ಯಡಿಯೂರಪ್ಪ ನಿಷ್ಠ ಬಸವರಾಜ್ ಬೊಮ್ಮಾಯಿ ಮುಂದಿನ ಮುಖ್ಯಮಂತ್ರಿ | ಎಕ್ಕ ರಾಜ ರಾಣಿ ಕೂಡಾ ಯಡ್ಡಿ ಕೈಯೊಳಗೇ !

ಮುಂದಿನ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರ ನಿಷ್ಠ ಬಸವರಾಜ್ ಬೊಮ್ಮಾಯಿ ಅವರು ಆಯ್ಕೆಯಾಗಿದ್ದಾರೆ.
ಆ ಮೂಲಕ ಮತ್ತೊಮ್ಮೆ ಯಡಿಯೂರಪ್ಪನವರ ಕೈ ಮೇಲಾಗಿದ್ದು, ಮತ್ತೊಮ್ಮೆ ಕರ್ನಾಟಕ ರಾಜ್ಯದ ಅಧಿಕಾರವನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡು ಯಡಿಯೂರಪ್ಪನವರು ಆಡಳಿತ ನಡೆಸುವುದು ಗ್ಯಾರಂಟಿ.

 

ಅಲ್ಲದೆ ರಾಜ್ಯಕ್ಕೆ ಮೂವರು ಡಿಸಿಎಂ ಗಳನ್ನು ನೇಮಕ ಮಾಡಲಾಗಿದೆ. ಶ್ರೀರಾಮುಲು, ಕಾರಜೋಳ ಮತ್ತು ಆರ್್. ಅಶೋಕ್ ಅವರಿಗೆ ಡಿಸಿಎಂ ಪಟ್ಟ ನೀಡಲಾಗಿದೆ. ಕಳೆದ ಸಲ ಇದ್ದ ಇಬ್ಬರು ಲಕ್ಷ್ಮಣ ಸವದಿ ಮತ್ತು ಅಶ್ವತ್ಥನಾರಾಯಣ್ ಈ ಇಬ್ಬರು ಡಿಸಿಎಂಗಳನ್ನು ಕೈಬಿಡಲಾಗಿದೆ.

ಬೊಮ್ಮಾಯಿ ಅವರು 30 ನೇ ಮುಖ್ಯಮಂತ್ರಿಯಾಗುವ ಮೂಲಕ ಎಕ್ಕ ರಾಜ ರಾಣಿ ಎಲ್ಲವನ್ನೂ ತಮ್ಮ ಕೈಯಲ್ಲಿ ಬಿಗಿಯಾಗಿ ಇಟ್ಟುಕೊಂಡಿದ್ದಾರೆ ಯಡಿಯೂರಪ್ಪನವರು. ಬೊಮ್ಮಾಯಿ ಅವರ ಆಯ್ಕೆಯಲ್ಲಿ ಯಡಿಯೂರಪ್ಪನವರ ಕೈ ಸ್ಪಷ್ಟವಾಗಿ ಮೇಲಾಗಿದೆ. ಹಲವು ಹೆಸರುಗಳು ಮುಖ್ಯಮಂತ್ರಿ ಪದವಿಗೆ ಕೇಳಿಬಂದಿದ್ದರೂ ಕೊನೆಗೆ ಬಸವರಾಜ್ ಬೊಮ್ಮಾಯಿ ಮತ್ತು ಅರವಿಂದ್ ಬೆಲ್ಲದ್ ಅವರು ಸ್ಪರ್ಧಾಕಣದಲ್ಲಿ ಉಳಿದುಕೊಂಡಿದ್ದರು. ಅಂತಿಮವಾಗಿ ಬೊಮ್ಮಾಯಿ ಅವರನ್ನು ಅಳೆದು-ತೂಗಿ ಆಯ್ಕೆ ಮಾಡಲಾಗಿದೆ.

