ಅವಿಭಕ್ತ ಕುಟುಂಬ ಸಮೇತ ನಾಡಿಗೆ ಬಂದ ಕಾಡುಕೊಣಗಳು | 50 ಕ್ಕೂ ಅಧಿಕ ಕೋಣಗಳ ಗುಟುರಿಗೆ ನಾಶವಾದ ಕಾಫಿ, ಮೆಣಸು
ಚಿಕ್ಕಮಗಳೂರು: ಆನೆಗಳ, ಚಿರತೆ, ಕರಡಿ ಕಾಡಿನಿಂದ ನಾಡಿಗೆ ಬಂದು ಧಾಂಗುಡಿ ಇಡುತ್ತಿರುವ ಸುದ್ದಿಗಳನ್ನು ಆಗಾಗ ಓದುತ್ತಲೇ ಇದ್ದೇವೆ. ಇವುಗಳ ನಡುವೆ ಇದೀಗ ಕಾಡುಕೋಣಗಳ ದೊಡ್ಡ ಹಿಂಡು ಕಾಫಿ ಎಸ್ಟೇಟ್‌ವೊಂದರಲ್ಲಿ ಕಾಣಿಸಿಕೊಂಡು ಕಾಫಿ ಬೀಜಗಳ ಸವಿ ಉಂಡು, ಮೆಣಸಿಗೆ ಬಾಯಿ ಖಾರ ನಾಲಿಗೆ ಮಾಡಿಕೊಂಡು ನಿಂತಿವೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭೂತನಕಾಡು ಎಂಬಲ್ಲಿನ ಕಾಫಿ ಎಸ್ಟೇಟ್‌ನಲ್ಲಿ ಏಕಾಏಕಿ ಕಾಡುಕೋಣಗಳ ಅವಿಭಕ್ತ ಕುಟುಂಬ ಒಂದು ಪ್ರತ್ಯಕ್ಷವಾಗಿದೆ. ಒಂದೇ ಕಡೆಯಲ್ಲಿ ಸುಮಾರು 50 ಕ್ಕೂ ಅಧಿಕ ವಿಭಿನ್ನ ಸೈಜಿನ ಕಾಡುಕೋಣಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿತ್ತು. ಆದ್ರೆ ಬೆಳೆಗಾರರು ಮಾತ್ರ ಗಾಬರಿಗೊಂಡಿದ್ದಾರೆ.
ಅಲ್ಲಿನ ಸಿದ್ದಗಂಗಾ ಎಂಬ ಕಾಫಿ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡ ಕಾಡುಕೋಣಗಳಿಂದಾಗಿ ಕಾರ್ಮಿಕರು ಆತಂಕಗೊಂಡಿದ್ದಾರೆ. ಅಷ್ಟು ದೊಡ್ಡ ಕಾಡುಕೋಣಗಳ ಕೂಟದಿಂದಾಗಿ, ತೋಟದಲ್ಲಿ ಕಾಫಿ ಹಾಗೂ ಮೆಣಸು ಬೆಳೆಗಳಿಗೆ ಹಾನಿ ಸಂಭವಿಸಿದೆ. ಕೋಣಗಳ ತುಳಿತಕ್ಕೆ ಗಿಡಗಳು ನಾಶವಾಗಿವೆ. ಈ ನಡುವೆ ನಾಡಿನ ಅಂಚಿಗೆ ಬಂದ ಕೋಣಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯ ಶುರುವಾಗಿದೆ. ಅವುಗಳನ್ನು ಕಾಡಿಗೆ ಮರಳಿಸುವ ಪ್ರಯತ್ನಗಳೂ ನಡೆಯುತ್ತಿದ್ದರೂ, ಸಣ್ಣ ಪಟ್ಟಿಗೆ ಜಗ್ಗದೆ ಅವುಗಳು ಪುಂಡಾಟ ಪ್ರದರ್ಶಿಸುತ್ತಿವೆ.