Home News Sullia: ಬೆಳೆ ವಿಮೆ ಪರಿಹಾರ ಕುರಿತು ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಸಮಾಧಾನ

Sullia: ಬೆಳೆ ವಿಮೆ ಪರಿಹಾರ ಕುರಿತು ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಸಮಾಧಾನ

Hindu neighbor gifts plot of land

Hindu neighbour gifts land to Muslim journalist

Sullia: ವಿಮೆ ಪರಿಹಾರ ಮೊತ್ತ ಜಮೆಯಲ್ಲಿ ಕೃಷಿಕರಿಗೆ ಕಡಿಮೆ ಮೊತ್ತ ಪಾವತಿಯಾಗಿದೆ ಎಂಬ ವಿಚಾರದ ಕುರಿತು ಶಾಸಕಿ ಕು.ಭಾಗೀರಥಿ ಮುರುಳ್ಯ ಅವರ ಉಪಸ್ಥಿತಿಯಲ್ಲಿ ಜನವರಿ 5 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ, ಪ್ರಮುಖರ ಸಭೆಯಲ್ಲಿ ಕೃಷಿಕ ಮುಖಂಡರುಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಅಧಿಕಾರಿಗಳು ಸರಕಾರಕ್ಕೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಕೃಷಿಕರಿಗೆ ಈ ಬಾರಿ ಬಂದಿರುವ ಕೃಷಿ ವಿಮೆ ಜಮೆಯಲ್ಲಿ ಗೊಂದಲವಾಗಿದೆ. ಅಧಿಕಾರಿಗಳ ನಿರ್ಲಕ್ಷತನದಿಂದ ಕೃಷಿಕರು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಯಿತು. ಆದ್ದರಿಂದ ಈ ಎಲ್ಲಾ ಸಮಸ್ಯೆಯನ್ನು ಪರಿಹರಿಸಿ ಕಡಿಮೆ ವಿಮೆ ಜಮೆಯಾಗಿರುವ ಕೃಷಿಕರಿಗೆ ನ್ಯಾಯಯುತವಾದ ಪರಿಹಾರ ಒದಗಿಸಬೇಕೆಂದು ಸುಳ್ಯ ತಾಲೂಕಿನ ಕೃಷಿಕ ಮುಖಂಡರು ಆಗ್ರಹಿಸಿದರು.

2024ರಲ್ಲಿ ಸುಳ್ಯ ತಾಲೂಕಿನಲ್ಲಿ ದಾಖಲಾದ ಮಳೆಯ ಬಗ್ಗೆ ಯಾವ ಅಧಿಕಾರಿಗಳಲ್ಲಿಯೂ ಕೂಡ ಸ್ಪಷ್ಟವಾದ ಮಾಹಿತಿ ಇಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೃಷಿಕರ ಕಷ್ಟ-ನಷ್ಟಗಳ ಬಗ್ಗೆ ಆಲೋಚನೆ ಮಾಡುವ ಗುಂಗಿಗೂ ಹೋಗಲಿಲ್ಲ. ಆದ್ದರಿಂದ ಈ ಸಮಸ್ಯೆ ಉದ್ಭವಿಸಲು ಕಾರಣವಾಯಿತು ಎಂದು ಮುಖಂಡ ಕಿಶೋರ್ ಕುಮಾರ್ ಶಿರಾಡಿ ಯವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಈ ಬಗ್ಗೆ ಪ್ರತಿಭಟನೆ ಮಾಡಲು ನಾವು ಸಂಘಟನೆಯವರು ಹೊರಟರೆ ಅಧಿಕಾರಿಗಳು ಪೊಲೀಸರಲ್ಲಿ ಹೇಳಿ ನಮ್ಮನ್ನು ಧಮನಿಸಲು ಮುಂದಾಗುತ್ತಾರೆ. ಇದು ಸರಿಯಾದ ವಿಧಾನವಲ್ಲ. ನಮಗೆ ನ್ಯಾಯ ಸಿಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು.ಉಷ್ಣಾಂಶದ ಪರಿಷ್ಕೃತ ದತ್ತಾಂಶವನ್ನು ಪಡೆದು ಅದನ್ನು ವಿಮಾ ಕಂಪೆನಿಗೆ ನೀಡಿ ನ್ಯಾಯಯುತವಾದ ಪರಿಹಾರ ಒದಗಿಸಲು ಪ್ರಯತ್ನ ನಡೆಸಬೇಕು. ಈ ಎಲ್ಲಾ ಸಮಸ್ಯೆಗಳನ್ನು ಕೇಳಬೇಕಾದಂತ ಅಧಿಕಾರಿಗಳೇ ಈ ಸಭೆಗೆ ಬರಲಿಲ್ಲ. ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಮತ್ತು ಸರ್ಕಾರದ ಮಟ್ಟದಲ್ಲಿ ಈ ವಿಷಯಗಳು ಚರ್ಚೆಯಾಗಬೇಕಾಗಿದೆ.

