ಪ್ರಧಾನಿ ಮೋದಿಗೆ ಇ-ಮೇಲ್ ಮೂಲಕ ಭೇಟಿಯ ಇರಾದೆ ವ್ಯಕ್ತಪಡಿಸಿದ 10 ರ ಪೋರಿ | ಚಾಕಲೇಟ್ ನೀಡಿ, ತುಂಟಾಟದ ಪ್ರಶ್ನೆಗಳಿಗೆ ನಗೆಗಡಲಲ್ಲಿ ತೇಲಿದ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 10 ವರ್ಷದ ಪುಟ್ಟ ಹುಡುಗಿಯ ಮೇಲ್ ಗೆ ಉತ್ತರ ನೀಡುವ ಮೂಲಕ ಆಕೆಯ ಆಸೆಯನ್ನು ಪೂರೈಸಿದ್ದಾರೆ.
ಬಾಲಕಿ ಅನಿಶಾ ಲ್ಯಾಪ್ ಟಾಪ್ ನಿಂದ ಪಿಎಂ ಮೋದಿಗೆ, ಹಲೋ ಸರ್. ನಾನು ಅನಿಶಾ ಮತ್ತು ನಾನು ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಮೇಲ್ ಕಳುಹಿಸಿದ್ದಳು. ಮೇಲ್ ಗೆ ಪ್ರತಿಕ್ರಿಯಿಸಿದ ಮೋದಿ ಓಡಿ ಬಾ ಕಂದ ಎಂದು ಉತ್ತರಿಸಿದ್ದರು.
ಪುಟ್ಟ ಹುಡುಗಿ ಅನಿಶಾ, ಅಹ್ಮದ್ ನಗರ ಸಂಸದ ಡಾ.ಸುಜಯ್ ವಿ. ಕೆ ಪಾಟೀಲ್ ಅವರ ಪುತ್ರಿ. ಮಾಧ್ಯಮ ವರದಿಗಳ ಪ್ರಕಾರ, ಅನಿಶಾ ತನ್ನ ತಂದೆಯ ಲ್ಯಾಪ್ ಟಾಪ್ ನಿಂದ ಪಿಎಂ ಮೋದಿಗೆ ಮೇಲ್ ಕಳುಹಿಸಿದ್ದಳು.
ಇದಾದ ಬಳಿಕ ವಿ. ಕೆ ಪಾಟೀಲ್ ಸಂಸತ್ ಭವನಕ್ಕೆ ಬಂದಾಗ, ಪಿಎಂ ಮೋದಿ ಅನಿಶಾ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಬಳಿಕ ಅನಿಶಾ, ಪಿಎಂ ಮೋದಿಯವರನ್ನು 10 ನಿಮಿಷಗಳ ಕಾಲ ಭೇಟಿಯಾಗಿ ಸಂತೋಷ ತೋರ್ಪಡಿಸಿದ್ದಾರೆ.
ಅನಿಶಾ ಪ್ರಧಾನಿ ಮೋದಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲ ಪ್ರಶ್ನೆ, ನೀವು ಇಲ್ಲಿ ಕುಳಿತುಕೊಳ್ಳುವುದಾ? ಎಂದಾಗಿತ್ತು. ಬಳಿಕ ಇದು ನಿಮ್ಮ ಆಫೀಸಾ? ಇದೆಷ್ಟು ದೊಡ್ಡ ಕಚೇರಿ? ಎಂದು ಅಚ್ಚರಿಯಿಂದ ಕೇಳಿದ್ದಾಳೆ ಎನ್ನಲಾಗಿದೆ.
ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ ಇದು ನನ್ನ ಶಾಶ್ವತ ಕಚೇರಿಯಲ್ಲ, ನಿಮ್ಮನ್ನು ಭೇಟಿ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಉತ್ತರಿಸಿದ್ದಾರೆ.
ಇನ್ನು ಈ ಎಲ್ಲಾ ಸವಾಲುಗಳ ಮಧ್ಯೆ ಅನಿಶಾ, ಪ್ರಧಾನಿ ಮೋದಿ ಬಳಿ ನೀವು ಈ ದೇಶದ ರಾಷ್ಟ್ರಪತಿ ಆಗೋದು ಯಾವಾಗ? ಎಂದು ಕೇಳಿದ್ದಾಳೆ. ಇದನ್ನು ಕೇಳಿ ಮೋದಿ ಜೋರಾಗಿ ನಕ್ಕಿದ್ದಾರೆ. ಇಷ್ಟೇ ಅಲ್ಲದೇ, ನೀವು ಗುಜರಾತ್ನವರಾ ಎಂದು ಕೂಡಾ ಅನಿಶಾ ಮೋದಿಗೆ ಕೇಳಿದ್ದಾಳೆ.
ಆಕೆಯ ತುಂಟತನದ ಮಾತಿನಿಂದ ಖುಷಿ ಪಟ್ಟ ಮೋದಿ ಆಕೆಗೆ ಪ್ರೀತಿಯಿಂದ ಚಾಕಲೇಟ್ ನೀಡಿ ಸಂತೋಷ ವ್ಯಕ್ತ ಪಡಿಸಿದ್ದಾರೆ.