Dakshina Kannada: ದಕ್ಷಿಣ ಕನ್ನಡದ ‘ಕೆಂಪು ಕಲ್ಲು’ ಹೊರ ಜಿಲ್ಲೆಗೆ ಸಾಗಾಟಕ್ಕೆ ಅನುಮತಿಯಿಲ್ಲ

Dakshina Kannada: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಕೊರತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿರುವ ಜಿಲ್ಲಾಡಳಿತವು ಸದ್ಯಕ್ಕೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯೊಳಗೆ ಮಾತ್ರ ಕೆಂಪು ಕಲ್ಲು ಸಾಗಾಟಕ್ಕೆ ಅನುಮತಿ ನೀಡಿದೆ. ಹೀಗಾಗಿ ದಕ್ಷಿಣ ಕನ್ನಡದ ಕೆಂಪುಕಲ್ಲನ್ನು ಉಡುಪಿ ಅಥವಾ ಉತ್ತರ ಕನ್ನಡಕ್ಕೆ ಸಾಗಿಸಲು ಸದ್ಯಕ್ಕೆ ಗಣಿ ಇಲಾಖೆ ನಿರ್ಬಂಧ ವಿಧಿಸಿದೆ.

ಸದ್ಯ ಕಾನೂನಿನಲ್ಲಿ ಕೊಂಚ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಕೆಂಪು ಕಲ್ಲು ಸಾಗಾಟ ಕೆಲವು ದಿನಗಳಿಂದ ಮರಳಿ ಆರಂಭವಾಗಿದೆ. ಸದ್ಯ 50 ಮಂದಿ ಕೆಂಪುಕಲ್ಲು ಸಾಗಾಟಕ್ಕೆ ಅನುಮತಿ ಪಡೆದಿದ್ದಾರೆ. ಬೇಡಿಕೆಯೂ ಅಧಿಕವಿದೆ. ಇಂತಹ ಸಂದರ್ಭದಲ್ಲಿ ಕೆಂಪು ಕಲ್ಲು ಇತರ ಜಿಲ್ಲೆಗೆ ಸಾಗಾಟ ಮಾಡಿದರೆ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರತೆ ಉಲ್ಬಣಿಸಬಹುದು ಎಂಬ ಲೆಕ್ಕಾಚಾರದಿಂದ ಈಗ ಜಿಲ್ಲೆಯೊಳಗೆ ಮಾತ್ರ ಸಾಗಾಟ ಎಂಬ ನಿಯಮ ಜಾರಿಯಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಕೆಂಪು ಕಲ್ಲು ಬೇಡಿಕೆಗೆ ಬೇಕಾದಷ್ಟು ಸಿಗದ ಕಾರಣ ಹಾಗೂ ಪರವಾನಿಗೆ ಪಡೆದವರ ಸಂಖ್ಯೆಯೂ ಕಡಿಮೆ ಇರುವ ಕಾರಣ ಹೊರಜಿಲ್ಲೆಗೆ ನಿರ್ಬಂಧ ನಿಯಮವನ್ನು ದ.ಕ. ಜಿಲ್ಲಾ ಟಾಸ್ಕ್ ಪೋರ್ಸ್ ಜಾರಿಗೊಳಿಸಿದೆ. ಮುಂದೆ ಬೇಡಿಕೆ ಕಡಿಮೆ ಆಗಿ, ಅಧಿಕ ಮಂದಿ ಪರವಾನಿಗೆ ಪಡೆದರೆ ಉಡುಪಿ, ಕಾಸರಗೋಡು ಜಿಲ್ಲೆಗಳಿಗೂ ಕೆಂಪು ಕಲ್ಲು ಸಾಗಾಟ ನಡೆಸಲು ಅವಕಾಶ ಸಿಗುವ ಸಾಧ್ಯತೆ ಇದೆ.
