

ಬೆಂಗಳೂರು, 31 ಜನವರಿ 2026: “ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಚಲನಚಿತ್ರ ಸಂಕಲನಕ್ಕೆ ಬೇಕಾದ ಕಲಾತ್ಮಕ ಅಂತಃಪ್ರಜ್ಞೆ ಮತ್ತು ಭಾವನಾತ್ಮಕ ಸೂಕ್ಷ್ಮತೆಯನ್ನು ಕೃತಕ ಬುದ್ಧಿಮತ್ತೆ (AI) ನೀಡಲು ಸಾಧ್ಯವಿಲ್ಲ,” ಎಂದು ಹಿರಿಯ ಚಲನಚಿತ್ರ ಸಂಕಲನಕಾರ ಶ್ರೀಕರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. ಸಂಶೋಧನೆ ಮತ್ತು ದಕ್ಷತೆಯ ದೃಷ್ಟಿಯಿಂದ AI ಉಪಯುಕ್ತ ಸಾಧನವಾಗಿದ್ದರೂ, ಸಂಕಲನವು ಮೂಲಭೂತವಾಗಿ ಮಾನವನ ಸಹಜ ಪ್ರವೃತ್ತಿ, ಅನುಭವ ಮತ್ತು ಭಾವನೆಗಳ ಆಧಾರದ ಮೇಲೆ ನಡೆಯುವ ಪ್ರಕ್ರಿಯೆ ಎಂದು ಪ್ರಸಾದ್ ಪ್ರತಿಪಾದಿಸಿದರು.
“ಸಿನಿಮಾ ಎನ್ನುವುದು ಕೇವಲ ದೃಶ್ಯಗಳ ಜೋಡಣೆಯಲ್ಲ; ಅದು ಕಥೆ ಹೇಳುವ ಕಲೆ. ಭಾವನೆಗಳು ಪ್ರೇಕ್ಷಕರನ್ನು ತಲುಪುವಂತೆ ಮಾಡುವುದು ಮತ್ತು ಚಿತ್ರದ ಲಯವನ್ನು (Rhythm) ಕಾಯ್ದುಕೊಳ್ಳುವುದು ಸಂಕಲನಕಾರನ ಜವಾಬ್ದಾರಿ,” ಎಂದು ಅವರು ವಿವರಿಸಿದರು. 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯೋಜಿಸಲಾಗಿದ್ದ ‘ದಿ ಇನ್ವಿಸಿಬಲ್ ಆರ್ಟ್ ಆಫ್ ಎಡಿಟಿಂಗ್’ (The Invisible Art of Editing) ಸಂವಾದದಲ್ಲಿ ಅವರು ಮಾತನಾಡಿದರು. ನಿರ್ಮಾಪಕ ಸಂದೀಪ್ ವಿಶ್ವನಾಥ್ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಚಿತ್ರೀಕರಣ ಆರಂಭವಾಗುವ ಮೊದಲೇ ಸಂಕಲನಕಾರನ ಕೆಲಸ ಶುರುವಾಗುತ್ತದೆ ಎಂಬುದು ಅವರ ನಂಬಿಕೆ. ಚಿತ್ರಕಥೆಯ ಮೊದಲ ಕರಡು ಸಿದ್ಧವಾದಾಗಲೇ ನಿರ್ದೇಶಕರೊಂದಿಗೆ ಚರ್ಚಿಸುವುದರಿಂದ, ಚಿತ್ರಕ್ಕೆ ದೃಶ್ಯ ಸ್ಪಷ್ಟತೆ ಮತ್ತು ನಿರೂಪಣೆಯ ಲಯವನ್ನು ನೀಡಲು ಸಾಧ್ಯವಾಗುತ್ತದೆ. “ಚಿತ್ರೀಕರಣದ ಸಮಯದಲ್ಲಿ ಸ್ಥಳ, ಬಜೆಟ್ ಮತ್ತು ಕಲಾವಿದರ ನಟನೆಯ ಆಧಾರದ ಮೇಲೆ ಚಿತ್ರಕಥೆ ಬದಲಾಗುತ್ತಾ ಹೋಗುತ್ತದೆ. ಅಂತಿಮವಾಗಿ ಎಡಿಟಿಂಗ್ ಟೇಬಲ್ ಮೇಲೆಯೇ ಸಿನಿಮಾ ಹೊಸ ರೂಪ ಪಡೆಯುತ್ತದೆ,” ಎಂದು ಅವರು ಹೇಳಿದರು.
