ದೈವ ಹೇಳಿದ್ದಾ? ದೈವ ನರ್ತಕ ಹೇಳಿದ್ದಾ? ಪಿಲಿಚಂಡಿ ದೈವ ನುಡಿ ಬಗ್ಗೆಯೇ ಚರ್ಚೆ!

ಮಂಗಳೂರು: ಕಾಂತಾರ 1 ಈಗಾಗಲೇ 500 ಕೋಟಿಗೂ ಅಧಿಕ ಹಣ ಮಾಡಿ ಮುಂದುವರೆಯುತ್ತಿದೆ. ಈ ನಡುವೆ ದೈವ ಅವಹೇಳನ, ದೈವದ ನುಡಿ ಕೂಡ ಮುಂದುವರೆದಿದ್ದು, ಇದೀಗ ದೈವ ನುಡಿಯ ಬಗ್ಗೆಯೇ ಅಪಹಾಸ್ಯ ಮಾಡುವ ಮಟ್ಟಿಗೆ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಕಾಂತಾರ ಮೊದಲ ಅವತರಣಿಕೆಯ ಒಂದು ಸನ್ನಿವೇಶದ ಬಗ್ಗೆ ನಿಮಗೆ ನೆನಪಿರಬಹುದು. ಅಲ್ಲಿ ದೈವ ನುಡಿಯೊಂದನ್ನು ಕೇಳಿದ ಚಿತ್ರದ ವಿಲನ್ ಒಬ್ಬ,”ಇದು ದೈವ ಹೇಳಿದ್ದಾ, ಅಥವಾ ದೈವ ನರ್ತಕ ಹೇಳಿದ್ದಾ? ” ಎಂದು ಗೇಲಿ ಮಾಡುತ್ತಾನೆ. ದೈವ ನರ್ತಕನು ತನ್ನ ಮನಸ್ಸಿಗೆ ಬಂದಂತೆ ಆದೇಶ ನೀಡುತ್ತಿದ್ದಾನೆ ಅನ್ನುವುದು ಆ ಖಳನಾಯಕನ ದೂರು. ಇದರಿಂದ ಕುಪಿತಗೊಂಡ ದೈವವು, ” ಒಂದು ವೇಳೆ ಇದು ನಾನು ನುಡಿದದ್ದು ಅಂತ ಆದರೆ ನನ್ನನ್ನು ಹುಡುಕಿ ಪತ್ತೆ ಮಾಡಿ. ನಾನು ಸಿಕ್ಕಿಲ್ಲ ಅಂತಾದರೆ ಆಗ ಅದು ದೈವವೇ ನುಡಿದದ್ದು ಅಂದುಕೊಳ್ಳಿ” ಎನ್ನುತ್ತಾ ದೈವವು ದಿಗಲ್ಲನೆ ಹಾರಿ ದಟ್ಟ ಕಾಡಿನ ಒಳಗೆ ನುಗ್ಗುತ್ತದೆ. ಧಗ ಧಗ ಉರಿಯುತ್ತಿದ್ದ ಪಂಜಿನ ಜತೆ ಮಾಯವಾಗಿದ್ದ ಆ ದೈವ ( ಮತ್ತು ದೈವ ನರ್ತಕ!) ಮತ್ಯಾವತ್ತೂ ಯಾರಿಗೂ ಕಾಣ ಸಿಕ್ಕಿರೋದಿಲ್ಲ. ಇದು ಕಾಂತಾರ ಮೊದಲ ಸಿನೆಮಾದ ಮೈ ನವಿರೇಳಿಸುವ ರೋಚಕ ಸನ್ನಿವೇಶ. (ಇಂಥಹಾ ಸನ್ನಿವೇಶ ಕಾಂತಾರ 1 ರಲ್ಲೂ ಕಾಪಿ ಮಾಡಿದ್ದಾರೆ. ರುಕ್ಮಿಣಿ ವಸಂತ್ ನಾಯಕ ಬಿರ್ಮೆಯನ್ನು ಇದೆ ರೀತಿ ಕೇಳುವ ಸನ್ನಿವೇಶ ಈ ಚಿತ್ರದಲ್ಲಿಯೂ ಇದೆ. ಆದರೆ ಮೊದಲ ಚಿತ್ರದಂತೆ ಈ ಸನ್ನಿವೇಶ ಕಳೆ ಪಡೆದುಕೊಂಡಿಲ್ಲ).
