ಬೆಳ್ತಂಗಡಿ ಅಭ್ಯಾಸ್ ಪಿಯು ಕಾಲೇಜು, ಪ್ರಸನ್ನ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಬ್ಬಕ್ಕ ರಾಣಿ ಉಪನ್ಯಾಸ ಸರಣಿ ಕಾರ್ಯಕ್ರಮ: ‘ಅಭ್ಯಾಸ್’ ಚೇರ್ಮನ್ ಕಾರ್ತಿಕೇಯ, ಸಾಹಿತಿ ಸಂಶೋಧಕ ಬಿಎ ಲೋಕಯ್ಯ ಶಿಶಿಲ, ಮಂಗಳೂರು ವಿವಿ ಪ್ರೊ. ಮಾಧವ ಭಾಗಿ

Share the Article

ಬೆಳ್ತಂಗಡಿ: ಸೋಮವಾರ ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಉಪನ್ಯಾಸಕರ ಸಂಘ(ರಿ) ಮಂಗಳೂರು ಇದರ ವತಿಯಿಂದ ಬೆಳ್ತಂಗಡಿ ಅಭ್ಯಾಸ್ ಪಿಯುಸಿ ಕಾಲೇಜು ಹಾಗೂ ಪ್ರಸನ್ನ ಕಾಲೇಜುಗಳ ಜಂಟಿ ಆಶ್ರಯದಲ್ಲಿ ನಡೆದ ಅಬ್ಬಕ್ಕ ರಾಣಿ ಆಳ್ವಿಕೆಯ 500ನೇ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸರಣಿ ಉಪನ್ಯಾಸ ಮಾಲಿಕಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಭ್ಯಾಸ್ ಪಿಯುಸಿ ಕಾಲೇಜಿನ ಚೇರ್ಮನ್ ಕಾರ್ತಿಕೇಯ ಎಂ ಎನ್ ಅವರು ಅಬ್ಬಕ್ಕ ರಾಣಿಯ ಧೈರ್ಯ ಸ್ಥೈರ್ಯ, ಛಲ ಸಾಹಸ, ದಿಟ್ಟತನಗಳು ನಮಗೆಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸಿದರು.

ತುಳುನಾಡಿನ ಕಡಲ ತಡಿಯ ಉಳ್ಳಾಲವನ್ನು ಆಳುತ್ತಲೇ ಪೋರ್ಚುಗೀಸರ ವಿರುದ್ಧ ಕೆಚ್ಚೆದೆಯ ಸಮರ ಸಾರಿ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಎನಿಸಿಕೊoಡ ತುಳುನಾಡ ರಾಣಿ ಅಬ್ಬಕ್ಕನ ಸಾಹಸಗಾಥೆ ಇಡೀ
ಜಗತ್ತಿನ ಇತಿಹಾಸ ಪುಟಗಳಲ್ಲಿ ದಾಖಲುಗೊಂಡಿದ್ದರೂ ಸಹಾ ಭಾರತದ ಇತಿಹಾಸ ಬಿಡಿ, ಕನಿಷ್ಠ ಪಠ್ಯ ಪುಸ್ತಕಗಳಲ್ಲಾದರೂ ದಖಲಾಗದಿರುವುದು ಘೋರ ದುರಂತವೆಂದು ಉಪನ್ಯಾಸಕ ರೂ, ಸಾಹಿತಿಗಳೂ,ಸಂಶೋಧಕರೂ ಹಾಗೂ ಚಲನ ಚಿತ್ರ ನಿರ್ದೇಶಕರೂ ಆದ ಬಿ.ಎ..ಲೋಕಯ್ಯ ಶಿಶಿಲ ವಿಷಾದ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕರಾದ ಡಾ. ಮಾಧವ್ ಎಂ.ಮಾತನಾಡುತ್ತಾ ಅಬ್ಬಕ್ಕ ರಾಣಿ ಆಗಿನ ಕಾಲದಿಂದ ಹಿಡಿದು ಈಗಿನ ಮತ್ತು ಮುಂದಿನ ತಲೆಮಾರಿಗೂ ಸಾರ್ವಕಾಲಿಕ ಪ್ರೇರಕ ಶಕ್ತಿಯಾಗಿ ಉಳಿಯುತ್ತಾಳೆ. ಈ ಕಾರಣಕ್ಕಾಗಿಯೇ ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಉಪನ್ಯಾಸಕರ ಸಂಘ ಸರಣಿ ಉಪನ್ಯಾಸ ಮಾಲಿಕಾ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿ ಸಮುದಾಯಗಳಲ್ಲಿ ಪ್ರೇರಣೆ ಮೂಡಿಸುವ ಕಾರ್ಯದಲ್ಲಿ ತೊಡಗಿದೆ ಎಂದರು. ಪ್ರಸನ್ನ ಕಾಲೇಜಿನ ಪ್ರಾಂಶುಪಾಲರಾದ ಗುರುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಕ, ಸಾಹಿತಿ ಬಿ.ಎ.ಲೋಕಯ್ಯ ಶಿಶಿಲ ಮಾತನಾಡಿದರು.

ಅಬ್ಬಕ್ಕ ರಾಣಿ ಆಳ್ವಿಕೆಯ 500ನೇ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸರಣಿ ಉಪನ್ಯಾಸ ಮಾಲಿಕಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಪನ್ಯಾಸಕ, ಸಾಹಿತಿ ಬಿ.ಎ.ಲೋಕಯ್ಯ ಶಿಶಿಲ ತಮ್ಮ ಕಳವಳ ವ್ಯಕ್ತಪಡಿಸಿದರು.