ತಮ್ಮ ಕೆಲಸದಲ್ಲಿ ವಸ್ತುನಿಷ್ಠತೆಯನ್ನು ಕಾಪಾಡಿಕೊಳ್ಳಲು ಚಿತ್ರೀಕರಣ ನಡೆಯುವ ಸ್ಥಳಕ್ಕೆ (Set) ಭೇಟಿ ನೀಡುವುದಿಲ್ಲ ಎಂದು ಹೇಳಿದ ಶ್ರೀಕರ್ ಪ್ರಸಾದ್ ಬಹಿರಂಗಪಡಿಸಿದರು, ʼಸೆಟ್ನಲ್ಲಿನ ಕಷ್ಟಗಳು ಅಥವಾ ವಾತಾವರಣದ ಪ್ರಭಾವವಿಲ್ಲದೆ, ಒಬ್ಬ ಸಾಮಾನ್ಯ ಪ್ರೇಕ್ಷಕನಂತೆ ದೃಶ್ಯಗಳನ್ನು ನೋಡಿ ಅವುಗಳ ಸಿನಿಮಾ ನಿರ್ಧರಿಸಲು ಇದು ಸಹಕಾರಿ. ಆದರೆ, ಶೂಟಿಂಗ್ ಆರಂಭವಾದ ಮೊದಲ ಹತ್ತು ದಿನಗಳಲ್ಲೇ ಎಡಿಟಿಂಗ್ ಪ್ರಕ್ರಿಯೆ ನಡೆಸುವುದರಿಂದ ಚಿತ್ರದ ಧಾಟಿ ಅಥವಾ ನಟನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆʼ ಎಂದು ಹೇಳಿದರು.
ಸಂಕಲನದಲ್ಲಿ ಮೈಕ್ರೋ ಮತ್ತು ಮಾಕ್ರೊ ಎಡಿಟಿಂಗ್ ಹಂತಗಳನ್ನು ವಿವರಿಸಿದ ಅವರು, ʼಕೆಲವೊಮ್ಮೆ ಪ್ರತ್ಯೇಕವಾಗಿ ನೋಡಿದಾಗ ಅದ್ಭುತವೆನಿಸುವ ದೃಶ್ಯಗಳು, ಇಡೀ ಸಿನಿಮಾದ ವೇಗಕ್ಕೆ ಅಡ್ಡಿಯಾಗಬಹುದು. ಅಂತಹ ಸಂದರ್ಭದಲ್ಲಿ ಆ ದೃಶ್ಯಗಳನ್ನು ತೆಗೆಯುವ ಧೈರ್ಯ ಮಾಡಬೇಕು. ಒಂದು ಸಣ್ಣ ತಪ್ಪು ದೃಶ್ಯವೂ ಪ್ರೇಕ್ಷಕ ಮತ್ತು ಸಿನಿಮಾದ ನಡುವಿನ ಭಾವನಾತ್ಮಕ ಸಂಬಂಧವನ್ನು ಕಡಿದುಹಾಕಬಲ್ಲದುʼ ಎಂದು ಎಚ್ಚರಿಸಿದರು.
ದೃಶ್ಯ ಪರಿಣಾಮಗಳ (VFX) ಬಗ್ಗೆ ಮಾತನಾಡುತ್ತಾ, ʼತಂತ್ರಜ್ಞಾನವು ಕಥೆಯನ್ನು ಮೀರಿಸಬಾರದು; ಬದಲಿಗೆ ಕಥೆಯನ್ನು ಪೂರಕವಾಗಿ ಬೆಂಬಲಿಸಬೇಕು. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳದಿದ್ದರೆ ಪ್ರಸ್ತುತತೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಏನೇ ಬದಲಾದರೂ ಸಿನಿಮಾ ಮಾತ್ರ ಎಂದಿಗೂ ಮಾನವ ಸಂವೇದನೆಯ ಕಲಾಪ್ರಕಾರವಾಗಿಯೇ ಉಳಿಯಲಿದೆʼ ಎಂದರು.













