ವಿರೋಧಗಳ ಮಧ್ಯೆಯೇ ತುಳು ಆರಾಧ್ಯ ದೈವ ಕೊರಗಜ್ಜ ಸಿನಿಮಾ ತೆರೆಗೆ ತಯಾರಿ: ನಲ್ಕೆ ಸಂಘಟನೆಗಳಿಂದ ಭಾರಿ ಪ್ರತಿಭಟನೆಗೆ ಸಿದ್ಧತೆ!

ಬೆಂಗಳೂರು: ತುಳುನಾಡಿನ ದೈವಾರಾಧನೆಯ ಕಟ್ಟು ಕಟ್ಟಳೆ, ಸಂಪ್ರದಾಯ, ಕಾನೂನು, ನಿಯಮ, ನಿಬಂಧನೆಗಳನ್ನೆಲ್ಲ ಉಲ್ಲಂಘಿಸಿ ರಿಷಭ್ ಶೆಟ್ಟಿ ನಿರ್ಮಿಸಿದ್ದ ಮೊದಲಿನ ಕಾಂತಾರ ಮತ್ತು ಕಾಂತಾರ ಚಾಪ್ಟರ್ 1 ಚಲನ ಚಿತ್ರ ಪ್ರದರ್ಶನದ ಬಳಿಕ ಜಗತ್ತಿನಾದ್ಯಂತ ಎಲ್ಲೆಂದರಲ್ಲಿ ದೈವಗಳ ವೇಷ ಭೂಷಣ ತೊಟ್ಟು ಹುಚ್ಚಾಟ, ವಿಡಂಬನೆ, ಅಪಹಾಸ್ಯಗಳು ದಿನೇದಿನೇ ವ್ಯಾಪಕವಾಗುತ್ತಿರುವ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ತುಳುನಾಡಿನಾದ್ಯಂತ ಭಾರಿ ಆಕ್ರೋಶ, ವಿರೋಧ, ಚರ್ಚೆಗಳು ವ್ಯಾಪಕವಾಗುತ್ತಿವೆ.

ಆದರೆ ಇದರ ನಡುವೆಯೇ ತುಳುನಾಡಿನ ದೈವಾರಾಧನೆಯ ಪದ್ಧತಿ, ಪರಂಪರೆ, ಕಾನೂನು ಕಟ್ಟಳೆಗಳಿಗೆ ವಿರುದ್ಧವಾಗಿ ಇದೀಗ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಕುರಿತ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗಿದ್ದು ಆ ಮೂಲಕ ತುಳುನಾಡಿನ ಆರಾಧ್ಯ ಕೊರಗಜ್ಜ ದೈವವೂ ಕಾಂತಾರ ಸಿನಿಮಾದ ದೈವಗಳಂತೆ ಅನುಕರಣೆ, ಅಪಹಾಸ್ಯ, ಹುಚ್ಚಾಟ, ವಿಡಂಬನೆಗೆ ಕಾರಣವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ ಎನ್ನುವ ಆತಂಕ ತುಳುನಾಡಿನ ಎಲ್ಲೆಡೆಯಿಂದ ವ್ಯಕ್ತವಾಗುತ್ತಿರುವುದರ ಜೊತೆಗೆ ಭಾರಿ ವಿರೋಧ ಆಕ್ರೋಶಗಳು ಕಂಡುಬರುತ್ತಿವೆ.
