

ಬೆಳ್ತಂಗಡಿ: ರಾಜ್ಯದಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದ್ದು, ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಯ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ವಯನಾಡ್‌ನಲ್ಲಿ ಆದ ಗುಡ್ಡ ಕುಸಿತ, ಶಿರೂರು ಗುಡ್ಡ ಕುಸಿತದಂಥ ಪ್ರಕರಣಗಳು ಮತ್ತು ತಜ್ಞರ ಅಧ್ಯಯನ ವರದಿಗಳು ಭೂಕುಸಿತದ ಘೋರ ಪರಿಣಾಮಗಳನ್ನು ಜನರ ಮುಂದಿಟ್ಟಿದ್ದು ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ಅವರು ಸಭಾಪತಿಗಳನ್ನು ಪತ್ರ ಬರೆದು ಒತ್ತಾಯಿಸಿದ್ದಾರೆ.
ಪಶ್ಚಿಮ ಘಟ್ಟಗಳು ಜೀವವೈವಿಧ್ಯದ ಪ್ರಮುಖ ತಾಣಗಳಾಗಿವೆ. ಇಲ್ಲಿನ ಭೂಬಳಕೆಯ ಸ್ಮರೂಪವು ತೀವ್ರಗತಿಯಲ್ಲಿ ನಿರಂತರವಾಗಿ ಬದಲಾಗುತ್ತಿದೆ. ಈ ಪ್ರದೇಶದಲ್ಲಿ ಭೂಕುಸಿತದ ಪ್ರಕರಣಗಳು ಹೆಚ್ಚುತ್ತಿದ್ದು 2024 ರಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಭೂಕುಸಿತಗಳು ಈಗಾಗಲೇ ಸಂಭವಿಸಿವೆ. ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತದ ಪ್ರಕರಣಗಳು ಮರುಕಳಿಸುತ್ತಿರುವುದರಿಂದ, ಅಲ್ಲಿನ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದ್ದು ಸಾಮಾಜಿಕ-ಆರ್ಥಿಕ ಬಿಕ್ಕಟ್ಟುಗಳನ್ನೂ ಸೃಷ್ಟಿಸುತ್ತಿವೆ. ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅವೈಜ್ಞಾನಿಕವಾದ ಅಭಿವೃದ್ಧಿ ಯೋಜನೆಗಳು, ಪ್ರಕೃತಿಯ ಸಮತೋಲನವನ್ನು ಹಾಳುಮಾಡುವಂತಹ ಯೋಜನೆಗಳನ್ನು ಕೈಗೊಳ್ಳುವುದು ಭೂಕುಸಿತದ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಹಿಂದಿನಿಂದಲೂ ಹಲವು ತಜ್ಞರು ಹೇಳುತ್ತಲೇ ಬಂದಿದ್ದಾರೆ.
ಐಐಟಿ ಧಾರವಾಡದಿಂದ ಭೂಕುಸಿತಕ್ಕೆ ಸಂಬಂಧಿಸಿದ ಪ್ರಮುಖ ಅಧ್ಯಯನ ವರದಿಯೊಂದ ‘ಜಿಯೋಹಝಾರ್ಡಸ್ ಮೆಕ್ಯಾನಿಕ್ಸ್’ ಜರ್ನಲ್ ನಲ್ಲಿ ಪ್ರಕಟವಾಗಿದ್ದು, ಆ ವರದಿಯಲ್ಲಿ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಶೇ. 60ಕ್ಕೂ ಹೆಚ್ಚು ಭಾಗವು ಸಂಭವನೀಯ ಭೂಕುಸಿತದ ಪ್ರದೇಶವಾಗಿದ್ದು ರಾಜ್ಯದಲ್ಲಿ ಘಟ್ಟವು ಹರಡಿರುವ ಏಳು ಜಿಲ್ಲೆಗಳಲ್ಲಿ ಭೂಕುಸಿತದ ಸಾಧ್ಯತೆಗಳು ಹೆಚ್ಚಿವೆ ಎಂದು ಉಲ್ಲೇಖಿಸಲಾಗಿದೆ. ಪಶ್ಚಿಮ ಘಟಗಳಲ್ಲಿ ಸಂಭವನೀಯ ಗುಡ್ಡ ಕುಸಿತದ ಹಾನಿ ತಡೆಯುವುದು ಈ ಅಧ್ಯಯನ ವರದಿಯ ಆಶಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.













