ಸಂಚಾರಕ್ಕೆ ಮುಕ್ತವಾಗಿದೆ ಶಿರಾಡಿ ಘಾಟ್ ರಸ್ತೆ | ಲಘು ಸಹಿತ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಜಿಲ್ಲಾಡಳಿತ
ಹಾಸನ: ಕೆಲ ದಿನಗಳ ಹಿಂದೆ ದೋಣಿಗಲ್ ನಲ್ಲಿ ರಸ್ತೆಕುಸಿತ ಕಾರಣದಿಂದ ಹಾಗೂ ಕಾಮಗಾರಿ ಪ್ರಗತಿಯಲ್ಲಿದ್ದ ಪರಿಣಾಮ ಮುಚ್ಚಲಾಗಿದ್ದ ಶಿರಾಡಿ ಘಾಟ್ ರಸ್ತೆ ಸದ್ಯ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎಲ್ಲಾ ತರಹದ ವಾಹನಗಳ
ಸಂಚಾರಕ್ಕೆ ಮುಕ್ತವಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ
ಅಧಿಸೂಚನೆ ಹೊರಡಿಸಿದ್ದಾರೆ.
ಇದೇ ತಿಂಗಳ 22 ರಿಂದ ಲಘುವಾಹನಗಳ ಸಹಿತ ಭಾರಿ ವಾಹನಗಳಿಗೆ
ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಸಂಚರಿಸಲು ಮುಕ್ತ ಅವಕಾಶ
ನೀಡಲಾಗಿದ್ದು ಈ ಮೂಲಕ ಸವಾರರು ಪಡುತ್ತಿರುವ ಕಷ್ಟಕ್ಕೆ ಕೊಂಚ ಬ್ರೇಕ್ ಬಿದ್ದಂತಾಗಿದೆ.
ಕಳೆದ ಕೆಲವು ದಿನಗಳಿಂದ ಶಿರಾಡಿ ಘಾಟ್ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದರಿಂದ ವಾಹನ ಸವಾರರು ಬದಲಿ ರಸ್ತೆಯಲ್ಲಿ ಸಂಚರಿಸುವ ಅನಿವಾರ್ಯತೆ ಎದುರಾಗಿತ್ತು.
ಇತ್ತ ಚಾರ್ಮಾಡಿ ಘಾಟ್ ನಲ್ಲಿಯೂ ಪ್ರಯಾಣಕ್ಕೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಪರದಾಟ ಮತ್ತಷ್ಟು ಹೆಚ್ಚಾಗಿದ್ದು, ರಾತ್ರಿ ಪ್ರಯಾಣ ಮಾಡುವವರು ಬದಲಿ ಮಾರ್ಗವಾಗಿ ಮಡಿಕೇರಿ ಮೂಲಕವೇ ಸಂಚಾರ ನಡೆಸಬೇಕಿತ್ತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವುದನ್ನು ಕಂಡ ಸರ್ಕಾರ ಸದ್ಯ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚರಿಸಲು ಮುಕ್ತ ಅವಕಾಶ ನೀಡಿದೆ.
ಶಿರಾಡಿ ಘಾಟ್ ನಲ್ಲಿ ಸ್ಥಳ ಪರಿಶೀಲನೆ ಮಾಡಿರುವ ಸಚಿವ ಆರ್.ಅಶೋಕ್ ಒಂದು ತಿಂಗಳಲ್ಲಿ ಸಂಪೂರ್ಣ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಶಿರಾಡಿ ಘಾಟ್ ರಸ್ತೆ ಇಂದಿನಿಂದಲೇ ಸಂಚಾರಕ್ಕೆ ಮುಕ್ತವಾಗಲಿದೆ. ಆದರೆ, ಲಘು ವಾಹನಗಳಿಗೆ ಏಕ ಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮುಂದೆ, ಒಂದು ತಿಂಗಳಲ್ಲಿ ಸಂಪೂರ್ಣ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸ್ಥಳ ಪರಿಶೀಲನೆ ಬಳಿಕ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.