

ಹೊಸದಿಲ್ಲಿ: ಬೌದ್ಧ ಧರ್ಮಕ್ಕೆ ಮತಾಂತರಗೊಂಡು ನಂತರ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ಗೆ ಅಲ್ಪಸಂಖ್ಯಾತ ಕೋಟಾದಡಿ ಮೀಸಲು ಪಡೆಯಲು ಬಯಸಿದ ಮೇಲ್ವರ್ಗದ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಇದೊಂದು ಹೊಸ ಬಗೆಯ ವಂಚನೆ ಎಂದು ಖಾರವಾಗಿ ಹೇಳಿದೆ. ನೀಟ್ -ಪಿಜಿಗೆ ಅಲ್ಪಸಂಖ್ಯಾತ ಅಭ್ಯರ್ಥಿ ಕೋಟಾದ ಅಡಿ ಪ್ರವೇಶ ಕೋರಿ ನಿಖಿಲ್ ಕುಮಾರ್ ಪುನಿಯಾ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸಿಜೆಐ ಪೀಠವು ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.
“ನೀವು ಯಾವ ಪುನಿಯಾ? ನೀವು ಹೇಗೆ ಅಲ್ಪಸಂಖ್ಯಾತರು?,” ಎಂದು ಸಿಜೆಐ ಕಾಂತ್ ಪ್ರಶ್ನಿಸಿದರು. ಆಗ ಅರ್ಜಿದಾರರ ಪರ ವಕೀಲ ‘ಜಾಟ್ ಪುನಿಯಾ’ ಎಂದು ಉತ್ತರಿಸಿದರು. ಆಗ ನ್ಯಾಯಪೀಠವು, “ಹಾಗಾದರೆ, ನಿಮ್ಮ ಅರ್ಜಿದಾರರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ,” ಎಂದು ಮರುಪ್ರಶ್ನಿಸಿತು. ಇದಕ್ಕೆ ವಕೀಲರು, ”ಈಗ ನಮ್ಮ ಕಕ್ಷಿದಾರರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು, ಅದು ಅವರ ಹಕ್ಕು,” ಎಂದು ಉತ್ತರಿಸಿದರು. ವಕೀಲರ ಉತ್ತರಕ್ಕೆ ಗರಂ ಆದ ಸಿಜೆಐ ಇದು ಹೊಸ ರೀತಿಯ ವಂಚನೆ ಎಂದು ಆಕ್ಷೇಪ ವ್ಯಕ್ತಪಡಿಸಿತು. “ಸಾಮಾನ್ಯ ವರ್ಗದ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಹೇಳಿಕೊಳ್ಳುವ ಮೂಲಕ ಅಲ್ಪಸಂಖ್ಯಾತ ಪ್ರಮಾಣಪತ್ರವನ್ನು ಪಡೆಯ ಬಹುದೇ? ಅಲ್ಪಸಂಖ್ಯಾತ ಪ್ರಮಾಣಪತ್ರ ನೀಡಲು ಏನೇನು ಮಾರ್ಗಸೂಚಿಗಳಿವೆ ಎಂಬುದನ್ನು ತಿಳಿಸಿ,” ಎಂದು ಹರಿಯಾಣದ ಮುಖ್ಯ ಕಾರ್ಯದರ್ಶಿಗೆ ಕೋರ್ಟ್ ನಿರ್ದೇಶಿಸಿತು.