ಆದರೆ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ನಾವು ಕೃಷಿಕರು ಎಂದಾಕ್ಷಣ ನಮಗೆ ಯಾವುದೇ ರೀತಿಯ ತಿಳುವಳಿಕೆ ಇಲ್ಲ ಎಂಬುದನ್ನು ಅಧಿಕಾರಿಗಳು ತಿಳಿದುಕೊಳ್ಳುವುದು ತಪ್ಪು. ಇಲ್ಲಿ ಸೇರಿರುವ ಎಲ್ಲಾ ಮುಖಂಡರುಗಳು ಕೂಡ ವಿದ್ಯಾವಂತರುಗಳೇ. ಆಗಿರುವ ಸಮಸ್ಯೆಗಳ ಬಗ್ಗೆ ನಮಗೂ ಕೂಡ ಮಾಹಿತಿ ಇದೆ. ಆದ್ದರಿಂದ ಆದಷ್ಟು ಶೀಘ್ರದಲ್ಲಿ ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳಿಗೆ ಮತ್ತು ಸರ್ಕಾರದ ಗಮನಕ್ಕೆ ಮಾಹಿತಿ ನೀಡಿ ನಮಗೆ ಶೀಘ್ರದಲ್ಲಿ ಪರಿಹಾರ ಒದಗಿಸಬೇಕೆಂದು ಮುಖಂಡ ಸಂತೋಷ್‌ ಕುತ್ತಮೊಟ್ಟೆಯವರು ಸಭೆಯಲ್ಲಿ ಆಗ್ರಹಿಸಿದರು. ಅಲ್ಲದೆ ಈ ಬಗ್ಗೆ ಅವರಲ್ಲಿದ್ದ ಮಾಹಿತಿಗಳನ್ನು ಅಧಿಕಾರಿಗಳ ಮುಂದೆ ವಿವರಿಸಿದರು.ಕಳೆದ ವರ್ಷಗಳಲ್ಲಿ ಸುಳ್ಯ ತಾಲೂಕಿನಲ್ಲಿ ಕೃಷಿಕರಿಗೆ ಉತ್ತಮ ಪರಿಹಾರ ಮೊತ್ತ ಪಾವತಿಯಾಗಿತ್ತು. ಕಳೆದ ವರ್ಷಗಳಿಂದ ಅಧಿಕ ಮಳೆ ಮತ್ತು ಉಷ್ಣಾಂಶ ದಾಖಲಾದರೂ ಈ ಬಾರಿ ವಿಮಾ ಪರಿಹಾರ ತುಂಬಾ ಕಡಿಮೆ ಪಾವತಿಯಾಗಿದೆ.

ಹವಾಮಾನ ದತ್ತಾಂಶ ಸಲ್ಲಿಕೆಯಲ್ಲಾದ ವ್ಯತ್ಯಾಸದಿಂದ ಈ ರೀತಿ ಕಡಿಮೆ ಪರಿಹಾರ ಪಾವತಿ ಆಗಿರುವ ಸಾಧ್ಯತೆ ಇದೆ. ಇದನ್ನು ಸರಿ ಪಡಿಸಿ ನ್ಯಾಯಯುತವಾದ ಪರಿಹಾರ ದೊರಕಿಸಬೇಕು ಎಂದು ಮುಖಂಡರಾದ ಹರೀಶ್ ಕಂಜಿಪಿಲ್ಲಿ ಯವರು ಆಗ್ರಹಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯರಾದ ಎಂ ವೆಂಕಪ್ಪ ಗೌಡರವರು ಮಾತನಾಡಿ 2024ರಲ್ಲಿ ಸುಳ್ಯ ತಾಲೂಕಿನ ಯಾವ ಯಾವ ಭಾಗಗಳಲ್ಲಿ ಎಷ್ಟು ಎಷ್ಟು ಪ್ರಮಾಣದ ಮಳೆಯಾಗಿದೆ. ಮತ್ತು ವಿಮಾ ಪರಿಹಾರ ಬರಲು ಯಾವ ಪ್ರಮಾಣದ ಮಳೆ ಬೇಕಾಗಿದೆ ಎಂಬುವುದರ ಬಗ್ಗೆ ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿ ಎಂದು ಸಭೆಯಲ್ಲಿ ಅಧಿಕಾರಿಗಳಲ್ಲಿ ಕೇಳಿಕೊಂಡರು.

ಸುಳ್ಯ ಸಿ ಎ ಬ್ಯಾಂಕಿನ ಅಧ್ಯಕ್ಷರಾದ ವಿಕ್ರಮ್ ಎ.ವಿ. ಅಡ್ಡಂಗಾಯ ರವರು ಮಾತನಾಡಿ ಬೇರೆ ಬೇರೆ ಕಾರಣಗಳನ್ನು ತಿಳಿಸಿ ಅಧಿಕಾರಿಗಳು ಕೃಷಿಕರನ್ನುಸಮಾಧಾನಪಡಿಸುವುದು ಸರಿಯಲ್ಲ. ಕೃಷಿಕರಿಗೆ ಆಗಿರುವ ತೊಂದರೆಯ ಬಗ್ಗೆ ಅವಲೋಕನ ಮಾಡಿ ಸರಿಯಾದ ಪರಿಹಾರ ಒದಗಿಸಿ ಎಂದು ಆಗ್ರಹಿಸಿದರು.