ಶಾಸಕ ಪತ್ರಿಕೆಯ ಸಂಪಾದಕ ಶಂಕರ್ ರ ಇಡೀ ಕುಟುಂಬ ಆತ್ಮಹತ್ಯೆಗೆ ಶರಣು | ಶವಗಳ ಮಧ್ಯೆಯೇ ಉಳಿದು ನಾಲ್ಕು ದಿನಗಳ ನಂತರ ಬದುಕಿ ಬಂದಿತ್ತು 3 ವರ್ಷದ ಮಗು !

Share the Article

ಶಾಸಕ ಪತ್ರಿಕೆಯ ಸಂಪಾದಕ ಹಲ್ಲೆಗೆರೆ ಶಂಕರ್ ಅವರ ಕುಟುಂಬದ ಎಲ್ಲಾ ಐವರು ಆತ್ಮಹತ್ಯೆಗೆ ಶರಣಾಗಿರುವ ಧಾರುಣ ಘಟನೆ ನಡೆದಿದೆ.

ಬೆಂಗಳೂರಿನ ಬ್ಯಾಡರಹಳ್ಳಿಯ 4ನೇ ಕ್ರಾಸ್ ನಲ್ಲಿರುವ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಇಲ್ಲದ ವೇಳೆ ಈ ದುರ್ಘಟನೆ ನಡೆದಿದೆ.
ಸಂಪಾದಕರ ಪತ್ನಿ 50 ವರ್ಷದ ಭಾರತಿ, 27 ವರ್ಷದ ಮಗ ಮಧು ಸಾಗರ್, ಹೆಣ್ಣುಮಕ್ಕಳಾದ 33 ವರ್ಷದ ಸಿಂಚನಾ ಮತ್ತು 30 ವರ್ಷದ ಸಿಂಧುರಾಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದಕ್ಕೂ ಹೆಚ್ಚಿನ ಕಳವಳಕಾರಿ ಸಂಗತಿ ಏನೆಂದರೆ, ಆತ್ಮಹತ್ಯೆಗೆ ಮುನ್ನ 9 ತಿಂಗಳ ಮಗುವನ್ನು ಆ ಕ್ರೂರಿಗಳು ಕತ್ತುಹಿಸುಕಿ ಕೊಂದು ಹಾಕಿದ್ದಾರೆ. ಹೀಗೆ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಐದು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಿಂದ ಯಾರೂ ಹೊರಗಡೆ ಬರದಿರುವುದನ್ನು ಗಮನಿಸಿದ ಸ್ಥಳೀಯರು ಶುಕ್ರವಾರ ಸಂಜೆ ಮನೆಯ ಕಿಟಕಿ ಗಾಜನ್ನು ಹೊಡೆದು ನೋಡಿದಾಗ ಪ್ರಕರಣ ಬಯಲಿಗೆ ಬಂದಿದೆ.

ಆದರೆ ಈ ಭಯಾನಕ ಘಟನೆಯ ಮಧ್ಯೆ ಮಗುವೊಂದು ಪವಾಡ ಸದೃಶ್ಯ ರೀತಿಯಲ್ಲಿ ಬದುಕಿ ಬಂದಿದೆ. ಸಂಪಾದಕ ಹಲಗೆರೆ ಶಂಕರ್ ಅವರ ಪುತ್ರಿ, ಮೃತ ಸಿಂಚನಾಳ 3 ವರ್ಷದ ಕಂದಮ್ಮ ಪ್ರೇಕ್ಷಾ ನಾಲ್ಕೈದು ದಿನಗಳಿಂದ ಮೃತದೇಹಗಳ ನಡುವೆಯೇ ಉಳಿದಿದ್ದಾಳೆ. ನೀರು, ಅನ್ನಆಹಾರ ಇಲ್ಲದೆ ಶವಗಳ ಮಧ್ಯೆ ಪರದಾಡುತ್ತಾ ಮಗು ನಿತ್ರಾಣಗೊಂಡು ಮಲಗಿತ್ತು. ಅಲ್ಲಿ ಅತ್ತು ಅತ್ತು ಸೋತು ಮಲಗಿದ್ದ ಅಸಹಾಯಕ ಮಗುವನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Leave A Reply