ದೊಂದಿ ಮತ್ತು ನಾಡ ಕೋವಿಗಳಿಂದಲೇ ಯುದ್ಧ ಗೆದ್ದ ಅಬ್ಬಕ್ಕ – ಬಿ.ಎ.ಲೋಕಯ್ಯ ಶಿಶಿಲ
ತುಳುನಾಡು ಸೇರಿದಂತೆ ಭಾರತದ ಬಹುತೇಕ ರಾಜರು ತಮ್ಮ ಸ್ವಾರ್ಥಸಾಧನೆಗೋಸ್ಕರ ಪರಕೀಯ ಪೋರ್ಚುಗೀಸರೊಂದಿಗೆ ಸೇರಿಕೊಂಡು ತಮ್ಮತಮ್ಮ ತಮ್ಮೊಳಗೇ ಪರಸ್ಪರ ಯುದ್ಧ ಕಲಹಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಆ ಕಾಲದಲ್ಲಿ ಯಾವುದೇ ಸ್ವಾರ್ಥವಿಲ್ಲದೆ ತುಳುನಾಡು ಸೇರಿದಂತೆ ಭಾರತದ ನೆಲದಲ್ಲಿ ಭದ್ರವಾಗಿ ನೆಲೆಯೂರಲು ಯತ್ನಿಸುತ್ತಿದ್ದ ಆ ಪರಕೀಯ ಪೋರ್ಚುಗೀಸರ ವಿರುದ್ಧ, ತುಳುನಾಡು ನೆಲದ ಓರ್ವ ಹೆಣ್ಣುಮಗಳಾಗಿ ಕೆಚ್ಚೆದೆಯಿಂದ ಹೋರಾಡಿ ಭಾರತದಲ್ಲಿ ಮೊತ್ತ ಮೊದಲು ಸ್ವಾತಂತ್ರ್ಯದ ಕ್ರಾಂತಿ ಕಹಳೆ ಮೊಳಗಿಸಿದ ಕೀರ್ತಿ ರಾಣಿ ಅಬ್ಬಕ್ಕನದ್ದಾಗಿದೆ.

ಹೀಗಾಗಿಯೇ ಯಾವುದೇ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರದೇ ಬೆರಳೆಣಿಕೆಯ ಸೈನಿಕರನ್ನಷ್ಟೇ ಹೊಂದಿದ್ದ ಅಬ್ಬಕ್ಕ ರಾಣಿ ಕೇವಲ ತೆಂಗಿನ ಗರಿಗಳ ಸೂಟೆ (ದೊಂದಿ) ಮತ್ತು ನಾಡಕೋವಿಗಳಿಂದಲೇ ತಂತ್ರಗಾರಿಕೆಯಿಂದ ಶಸ್ತ್ರ ಸಜ್ಜಿತ ನೌಕಾಬಲವನ್ನು ಹೊಂದಿದ್ದ ಪೋರ್ಚುಗೀಸರನ್ನು ಪ್ರತಿ ಬಾರಿಯೂ ಸೋಲಿಸುತ್ತಿದ್ದುದೇ ಅಬ್ಬಕ್ಕ ರಾಣಿಯ ಚಾಣಾಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ. ಇದೇ ಕಾರಣಕ್ಕಾಗಿಯೇ ಪೋರ್ಚುಗಲ್ ಸಹಿತ ಜರ್ಮನಿ ಮುಂತಾದ ಪಾಶ್ಚಿಮಾತ್ಯ ರಾಷ್ಟ್ರಗಳ ದಾಖಲೆಗಳಲ್ಲಿ ಆ ಕಾಲದಲ್ಲೇ ಅಬ್ಬಕ್ಕ ರಾಣಿಯನ್ನು ದೊಂದಿ ಬಾಣದ ರಾಣಿ, ರೈನ್ ಡಿ ಉಳ್ಳಾಲ್ ಎಂದು ಮುಂತಾಗಿ ವರ್ಣಿಸಲಾಗಿದ್ದು ಈಗಲೂ ಆ ದೇಶಗಳಲ್ಲಿ ಅಬ್ಬಕ್ಕರಾಣಿಯನ್ನು ಸದಾ ನೆನಪಿಸಿಕೊಳ್ಳುತ್ತಿದ್ದಾರೆ.

ಆದರೆ ಪೋರ್ಚುಗೀಸರ ವಿರುದ್ಧ ಹೋರಾಡಲು ಸ್ವತಃ ತನ್ನ ಗಂಡನನ್ನೇ ತ್ಯಜಿಸಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿ ಕಹಳೆ ಮೊಳಗಿಸಿದ ಕಡಲ ತಡಿಯ ಸಿಂಹಿಣಿಯಾಗಿದ್ದ ಈ ತುಳುನಾಡ ರಾಣಿ ಅಬ್ಬಕ್ಕನಿಗೆ ಮಾತ್ರ ಭಾರತದ ಇತಿಹಾಸದ ಪುಟಗಳಲ್ಲಾಗಲೀ ಅಥವಾ ಕನಿಷ್ಠ ಶಾಲಾ ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಾಗಲಿ ಯಾವುದೇ ಸ್ಥಾನ ಮಾನ ಸಿಗದಂತಾಗಿರುವುದು ಮತ್ತು ತುಳುನಾಡಿನ ತುಳುವರು ಸೇರಿದಂತೆ ಪ್ರತಿಯೊಬ್ಬ ಭಾರತೀಯನೂ ಸಹ ಈಕೆಯ ಕುರಿತಾಗಿ ಕೃತಘ್ನರಾಗಿರುವುದು ಘೋರಾತಿ ಘೋರ ದುರಂತವೆಂದು ಅವರು ಖೇದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಶೃತಿ ಎನ್ ಧನ್ಯವಾದವಿತ್ತರು. ಬಳಿಕ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು.

Comments are closed.