ಕೆಲವು ವರ್ಷಗಳ ಹಿಂದೆ ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಮೊದಲು ‘ಕರಿ ಹೈದ ಕರಿ ಅಜ್ಜ’ ಎಂಬ ಹೆಸರಿನಲ್ಲಿ ಕೊರಗಜ್ಜನ ಸಿನಿಮಾ ನಿರ್ಮಿಸಲಾಗುತ್ತದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಇದಕ್ಕೆ ತುಳುನಾಡಿನಾದ್ಯಂತ ಭಾರಿ ಆಕ್ರೋಶ, ವಿರೋಧಗಳು ವ್ಯಕ್ತವಾಗತೊಡಗಿದವು. ಇದರ ಜೊತೆಯಲ್ಲೇ ನಲ್ಕೆ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಮುಂದಾದವು. ಇದರ ಪರಿಣಾಮ ಕಳಸದ ಕಾಡಿನ ಮಧ್ಯೆ ಸಿನಿಮಾ ನಿರ್ದೇಶಕ ಸುಧೀರ್ ಅತ್ತಾವರ್ ನೇತೃತ್ವದ ಚಲನಚಿತ್ರ ತಂಡ ದೈವದ ವೇಷ ಹಾಗೂ ಕೊರಗ ಸಮುದಾಯದ ವೇಷ ತೊಟ್ಟು ಅನಧಿಕೃತ ಚಿತ್ರೀಕರಣ ನಡೆಸುತ್ತಿರುವುದನ್ನು ತಿಳಿದ ನಲ್ಕೆ ಸಂಘಟನೆಗಳ ಕಾರ್ಯಕರ್ತರು ಅಲ್ಲಿಗೆ ತೆರಳಿ, ಈ ಬಗ್ಗೆ ಪ್ರಶ್ನಿಸಿ ದೈವದ ಕೃತಕವೇಶ ತೊಟ್ಟು, ದೈವದ ಅನುಕರಣೆ, ಅಪಹಾಸ್ಯ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬ ಕಾನೂನು ಇರುವ ಬಗ್ಗೆ ದಾಖಲೆ ಸಮೇತ ವಿವರಿಸಿದ್ದರು. ಈ ವೇಳೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತವರ ಕಂಡ ನಲ್ಕೆ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದರು ಎನ್ನಲಾಗಿತ್ತು. ಆಗ ಸಂಘಟನೆಯ ಕಾರ್ಯಕರ್ತರು ಚಲನಚಿತ್ರ ತಂಡಕ್ಕೆ ತಕ್ಕ ಪಾಠ ಕಲಿಸಿ ಚಿತ್ರೀಕರಣವನ್ನು ನಿಲ್ಲಿಸಿದರು. ಆದರೆ ಆ ಬಳಿಕ ನಿರ್ದೇಶಕ ಸುದೀರ್ ಅತ್ತಾವರ್ ಕೇರಳಕ್ಕೆ ತೆರಳಿ ಅಲ್ಲಿ ಚಿತ್ರಿಕರಣವನ್ನು ನಡೆಸಿದ್ದರು.
ಇದಾದ ಬಳಿಕ ಚಲನಚಿತ್ರ ತಂಡಕ್ಕೆ ಕೆಲವೊಂದು ಅಡ್ಡಿ ಆತಂಕಗಳು ಎದುರಾಗತೊಡಗಿದಾಗ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತು ಚಲನಚಿತ್ರ ತಂಡ ಕುತ್ತಾರು ಶ್ರೀ ಕೊರಗಜ್ಜ ಸನ್ನಿಧಿಯಲ್ಲಿ ಈ ಬಗ್ಗೆ ಅರಿಕೆ ಮಾಡಿಕೊಂಡಾಗ ಕೊರಗಜ್ಜ ಚಲನಚಿತ್ರ ನಿರ್ಮಾಣವನ್ನು ಕೈಬಿಡುವಂತೆ ಸಾನಿಧ್ಯದಿಂದ ಸೂಚನೆ ಬಂತೆನ್ನಲಾಗುತ್ತಿದೆ. ಆದರೆ ನಿರ್ದೇಶಕ ಸುಧೀರ್ ಅತ್ಥಾವರ ಮಾತ್ರ ಈ ರೀತಿಯ ದೈವ ಸಂಕಲ್ಪವನ್ನು ಮೀರಿಯೂ ಕೂಡ ತಪ್ಪು ಕಾಣಿಕೆ ಹಾಕಿ ಮತ್ತೆ ಕೊರಗಜ್ಜನ ಸಹಿತ ಇತರ ದೈವಗಳ ಹಾಗೂ ಕೊರಗ ಸಮುದಾಯದ ವೇಷಭೂಷಣವನ್ನು ಇತರರಿಗೆ ತೊಡಿಸಿ ಚಿತ್ರೀಕರಣವನ್ನು ಮುಂದುವರಿಸಿ ಪೂರ್ಣಗೊಳಿಸಿದ್ದರು.
