ಕುಕ್ಕೆ ಚಂಪಾಷಷ್ಠಿ: ಚೌತಿ ದಿನ ನಡೆದ ಎಡೆಸ್ನಾನ; ಪಂಚಮಿ ಮತ್ತು ಷಷ್ಠಿಯಂದೂ ಎಡೆಸೇವೆ ಲಭ್ಯ

Share the Article

ಸುಬ್ರಹಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನವಾದ ಸೋಮವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ 110 ಮಂದಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು. ಇನ್ನು, ಬರುವ ಪಂಚಮಿ ಮತ್ತು ಷಷ್ಠಿಯಂದೂ ಈ ಎಡೆ ಸೇವೆ ನೆರವೇರಲಿದೆ.

ಧಾರ್ಮಿಕ ದತ್ತಿಯ ಶೈವಾಗಮ ಪಂಡಿತರ ಮಾರ್ಗದರ್ಶನದಂತೆ ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತಲೂ 432 ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇದ್ಯಗಳನ್ನು ಬಡಿಸಲಾಯಿತು. ಬಳಿಕ ದೇವಸ್ಥಾನದ ಗೋವುಗಳು ಆ ಎಲೆಗಳಲ್ಲಿದ್ದ ಅನ್ನಪ್ರಸಾದವನ್ನು ತಿಂದವು. ಮಿಕ್ಕುಳಿದ ಅನ್ನಪ್ರಸಾದದ ಮೇಲೆ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ನಿಂತಿದ್ದ ಭಕ್ತರು ಉರುಳು ಸೇವೆ ಕೈಗೊಂಡರು.

ಎಲ್ಲ ವಯೋಮಾನದ ಭಕ್ತರು ಅಲ್ಲಿದ್ದು, ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಭಕ್ತರು ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ದೇವರ ಪ್ರಸಾದ ಮತ್ತು ಪ್ರಸಾದ ಭೋಜನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜು ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Comments are closed.