ಇದೆಲ್ಲಾ ಈಗ ಯಾಕೆ ನೆನಪಾಯಿತು ಅಂದರೆ, ಕಾಂತಾರ ಸಿನೆಮಾ ಬಿಡುಗಡೆಯಾದ ಬಳಿಕ ಇದೀಗ ಕರಾವಳಿಯಲ್ಲಿ ಚಿತ್ರದಲ್ಲಿ ದೈವಾರಾಧನೆ ಬಳಸಿದ ಬಗ್ಗೆ ಪರ ವಿರೋಧ ಚರ್ಚೆ ಪ್ರಾರಂಭವಾಗಿ, ತುಳುನಾಡು ದೈವಗಳ ನುಡಿಗಳ ಬಗ್ಗೆಯೇ ಅಪಹಾಸ್ಯ ಮಾಡಲಾಗುತ್ತಿದೆ. ದೈವ ಹೇಳಿದ್ದಾ? ದೈವ ನರ್ತಕ ಹೇಳಿದ್ದಾ? “ಈರ್ ಪನ್ನನಾ? ದೈವ ಪನ್ನನಾ?” ಎಂದು ಕಿಚಾಯಿಸುವ ಜನರ ಬಗ್ಗೆ ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಕಾಂತಾರ ಸಿನಿಮಾಗೆ ದೈವ ಅನುಮತಿ ನೀಡಿತ್ತಾ ಎನ್ನುವ ಚರ್ಚೆಗಳು ಶುರುವಾಗಿವೆ.
ಕಾಂತಾರ ಸಿನಿಮಾ ಹಾಗೂ ಅವುಗಳ ಅನುಕರಣೆ ವಿರುದ್ದ ದೈವಾರಾಧಕರು ದೈವಕ್ಕೆ ದೂರು ನೀಡಿದ್ದರು. ಈ ವೇಳೆ ಪಿಲಿಚಂಡಿ ದೈವ ದೈವಾರಾಧಕರ ಹೋರಾಟಕ್ಕೆ ಅಭಯ ನೀಡಿತ್ತು. ಆದರೆ ಇದೀಗ ಪಿಲಿಚಂಡಿ ದೈವದ ನುಡಿಯ ಬಗ್ಗೆಯೇ ಅಪಹಾಸ್ಯ ಮಾಡಲಾಗುತ್ತಿದೆ. ಕಾಂತಾರ ಸಿನಿಮಾದ ಡೈಲಾಗ್ ಬಳಸಿ ದೈವ ನುಡಿ ವಿರುದ್ದ ವ್ಯಂಗ್ಯ ಮಾಡಲಾಗುತ್ತಿದ್ದು, ದೈವ ಹೇಳಿದ್ದಾ, ದೈವ ನರ್ತಕ ಹೇಳಿದ್ದಾ? ಎಂದು ಸಾಮಾಜಿಕ ತಾಣಗಳಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:SBI ಗ್ರಾಹಕರ ಗಮನಕ್ಕೆ – ಇಂದು UPI ಸೇರಿ ಹಲವು ಸೇವೆಗಳು ಬಂದ್ !!
ಮೊನ್ನೆ ಪ್ರಾರ್ಥನೆ ಸಲ್ಲಿಸಿದ್ದ ದೈವಾರಾಧಕರಿಗೆ ಅಭಯ ನೀಡಿದ್ದ ಬಜಪೆಯ ಪೆರಾರದ ಪಿಲಿಚಂಡಿ ದೈವ, ‘ಹುಚ್ಚು ಕಟ್ಟಿದವರನ್ನ ಹುಚ್ಚು ಹಿಡಿಸುತ್ತೇನೆ’ ಎಂದು ದೈವ ನುಡಿ ಕೊಟ್ಟಿತ್ತು. ‘ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನ ಆಸ್ಪತ್ರೆಗೆ ಸುರಿಸುತ್ತೇನೆ’ ಎಂದು ಪಿಲಿಚಂಡಿ ದೈವದ ನುಡಿಯಾಗಿತ್ತು. ಈ ದೈವ ನುಡಿ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ನಂಬಿಕೆಗಳ ಮೇಲೆ ಯಾವುತ್ತೂ ಅನುಮಾನ ಒಳ್ಳೆಯದಲ್ಲ ಅನ್ನೋದು ಪ್ರಾಜ್ಞರ ಹೇಳಿಕೆ.
Comments are closed.