರಿನಲ್ಲಿ ವಿಚಿತ್ರವಾದ ಹಾಗೂ ಅತಿವಿರಳ ವಿಶೇಷವಾದ ಕುಲೆಯ ವೇಷವೊಂದು ಎಲ್ಲರ ಕಣ್ಮನ ಸೆಳೆದಿದ್ದು, ಕುಲೆಯ ರುವಾರಿ ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಕೆಮ್ಮಾಯಿ ನಿವಾಸಿ ದಿವಾಕರ್ ದೇವಾಡಿಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ.
ಸತತವಾಗಿ 13 ವರ್ಷಗಳಿಂದ ವೇಷ ಧರಿಸುತ್ತಿರುವ ಇವರು ಪುತ್ತೂರಿನ ಆಸುಪಾಸಿನಲ್ಲಿ ಬಹಳ ಫೇಮಸ್ ಆಗಿಬಿಟ್ಟಿದ್ದಾರೆ. ನವರಾತ್ರಿಯ ಸಂದರ್ಭ ಕುಲೆಯ ವೇಷ ಧರಿಸಿ ಗಮನ ಸೆಳೆವ ದಿವಾಕರ್ ಕಳೆದೆರಡು ವರ್ಷ ಅನುಮತಿ ಸಿಗದಿದ್ದ ಕಾರಣ ವೇಷ ತೊಟ್ಟಿರಲಿಲ್ಲ.ಈ ಬಾರಿ ದೇವರ ದಯೆ, ಜನರ ಪ್ರೀತಿ ಮತ್ತೆ ನನ್ನನ್ನು ವೇಷ ಹಾಕಲು ಅವಕಾಶ ಕಲ್ಪಿಸಿದ್ದು, ಜನರನ್ನು ಮನರಂಜಿಸಿ ಅದರಲ್ಲಿ ಖುಷಿ ಕಾಣುವ ಇವರ ಗುಣ ಪುತ್ತೂರಿನ ಜನತೆಗೆ ಹೆಚ್ಚು ಹಿಡಿಸಿದೆ ಎಂದರೆ ತಪ್ಪಾಗದು. ಒಟ್ಟಾರೆಯಾಗಿ ಕಳೆದೆರಡು ವರ್ಷಗಳಿಂದ ಕುಲೆ ಕಾಣದೆ ಬೇಸತ್ತಿದ್ದ ಜನತೆ ಈ ಬಾರಿ ದಿವಾಕರಣ್ಣನ ಕುಲೆ ಕಂಡು ಸಂತೋಷಗೊಂಡರು. ಈ ಸಲ ಕುಲ ಪುತ್ತೂರು ಪೇಟೆ ತುಂಬಾ ತಿರುಗಿದೆ. ಈ ವರೆಗೆ ಕುಲೆಯ ಬಗ್ಗೆ ಕೇಳಿ ಮಾತ್ರ ತಿಳಿದಿದ್ದ ಜನ, ಈಗ ಕುಲೆಯನ್ನು ಕಣ್ಣಾರೆ ನೋಡುವ ಅವಕಾಶ ಸಿಕ್ಕಿದ್ದಕ್ಕೆ ಕುಷಿಯಾಗಿದ್ದಾರೆ. ತುಳುನಾಡ ನಂಬಿಕೆಗೆ ಈಗ ದೃಶ್ಯ ರೂಪ ಸಿಕ್ಕಿದೆ. ಕುಲೆಯ ಮೂಲಕ ಕಲೆಯ ವಿಶಿಷ್ಟ ದರ್ಶನ ಮಾಡಿಸಲಾಗಿದೆ.