ಇದಾದ ಬಳಿಕ ಮೊನ್ನೆ ನಡೆದ ಸಿನಿಮಾ ಪ್ರಮೋಷನ್ ವೇಳೆ ನಿರ್ದೇಶಕ ಸುಧೀರ್ ಅತ್ತಾವರ್ ಮಾತನಾಡುತ್ತಾ ಹಿಂದೆ ಕಳಸದಲ್ಲಿ ಕತ್ತಲೆಯ ವ್ಯಕ್ತಿಯೊಬ್ಬ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪರೋಕ್ಷವಾಗಿ ದಯಾನಂದ ಕತ್ತಲ್ ಸಾರ್ ಮೇಲೆ ಅನುಮಾನ ವ್ಯಕ್ತಪಡಿಸಿ ಏಕವಚನದಲ್ಲಿ ಮಾತನಾಡಿದವು ದೃಶ್ಯಾವಳಿ ಇದೀಗ ಎಲ್ಲೆಡೆ ವೈರಲಾಗುತ್ತಿದೆ. ಮಾತ್ರವಲ್ಲ ಇದೇ ದೃಶ್ಯಾವಳಿಯಲ್ಲಿ ಸುಧೀರ್ ಅತ್ತಾವರ್ ಮಾತನಾಡುತ್ತಾ ಕೊರಗಜ್ಜ ನೇಮಕಟ್ಟುವ ನಲ್ಕೆ ಸಮುದಾಯದವರನ್ನು ಹೀನಾಯವಾಗಿ ಅವಮಾನಿಸುವ ಮತ್ತು ಕೊರಗಜ್ಜ ದೈವಕ್ಕೆ ನೇಮ ಕೈಗೊಳ್ಳುವ ಸಮುದಾಯದ ವರು ಮತ್ತು ಕೊರಗ ಸಮುದಾಯದವರ ಮಧ್ಯೆ ಭಿನ್ನಾಭಿಪ್ರಾಯ ಬರುವ ರೀತಿಯಲ್ಲಿ ಆ ಎರಡು ಸಮುದಾಯಗಳನ್ನು ಪರಸ್ಪರ ಎತ್ತಿ ಕಟ್ಟುವ ಪ್ರಚೋದನಾತ್ಮಕ ಮಾತುಗಳನಾಡಿರುವುದು ಸ್ಪಷ್ಟಗೊಂಡಿದ್ದರಿಂದ ನಲ್ಕೆ ಸಂಘಟನೆಗಳು ಇದೀಗ ನಿರ್ದೇಶಕ ಸುಧೀರ್ ಅತಾವರ್ ಮೇಲೆ ಮತ್ತಷ್ಟು ಆಕ್ರೋಷಿತರಾಗಿದ್ದಾರೆ.
ಹೀಗಾಗಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸುವ ಕುರಿತು ನಲ್ಕೆ ಸಂಘಟನೆಗಳು ಈಗಾಗಲೇ ಉಡುಪಿ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಒಂದು ಸುತ್ತಿನ ಸಭೆಯನ್ನು ನಡೆಸಿದ್ದು ಮುಂದಿನ ದಿನಗಳಲ್ಲಿ ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿವೆ ಎಂದು ತಿಳಿದುಬಂದಿದೆ.
Comments are closed.