ಕಡಬ:ಮನೆಯಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿ ಠಾಣೆಯಲ್ಲಿ ಬಂದು ಕೈ ತೊಳೆದ!! ಅಷ್ಟಕ್ಕೂ ಆತ ಅಲ್ಲಿಗೆ ಬಂದಿದ್ದು ಹೇಗೆ?ತಮಾಷೆಗೆ ಕಾರಣವಾದ ಆ ಘಟನೆ ಇಲ್ಲಿದೆ

Share the Article

ಅವಸರವಸರದಲ್ಲಿ ತುರ್ತಾಗಿ ನಡೆಯುವ ಕೆಲ ಘಟನೆಗಳು ಕೆಲವೊಮ್ಮೆ ತಮಾಷೆಗೂ ಕಾರಣವಾಗುತ್ತದೆ. ಉದಾಹರಣೆಗೆ ಕೆಲವೊಂದು ನಾಯಕರು ರೋಷದಲ್ಲಿ ಮಾಡುವ ಭಾಷಣ, ವೇಗವಾಗಿ ಹೇಳಿಬಿಡಬೇಕು ಎನ್ನುವ ಭರದಲ್ಲಿ ಎಡವಟ್ಟು, ಇಂತವುಗಳೆಲ್ಲವೂ ಅನೇಕಬಾರಿ ತಮಾಷೆಗೂ ದಾರಿ ಮಾಡಿಕೊಡುತ್ತವೆ. ಅಂತಹ ಘಟನೆಗಳಿಗೆ ಕಡಬ ಠಾಣೆಯಲ್ಲಿ ಆ ರಾತ್ರಿ ನಡೆದ ಅದೊಂದು ಘಟನೆ ಉದಾಹರಣೆಯಾಗಿದೆ.

ಮಹಿಳೆಯೊಬ್ಬರು ಕಡಬ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದರ ಪರಿಣಾಮ,ಪ್ರಕರಣದ ಆರೋಪಿಯನ್ನು ಬಂಧಿಸಲು ರಾತ್ರಿವೇಳೆ ಪೊಲೀಸರು ಆತನಿದ್ದ ಬಾಡಿಗೆ ಮನೆಗೆ ತೆರಳುತ್ತಾರೆ. ಪೊಲೀಸರು ಬಂದಾಗ ಗದರಿಸುವುದು ಸಾಮಾನ್ಯ, ಹೀಗೆ ಆ ಆರೋಪಿಗೆ ಗದರಿಸಿದ ಬೊಬ್ಬೆಗೆ ಅದೇ ಸಂಕೀರ್ಣದಲ್ಲಿದ್ದ ಇನ್ನೊಂದು ಬಾಡಿಗೆ ಮನೆಯ ವ್ಯಕ್ತಿ ಬಂದು ಇಣುಕಿ ನೋಡುತ್ತಾನೆ.

ಈ ಸಂದರ್ಭ ಓರ್ವ ಸಿಬ್ಬಂದಿ, ಇಣುಕಿ ನೋಡುತ್ತಿದ್ದ ಆ ವ್ಯಕ್ತಿಯನ್ನೂ ಜೀಪು ಹತ್ತಲು ತಿಳಿಸಿದ್ದಾರೆ ಎನ್ನಲಾಗಿದ್ದು, ಆ ವ್ಯಕ್ತಿ ಸರಕ್ಕನೆ ಬಂದು ಜೀಪು ಏರಿ ಕುಳಿತಿದ್ದಾನೆ.ಇಬ್ಬರನ್ನೂ ಜೀಪಿನಲ್ಲಿ ಠಾಣೆಗೆ ಕರೆತಂದ ಪೊಲೀಸರಿಗೆ ಅಲ್ಲಿ ನೈಜತೆ ಅರಿವಾಗಿದೆ.

ಪ್ರಕರಣದಲ್ಲಿ ಬಂಧಿಸಬೇಕಾದ ವ್ಯಕ್ತಿಯ ಜೊತೆಗೆ, ಪ್ರಕರಣಕ್ಕೆ ಸಂಬಂಧ ಪಡದ ವ್ಯಕ್ತಿಯನ್ನು ಕರೆದುಕೊಂಡು ಬಂದಿದ್ದೇವೆ ಎಂಬುವುದು ಕೊಂಚ ತಡವಾದರೂ ಗಮನಕ್ಕೆ ಬಂದಿದೆ. ಆ ಬಳಿಕ ಆ ವ್ಯಕ್ತಿಯನ್ನು ತೆರಳಲು ಸೂಚಿಸಿದ್ದು, ಪೊಲೀಸರು ಕರೆಯುವ ವೇಳೆ ಮನೆಯಲ್ಲಿ ಊಟ ಮಾಡುತ್ತಿದ್ದ ಆ ವ್ಯಕ್ತಿ ಅವಸರದಲ್ಲಿ ಕೈ ತೊಳೆಯದೇ ಬಂದಿದ್ದರಿಂದ ಠಾಣೆಯಲ್ಲಿ ಕೈ ತೊಳೆದು ಆ ಬಳಿಕ ನಡೆದುಕೊಂಡು ಮನೆ ತಲುಪಿದ್ದಾನೆ.ಒಟ್ಟಿನಲ್ಲಿ ಊಟದ ತಟ್ಟೆ ಮನೆಯಲ್ಲಿ ತೊಳೆದರೆ, ಊಟ ಮಾಡಿದ ಕೈ ಠಾಣೆಯಲ್ಲಿ ತೊಳೆದ ಘಟನೆ ಎಲ್ಲೆಡೆ ತಮಾಷೆಗೆ ಕಾರಣವಾಗುವ ಜೊತೆಗೆ ಪೊಲೀಸರ ಬೇಜವಾಬ್ದಾರಿ ವರ್ತನೆ ಆಕ್ರೋಶಕ್ಕೂ ಕಾರಣವಾಗಿದೆ.

Leave A Reply