ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮೈಸೂರು ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ| ಘಟನೆ ನಡೆದು 86 ಗಂಟೆಗಳ ಬಳಿಕ ಆರೋಪಿಗಳು ಪೊಲೀಸರ ವಶಕ್ಕೆ!
ರಾಜ್ಯಾದ್ಯಂತ ಸದ್ದು ಮಾಡಿದ್ದ, ದೆಹಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣವನ್ನು ಹೋಲುವಂತಹ ಮೈಸೂರು ಕಾಲೇಜು ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದ್ದು ಸುಮಾರು 80 ಜನರಿದ್ದ ಪೊಲೀಸರ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಘಟನೆ ವಿವರ:ಆಗಸ್ಟ್ 24ರ ರಾತ್ರಿ. ತನ್ನ ಸ್ನೇಹಿತನೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮೋರಿಯ ಮೇಲೆ ಕುಳಿತಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಪಾನಮತ್ತರಾಗಿದ್ದ ಕಾಮುಕರ ದೃಷ್ಟಿ ಬಿದ್ದಿದ್ದು,ತಂಡವು ಆಕೆಯ ಮೇಲಿರಗಿ ಸಾಮೂಹಿಕ ಅತ್ಯಾಚಾರ ನಡೆಸಿ, ಪ್ರಿಯಕರನಿಗೆ ಗಂಭೀರ ಹಲ್ಲೆ ನಡೆಸಿ, ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡಿದ್ದೂ, ಈ ಘಟನೆಯು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಈ ಘಟನೆ ಬಗ್ಗೆ ಗೃಹ ಸಚಿವರು ಮೈಸೂರಿಗೆ ತೆರಳಿ ಇಲಾಖೆಗೆ ಪ್ರಕರಣದ ತನಿಖೆ ಚುರುಕು ಗೊಳಿಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ಘಟನೆ ನಡೆದು 86 ಗಂಟೆಗಳ ಬಳಿಕ ಪೊಲೀಸರ ಮಹತ್ವದ ಕಾರ್ಯಾಚರಣೆಯು ಇದೀಗ ಕೀಚಕರರು ಬಲೆಗೆ ಬೀಳುವಂತೆ ಮಾಡಿದೆ.ಸುಮಾರು 80 ಕ್ಕೂ ಹೆಚ್ಚು ಜನ ಪೊಲೀಸರ ತಂಡವು ಘಟನೆ ನಡೆದ ದಿನದಿಂದ ಇಂದಿನ ವರೆಗೆ ನಿದ್ದೆಯಿಲ್ಲದೆ,ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳು ಘಟನೆ ನಡೆದ ಬಳಿಕ ರಾಜ್ಯ ಬಿಟ್ಟು ಹೊರರಾಜ್ಯಗಳಿಗೆ ತೆರಳಿದ್ದು,ಸಂತ್ರಸ್ತೆಯ ಹೇಳಿಕೆಯನ್ನು ಆಧಾರಿಸಿ ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳ ಮೂಲಕ ಆರೋಪಿಗಳನ್ನು ಗುರುತಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಮೂಲಕ ಕೃತ್ಯ ನಡೆಸಿದ ಕಾಮುಕರೆಲ್ಲರೂ ಪೊಲೀಸರ ವಶವಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಪ್ರಕರಣ ಸಂಬಂಧ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಡಿಜಿಪಿ ಪ್ರವೀಣ್ ಸೂದ್, ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಸುಳಿವು ಸಿಕ್ಕರೂ, ಸಾಕ್ಷ್ಯ ನಾಶ ಹಾಗೂ ಇನ್ನಿತರ ಚಟುವಟಿಕೆಗಳು ನಡೆಯುವುದನ್ನು ತಪ್ಪಿಸಲು ಸದ್ಯಕ್ಕೆ ಇಲಾಖೆ ಯಾವುದನ್ನೂ ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಆರೋಪಿಗಳು ಪತ್ತೆಯಾದ ತಕ್ಷಣ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ. ಈ ಪ್ರಕರಣದ ಕುರಿತು ಗಂಭೀರ ತನಿಖೆ ನಡೆಯುತ್ತಿದೆ. ಘಟನಾ ಸ್ಥಳದಿಂದ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂತ್ರಸ್ತೆ ಮಾನಸಿಕ ಸ್ಥಿತಿ ಸರಿ ಇಲ್ಲ. ಹುಷಾರಾದ ಬಳಿಕ ಮಾಹಿತಿ ನೀಡುವುದಾಗಿ ಸಂತ್ರಸ್ತೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.