

ಕಾರೊಂದು ರಿಕ್ಷಾಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ರಿಕ್ಷಾ ಚಾಲಕ ಎದುರಿನಿಂದ ಬಂದ ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಡಗು ಸಂಪಾಜೆ ಗೇಟಿನ ಬಳಿ ನಡೆದಿದೆ.
ರಿಕ್ಷಾ ಸಂಪಾಜೆ ಗೇಟಿನಿಂದ ಚೆಡಾವು ಕಡೆ ತೆರಳುತ್ತಿದ್ದು, ಕೊಡಗು ಸಂಪಾಜೆ ಪೆಟ್ರೋಲ್ ಪಂಪ್ ಬಳಿಯ ತಿರುವಿನಲ್ಲಿ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಚಕ್ರಗಳ ಕೆಳಗೆ ಸಿಲುಕಿ ರಿಕ್ಷಾ ಚಾಲಕ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಮೃತ ವ್ಯಕ್ತಿಯನ್ನು ಬಿಸೆಲುಮನೆ ರಾಮಣ್ಣ ಗೌಡ ಅವರ ಪುತ್ರ ಸುಂದರ್ ಚಿಟ್ಟಿಕ್ಕಾನ (56) ಎಂದು ಗುರುತಿಸಲಾಗಿದೆ.
ಆಟೋರಿಕ್ಷಾದಲ್ಲಿ ಪ್ರಯಾಣ ಮಾಡುತ್ತಿದ್ದ ಇನ್ನೋರ್ವ ಪ್ರಯಾಣಿಕ ಕೂಡಾ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ಸಮಯದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಅನಿತಾ ಅವರ ತಾಯಿ ಪದ್ಮಾವತಿ ಅವರನ್ನು ಸಂಪಾಜೆಯಿಂದ ಚೆಡಾವು ಬಲಿ ಅವರ ನಿವಾಸಕ್ಕೆ ಸುಂದರ್ ಅವರು ಕರೆದುಕೊಂಡು ಹೋಗುತ್ತಿದ್ದರು.
ರಿಕ್ಷಾದ ಚಾಲಕ ಸುಂದರ ಅವರ ಸಾವಿಗೆ ಕಾರಣವಾದ ಕಾರನ್ನು ಮಡಿಕೇರಿ ಸಮೀಪದ ಕಾಟಕೇರಿಯಲ್ಲಿ ಮಡಿಕೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರಲ್ಲಿದ್ದವರು ಮೈಸೂರಿನವರೆಂದು ತಿಳಿದು ಬಂದಿದೆ. ಪೊಲೀಸರು ಅವರನ್ನು ತಮ್ಮ ವಶಕ್ಕೆ ಇರಿಸಿಕೊಂಡಿದ್ದಾರೆ. ವಿಚಾರಣೆ ಮುಂದುವರಿದಿದೆ.













