ಮುಂಜಾವಿನಿಂದ ಬಿಸಿಲೇರಿದ್ದ ಇಳೆಗೆ ಸಂಜೆಯಾಗುತ್ತಲೇ ಮಳೆರಾಯನ ಆಗಮನ!!
ಎಲ್ಲೆಡೆ ಸುರಿದ ಭೀಕರ ಮಳೆಯಿಂದಾಗಿ ಹಲವೆಡೆ ಹಾನಿ,ಸಂಚಾರಕ್ಕೆ ತೊಡಕು
ಮುಂಜಾನೆಯಿಂದ ಬಿಸಿಲೇರಿದ್ದ ಇಳೆಗೆ ಸೂರ್ಯನ ಕಿರಣ ಮರೆಯಾಗುತ್ತಲೇ ಮಳೆರಾಯನ ಆಗಮನವಾಗಿದೆ. ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದ್ದು, ಇಂದು ಸಂಜೆಯಾಗುತ್ತಲೇ ಎಲ್ಲಾ ಕಡೆಗಳಲ್ಲೂ ಮಳೆರಾಯಣ ರೌದ್ರಾವತಾರ ಕಂಡುಬಂದಿದೆ .
ಸಿಡಿಲು,ಗುಡುಗು,ಗಾಳಿ ಸಹಿತ ಭಯಂಕರ ಮಳೆಯಾಗಿದ್ದು,ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲೂ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ. ಕೆಲ ಕಡೆಗಳಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತೊಡಕುಂಟಾಗಿದ್ದು, ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಸಮಸ್ಯೆಗಳಾಗಿವೆ.ಇನ್ನೂ ಕೆಲ ಕಡೆಗಳಲ್ಲಿ ಕೃಷಿ ತೋಟಕ್ಕೆ ನೀರು ನುಗ್ಗಿದ ಪ್ರಸಂಗವೂ ನಡೆದಿದೆ.
ಸಂಜೆಯಾಗುತ್ತಲೇ ಎಲ್ಲೆಡೆ ಕತ್ತಲು ಆವರಿಸಿ ಮಳೆರಾಯನ ಆಗಮನವಾಗುತ್ತಿದ್ದಂತೆ ಅಂಗಳದಲ್ಲಿ ಒಣಹಾಕಿದ್ದ ಅಡಿಕೆಯನ್ನು ಚೀಲಕ್ಕೆ ತುಂಬಿಸುವ ಮಂದಿ ಒಂದೆಡೆ ಕಂಡರೆ,ಮಳೆಯನ್ನೂ ಲೆಕ್ಕಿಸದೇ ತೋಟಕ್ಕೆ ತೆರಳಿ ನೀರಿನಲ್ಲಿ ಆಟವಾಡುವ ಕೆಲವರು ಕಂಡುಬಂದಿದ್ದಾರೆ.ಇನ್ನೂ ಹಲವರ ವಾಟ್ಸಪ್ ಸ್ಟೇಟಸ್ ಗಳಲ್ಲಿ ಮಳೆರಾಯನ ವೀಡಿಯೋ, ಫೋಟೋ ಸಹಿತ ಮಳೆಯ ಬಗೆಗೆ ಕೆಲವೊಂದು ಬರಹಗಳು ಕಂಡುಬಂದಿದೆ.