ಇನ್ನು ಕೆಂಪು ಕಲ್ಲು ತೆಗೆಯಲು ಒಂದು ವರ್ಷಕ್ಕೆ ಅನುಮತಿ ನೀಡಿ ಬಳಿಕದ ವರ್ಷಂಪ್ರತಿ ನವೀಕರಿಸಬೇಕು ಎಂದು ಇತ್ತೀಚೆಗೆ ಹೇಳಲಾಗಿತ್ತು. ಆದರೆ ಸರಕಾರದಿಂದ ಬಂದ ಇತ್ತೀಚೆಗಿನ ಮಾರ್ಗಸೂಚಿಯಲ್ಲಿ ‘ನವೀಕರಣ’ದ ಉಲ್ಲೇಖವಿಲ್ಲ. ಬದಲಾಗಿ ಒಂದು ವರ್ಷ ಆದ ಬಳಿಕ ಮತ್ತೆ ಹೊಸದಾಗಿ ಅನುಮತಿ ಪಡೆಯಬೇಕು.
ಕೆಂಪು ಕಲ್ಲುಸಾಗಾಟ ಕರಾವಳಿಗೆ ಮಾತ್ರ?
‘ಪರವಾನಿಗೆದಾರರು ಖನಿಜ ಸಾಗಾಣಿಕೆ ಪರವಾನಿಗೆ ಪಡೆದು ಕರಾವಳಿ ಜಿಲ್ಲೆಗಳಿಗೆ ಮಾತ್ರ ಲ್ಯಾಟರೈಟ್ ಬ್ರಿಕ್ಸ್ ಸಾಗಾಟ ಮಾಡಬೇಕು’ ಎಂದು ಸರಕಾರ ಇತ್ತೀಚೆಗೆ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಉಲ್ಲೇಖವಾಗಿದೆ. ಈ ಪ್ರಕಾರ ಲಭ್ಯತೆ ಪರಿಸ್ಥಿತಿ ಸುಧಾರಿಸಿದ ಬಳಿಕವೂ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾತ್ರ ಕೆಂಪು ಕಲ್ಲು ಸಾಗಾಟ ಮಾಡಬೇಕಾಗಿದೆ. ಹೀಗಾಗಿ ಬೆಂಗಳೂರು ಸಹಿತ ಹೊರ ಜಿಲ್ಲೆಗಳಲ್ಲಿರುವ ಮೂಲತಃ ಕರಾವಳಿ ಭಾಗದವರು ಅಲ್ಲಿ ಮನೆ ನಿರ್ಮಾಣಕ್ಕೆ ಇಲ್ಲಿನ ಕೆಂಪುಕಲ್ಲು ಕೊಂಡೊಯ್ಯಲು ಅವಕಾಶ ಇಲ್ಲ. ಪಕ್ಕದ ಕೇರಳಕ್ಕೂ ಸಾಗಾಟ ಮಾಡಲು ಅವಕಾಶ ಇರುವುದಿಲ್ಲ.
ಕಾರ್ಯಪಡೆಯಲ್ಲಿ ತೀರ್ಮಾನ
ಕೆಂಪು ಕಲ್ಲು ಕರಾವಳಿ ಭಾಗಕ್ಕೆ ಮಾತ್ರ ಎಂದು ಸರಕಾರದ ಮಾರ್ಗಸೂಚಿಯಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಕಲ್ಲಿನ ಬೇಡಿಕೆ ಈಗ ಅಧಿಕ ಇದೆ. ಕೇವಲ 50 ಪರವಾನಿಗೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಈಗ ಕೊಂಚ ನಿಯಂತ್ರಣ ಮಾಡದಿದ್ದರೆ ಮತ್ತೆ ದ.ಕ. ಜಿಲ್ಲೆಯಲ್ಲಿ ಕೊರತೆ ಎದುರಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಮಾತ್ರ ಸಾಗಾಟ ಎಂಬ ನಿಯಮವನ್ನು ಕಾರ್ಯಪಡೆ ಮೂಲಕ ಸದ್ಯ ಜಾರಿಗೆ ತರಲಾಗಿದೆ.
Comments are closed.