Mangalore: ಮಂಗಳೂರು: ಯಕ್ಷಗಾನ, ಕಂಬಳ, ಜಾತ್ರೆಗಿಲ್ಲ ಅಡ್ಡಿ: ಜಿಲ್ಲಾಡಳಿತದಿಂದ ಮಹತ್ವದ ಮಾಹಿತಿ

Share the Article

Mangalore: ರಾತ್ರಿ ವೇಳೆ ಕಂಬಳ, ಯಕ್ಷಗಾನ ಹಾಗೂ ಜಾತ್ರೆ ಆಚರಣೆಗಳಿಗೆ ಅಡ್ಡಿಪಡಿಸುವುದಿಲ್ಲ ಎಂದು ಜಿಲ್ಲಾಡಳಿತ ಭರವಸೆ ನೀಡಿದೆ. ಆದರೆ, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಆಸುಪಾಸಿನ ನಿವಾಸಿಗಳಿಗೆ ಕಿರಿಕಿರಿಯಾಗದಂತೆ ಎಚ್ಚರ ವಹಿಸಬೇಕು ಎಂದೂ ಜಿಲ್ಲಾಡಳಿತ ಸೂಚಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಯಿತು.‘ಧ್ವನಿವರ್ಧಕ ಬಳಕೆಯ ನೆಪ ಹೇಳಿ ರಾತ್ರಿ ವೇಳೆ ಕಂಬಳಕ್ಕೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ ನೀಡಬೇಕು’ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಒತ್ತಾಯಿಸಿದರು. ‘ರಾತ್ರಿ ವೇಳೆ ನಡೆಯುವ ಜಾತ್ರೆಗಳಿಗೂ ಅಡ್ಡಿಪಡಿಸಬಾರದು ಎಂದು ಶಾಸಕಿ ಭಾಗಿರಥಿ ಮುರುಳ್ಯ ಒತ್ತಾಯಿಸಿದರು.ಯಕ್ಷಗಾನಕ್ಕೆ ಅಡ್ಡಿಪಡಿಸಿ ಜನರ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಉಂಟುಮಾಡಬೇಡಿ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಕೋರಿದರು. ‘ಜಿಲ್ಲಾಡಳಿತವು ಇಂತಹ ಯಾವುದೇ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿಲ್ಲ’ ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ ಸ್ಪಷ್ಟಪಡಿಸಿದರು.ಅಕ್ಕಪಕ್ಕದವರಿಗೆ ತೊಂದರೆಯಾಗದಂತೆ ಕಂಬಳ, ಯಕ್ಷಗಾನ ಆಯೋಜಿಸಿದರೆ, ಅನುಮತಿ ನೀಡಲು ಅಡ್ಡಿ ಇಲ್ಲ. ಸ್ಥಳೀಯರಿಂದ ದೂರು ಬಂದಾಗ ಮಾತ್ರ ಪೊಲೀಸರು ಕ್ರಮಕೈಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್‌ ಕೆ. ತಿಳಿಸಿದರು.

Comments are closed.