Education Department : ಮಳೆ ಮತ್ತು ದಸರಾ ರಜೆ ಸರಿದೂಗಿಸಲು ಶಿಕ್ಷಣ ಇಲಾಖೆಯಿಂದ ಮಾಸ್ಟರ್ ಪ್ಲಾನ್

Education Department : ರಾಜ್ಯದಲ್ಲಿ ಈ ಬಾರಿ ಕರಾವಳಿ ಭಾಗದಲ್ಲಿ ಸಿಕ್ಕಾಪಟ್ಟೆ ಮಳೆಯಾದ ಕಾರಣ ಹಲವಡೆ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಜಾತಿ ಗಣತಿಗಾಗಿ ದಸರಾ ರಜೆಯನ್ನು ಕೂಡ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಸರ್ಕಾರ ಪ್ರಕಟಿಸಿದ್ದ ಸಾರ್ವಜನಿಕ ರಜೆಪಟ್ಟಿಗಿಂತಲೂ ಈ ಬಾರಿ ಹೆಚ್ಚಿನ ರಜೆ ಶಾಲಾ ಕಾಲೇಜುಗಳಿಗೆ ದೊರೆತು ಶೈಕ್ಷಣಿಕ ಕಾರ್ಯಗಳಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಮಳೆ ಮತ್ತು ದಸರಾ ರಜೆ ಸರಿದೂಗಿಸಲು ಶಿಕ್ಷಣ ಇಲಾಖೆ ಮಾಸ್ಟರ್ ಪ್ಲಾನ್ ಹೆಣೆದಿದೆ.

ದಸರಾ ರಜೆ ಮುಗಿಸಿ ಮಂಗಳವಾರ ಶಾಲೆಗಳಿಗೆ ವಿದ್ಯಾರ್ಥಿಗಳು ಮರಳಬೇಕಿತ್ತು, ಆದರೆ ಕೆಲವು ಶಾಲೆಗಳಿಗೆ ದೀಪಾವಳಿ ರಜೆಯ ಕಾರಣ ಶಾಲೆಗಳು ಹಲವೆಡೆ ಗುರುವಾರದಿಂದ ಆರಂಭ ಆಗಿದೆ. ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದಾಗಿ ದಸರಾ ರಜೆಯನ್ನು ಅಕ್ಟೋಬರ್ 18 ರವರೆಗೆ ವಿಸ್ತರಿಸಲಾಗಿತ್ತು. ಇದರ ಜೊತೆಗೆ, ಕರಾವಳಿ ಭಾಗದಲ್ಲಿ ಮಳೆಯಿಂದಾಗಿ ಹತ್ತಕ್ಕೂ ಹೆಚ್ಚು ರಜೆಗಳನ್ನು ಜಿಲ್ಲಾಡಳಿತ ನೀಡಿದ್ದರಿಂದ, ಈ ಬಾರಿ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಸರಿದೂಗಿಸಲು ಶಿಕ್ಷಣ ಇಲಾಖೆಗೆ ದೊಡ್ಡ ಸವಾಲು ಎದುರಾಗಿದೆ.
ಈ ಶೈಕ್ಷಣಿಕ ವರ್ಷದಲ್ಲಿ, ಮುಖ್ಯವಾಗಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪಠ್ಯಕ್ರಮವನ್ನು ಮುಗಿಸಲೇಬೇಕಾಗುತ್ತದೆ. ಜನವರಿಯಿಂದ ಫೆಬ್ರವರಿಯೊಳಗೆ ಪಠ್ಯಕ್ರಮ ಮುಗಿಸುವುದಕ್ಕಿಂತ ಹೆಚ್ಚಾಗಿ ಪರೀಕ್ಷೆಗಳನ್ನು ಮುಗಿಸಿಕೊಳ್ಳುವುದೇ ಕಷ್ಟಕರವಾಗಬಹುದು. ಹೀಗಾಗಿ ಶಿಕ್ಷಣ ಇಲಾಖೆಯ ಶನಿವಾರ ಮತ್ತು ಭಾನುವಾರದಂದು ಶಾಲೆಗಳನ್ನು ನಡೆಸಲು ಚಿಂತನೆ ನಡೆಸಿದೆ. ಆದರೆ ಈ ಬಗ್ಗೆ ಒಮ್ಮತದ ಅಭಿಪ್ರಾಯವಿಲ್ಲದ ಕಾರಣ ಸದ್ಯದಲ್ಲೇ ಶಿಕ್ಷಣ ಇಲಾಖೆಯು ಅಧಿಕಾರಿಗಳೊಂದಿಗೆ ಚರ್ಚಿಸಿ ದಸರಾ ಮತ್ತು ಮಳೆಯ ರಜೆಯನ್ನು ಸರಿದೂಗಿಸಲು ಹೊಸದೊಂದು ಪ್ಲಾನ್ ಸಿದ್ಧಮಾಡಲಿದೆ ಎಂದು ತಿಳಿದು ಬಂದಿದೆ.
Comments are closed.