ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ

RSS Chittapura: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠ ಮಹತ್ವದ ಆದೇಶವನ್ನು ನೀಡಿದೆ. ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಕೆಲ ಷರತ್ತುಗಳ ಮೂಲಕ ನ.16 ರಂದು ಪಥಸಂಚಲನಕ್ಕೆ ಅವಕಾಶ ನೀಡಲಾಗಿದೆ.

ಕೋರ್ಟ್ ಆರ್‌ಎಸ್‌ಎಸ್ ಪಥಸಂಚಲನಕ್ಕೆ ನೀಡಿದ ಸಮಯವನ್ನು ಕಡಿತ ಮಾಡಿದೆ. ಮಧ್ಯಾಹ್ನ 3.30 ರಿಂದ ಸಂಜೆ 6.30 ಗಂಟೆ ವರೆಗೆ ಅವಕಾಶ ಕೋರಲಾಗಿತ್ತು. ಆದರೆ ಕೋರ್ಟ್ ಮಧ್ಯಾಹ್ನ 3.30 ರಿಂದ ಸಂಜೆ 5.45 ರವರೆಗೆ ಅವಕಾಶ ನೀಡಿದೆ.
ಆರ್‌ಎಸ್ಎಸ್ ಪಥಸಂಚಲನದ ವೇಳೆ 850 ಗಣವೇಷಧಾರಿಗಳಿಗೆ ಅವಕಾಶ ನೀಡಬೇಕು ಎಂದು ಕೋರ್ಟ್‌ಗೆ ಆರ್‌ಎಸ್ಎಸ್ ಸಲ್ಲಿಸಿಸಿದ್ದ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಆದರೆ ಅರ್ಜಿ ವಿಚಾರಣೆ ವೇಳೆ ಜಡ್ಜ್ ಗಣವೇಷಧಾರಿಗಳ ಸಂಖ್ಯೆ ಇಳಿಕೆ ಮಾಡಲು ಸೂಚಿಸಿದ್ದಾರೆ. ಈ ವೇಳೆ ಕನಿಷ್ಠ 600 ಜನ ಭಾಗವಹಿಸಲು ಅವಕಾಶ ನೀಡುವಂತೆ ಅರ್ಜಿದಾರ ಪರ ವಕೀಲ ಅರುಣ್ ಶ್ಯಾಮ್ ಮನವಿ ಮಾಡಿದ್ದರು. ಆದರೆ ಜಡ್ಜ್ ಕೇವಲ 300 ಗಣವೇಶಧಾರಿಗಳು ಮಾತ್ರ ಪಾಲ್ಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಆರ್‌ಎಸ್ಎಸ್ ಪಥಸಂಚಲನದ ವೇಳೆ ಬ್ಯಾಂಡ್ ಸಿಬ್ಬಂದಿಯನ್ನು ಕೋರ್ಟ್ 25ಕ್ಕೆ ಸೀಮಿತಗೊಳಿಸಿತ್ತು. ಆದರೆ ವಕೀಲ ಅರುಣ್ ಶ್ಯಾಮ್ ಬ್ಯಾಂಡ್ ಸಿಬ್ಬಂದಿಯನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಕೋರ್ಟ್ ಬ್ಯಾಂಡ್ ಸಿಬ್ಬಂದಿ ಸಂಖ್ಯೆ 50ಕ್ಕೆ ಏರಿಸಿದೆ. ಹೀಗಾಗಿ ಬ್ಯಾಂಡ್ ಸಿಬ್ಬಂದಿ ಸೇರಿದಂತೆ ಒಟ್ಟು 350 ಜನ ಆರ್‌ಎಸ್ಎಸ್ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
Comments are closed.