ಬಸವರಾಜ್ ಬೊಮ್ಮಾಯಿ ಅವರು ಜಾತಿಯಲ್ಲಿ ಲಿಂಗಾಯಿತರಾಗಿರುವುದು ಮತ್ತು ಎಲ್ಲರನ್ನೂ ಸಮವಾಗಿ ತೆಗೆದುಕೊಂಡು ಹೋಗಬಲ್ಲ ಚಾತುರ್ಯ, ಅಲ್ಲದೆ ಯಡಿಯೂರಪ್ಪನವರ ತೀವ್ರ ಒಲವಿರುವ ಕ್ಯಾಂಡಿಡೇಟ್ ಆದಕಾರಣ ಅವರಿಗೆ ಮುಖ್ಯಮಂತ್ರಿ ಪದವಿ ಬಂದಿದೆ. ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುವ ಮೂಲಕ ಕರ್ನಾಟಕದಲ್ಲಿ ದೇವೇಗೌಡ, ಕುಮಾರಸ್ವಾಮಿ ಅನಂತರ ಇನ್ನೊಂದು ಕುಟುಂಬ ಅಪ್ಪ-ಮಕ್ಕಳು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ.

ದೆಹಲಿಯ ಹೈಕಮಾಂಡ್ ಈ ಸಲ ಜಾಸ್ತಿ ರಿಸ್ಕ್ ತಗೊಳ್ಳಲು ಇಷ್ಟವಿಲ್ಲದೆ ಯಡಿಯೂರಪ್ಪನವರನ್ನು ಇಳಿಸಿದ ನಂತರ ಯಡಿಯೂರಪ್ಪನವರಿಗೆ ಇಷ್ಟವಾದ ವ್ಯಕ್ತಿಯ ಆಯ್ಕೆಯನ್ನೇ ಮಾಡಿದೆ. ಆ ಮೂಲಕ ಅತ್ತ ಲಿಂಗಾಯಿತರನ್ನು ಉಳಿಸಿಕೊಂಡಂತೆಯು ಆಯಿತು. ಇತ್ತ ಯಡಿಯೂರಪ್ಪನವರು ಕೂಡ ಬೊಮ್ಮಾಯಿ ಅವರ ಹೆಸರಿಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಕಾರಣ ಬೊಮ್ಮಾಯಿಯವರು ಯಡಿಯೂರಪ್ಪನವರಿಗೆ ನಿಷ್ಠರಾಗಿದ್ದಾರೆ. ಅಲ್ಲದೆ ಬಸವರಾಜ್ ಬೊಮ್ಮಾಯಿ ಅವರನ್ನು ಹೆಚ್ಚಿನ ಶಾಸಕರು ಕೂಡಾ ವಿರೋಧಿಸಲಾರರು. ಇದೇ ಕಾರಣದಿಂದ ಬೊಮ್ಮಾಯಿ ಅವರು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಹೈಕಮಾಂಡ್ ಒಳ್ಳೆಯ ಆಯ್ಕೆಯನ್ನೇ ಮಾಡಿದೆ.

ಇವರು ಜನವರಿ 28, 1960 ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಇವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಅವರ ಪುತ್ರ. ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರುವ ಇವರು, ತನ್ನ ರಾಜಕೀಯ ವೃತ್ತಿಯನ್ನು ಜನತಾದಳದಿಂದ ಆರಂಭಿಸಿದರು.

ಅವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಎರಡು ಬಾರಿ (1998 ಮತ್ತು 2004 ರಲ್ಲಿ) ಧಾರವಾಡ ಸ್ಥಳೀಯ ಪ್ರಾಧಿಕಾರದ ಕ್ಷೇತ್ರದಿಂದ ಆಯ್ಕೆಯಾದರು. ಅವರು ಜನತಾದಳವನ್ನು ತೊರೆದು 2008 ರ ಫೆಬ್ರವರಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. 2008 ರ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು.

ಬೊಮ್ಮಾಯಿಯವರು ನಾಳೆಯೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾಳೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Leave A Reply

Your email address will not be published.