ಕಾಂತಾರ 1 ಇದ್ದದ್ದು ಇದ್ದ ಹಾಗೆ ವಿಮರ್ಶೆ: ಕಥೆ ಕಮ್ಮಿಯಾಗಿ, ಕದ್ದ ಸರಕು ತುರುಕಿದರೆ ಏನಾಗುತ್ತದೆ?

Share the Article

Kantara Chapter 1: ಕಾಂತಾರ 1 ಚಿತ್ರವನ್ನು ಇದೀಗ ತಾನೆ ನೋಡಿ ಬಂದು ಕುಳಿತಿದ್ದೇನೆ. ಈ ರಿವ್ಯೂ ಬರೆಯುವ ಮುನ್ನ ಹಳೆಯ ಸೂಪರ್ ಡ್ಯೂಪರ್ ಚಿತ್ರ ಹಳೆಯ ಕಾಂತಾರದ ಸುಂದರ ಚಿತ್ತಾರಗಳು ಹಲವು ಫ್ರೇಮ್ ಗಳಲ್ಲಿ ಕಣ್ಣ ಮುಂದೆ ಹಾದು ಹೋಗಿವೆ.

ಒಂದೊಳ್ಳೆಯ ಅಡುಗೆ ಮಾಡಿ ಹತ್ತಾರು ಜನರಿಗೆ ಬಡಿಸಿ ಶಭಾಷ್ ಎನಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಪಕ್ಕದ ಮನೆಯಿಂದ ಅಕ್ಕಿ, ನೆರೆ ಹೊರೆಯುವರಿಂದ ದಿನಸಿ, ಕಾಡಿನಿಂದ ಪರಿಮಳಭರಿತ ಸಾಂಬಾರ ಪದಾರ್ಥ ಎರವಲು ತಂದು ಸ್ವಂತಿಕೆ ಇಲ್ಲದೆ ಕಥೆ ಕಟ್ಟಲು ಹೋದರೆ ಏನಾದೀತೋ ಅದೇ ಆಗಿದೆ. ಘಮ್ಮಗಿನ ವಸ್ತು ಬಳಸಿದ್ದರೂ ಅಡುಗೆ ರುಚಿ ಕಟ್ಟಿಲ್ಲ. ಅಲ್ಲಲ್ಲಿ ಮೂಡಿಸಿದ ಝಲಕ್ ಗಳನ್ನ ಹೊರತುಪಡಿಸಿದರೆ ಭಾವನಾತ್ಮಕವಾಗಿ ಕೂಡಾ ಚಿತ್ರ ಮನಸ್ಸಿಗೆ ನಾಟುವುದಿಲ್ಲ. ಒಟ್ಟಾರೆ ನೆನಪಾಗೋದು ಕಾಡಿನ ಚಿತ್ರಗಳು ಮತ್ತು ರುಕ್ಮಿಣಿ ವಸಂತ್’ಳ ಮೈಬಣ್ಣ ಮತ್ತು ಆಕೆಯ ನಯವಂಚನೆ ಕೊಟ್ಟ ತಿರುವುಗಳು ಮಾತ್ರ!

ಇದನ್ನೂ ಓದಿ: ಕಾಂತಾರ 1 ‘ಕನಕವತಿ’: ಸೇನೆಯಿಂದ ಸಿನಿಮಾಕ್ಕೆ- ಮ.ಅಶೋಕ ಚಕ್ರ ಪಡೆದವರ ಪುತ್ರಿ ರುಕ್ಮಿಣಿ ವಸಂತ್!

ಒಂದು ಸುಂದರ ಚಿತ್ರವನ್ನು ಕಟ್ಟಿ ಕೊಡಬೇಕಿದ್ದ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿಯವರು ಈ ಕಾಂತಾರ 1 ಚಿತ್ರವನ್ನು ಭ್ರಮಾತ್ಮಕ ಜಗತ್ತು, ಐತಿಹಾಸಿಕ ಯುದ್ಧ, ರಾಜ ತಂತ್ರಗಾರಿಕೆ, ಅಸಂಗತ ಕಟ್ಟುಕತೆ ಇತ್ಯಾದಿಗಳ ಕಲಸು ಮೇಲೋಗರಗಳ ಒಂದು ಖಿಚಡಿಯನ್ನಾಗಿ ಮಾಡಿದ್ದಾರೆ. ಮಧ್ಯೆ ಬರುವ ಆದಿವಾಸಿ ಜೀವನ ಶೈಲಿ, ದೈತ್ಯ ಕಾಮಿಡಿ ಪ್ರತಿಭೆಗಳು, ಗುಳಿಗನ ಅಬ್ಬರ ಕೂಡಾ ಚಿತ್ರವನ್ನು ಇನ್ನೊಂದು ಹಂತಕ್ಕೆ ಎಳೆದೊಯ್ಯಲು ವಿಫಲವಾಗಿದೆ. ಯಾವ ಕಾಂತಾರ ಚಿತ್ರ ಮಾಡಿದಾಗ ರಿಷಬ್ ಶೆಟ್ಟಿಯವರನ್ನು ನಾವು ವಾಚಾಮಗೋಚರ ಹೊಗಳಿದ್ದೇವೆಯೋ ಅದೇ ಬಿರುಸಿನಲ್ಲಿ ಇದೀಗ ಕಾಂತಾರ ಒಂದು ಚಿತ್ರವನ್ನು ಟೀಕಿಸಲೇ ಬೇಕಿದೆ. ಕೂತು ಗಟ್ಟಿ ಕಥೆ ನೇಯದೆ ಹೋದರೆ ಏನಾಗುತ್ತೋ ಅದೇ ಆಗಿದೆ. ಕಾಂತರಾ 1 ಚಿತ್ರವನ್ನು ವಿವರಗಳಲ್ಲಿ ನೋಡುವ ಮೊದಲು ಈ ಚಿತ್ರ ಹೇಗಿತ್ತು ಎಂದು ಯಾರಾದರೂ ಕೇಳಿದರೆ ‘ಚೆನ್ನಾಗಿಲ್ಲ ‘ ಎಂದು ಹೇಳುವ ಮುನ್ನ ಚಿತ್ರದಲ್ಲಿ ಮೂಡಿ ಬಂದ ಕೆಲವು ಝಲಕ್’ಗಳನ್ನು ನಿಮ್ಮ ಮುಂದೆ ಇಡಲೇಬೇಕಾಗುತ್ತದೆ.

ಈ ಚಿತ್ರದ ಕಥೆ ಕಾಂತಾರ ಚಿತ್ರದ ಬರುವ ಹಿಂದೆ ನಡೆದ ಕಥೆ. 1500 ವರ್ಷಗಳ ಕಾಲ ಹಿಂದೆ ಸರಿದಾಗ, ಅಂದರೆ ಸರಿ ಸುಮಾರು ಕ್ರಿಸ್ತಶಕ 400 ರಿಂದ 500 ಸಮಯದಲ್ಲಿ ಆದ ಘಟನೆ ಇದು. ಅದು ಕದಂಬ ವoಶದ ರಾಜರುಗಳು ಆಳುತ್ತಿದ್ದ ಸಂದರ್ಭ. ನಾಡಿನ ಮನುಷ್ಯನ ಸಂಪರ್ಕವೇ ಇಲ್ಲದ ದಟ್ಟ ಕಾಡಿನ ಮಧ್ಯೆ ಕಥಾನಾಯಕ ‘ಬೆರ್ಮೆ’ ಮತ್ತವನ ಸಂಗಡಿಗರು ಬಾಂಗ್ರಾ ರಾಜ್ಯಕ್ಕೆ ಕಾಲಿಡುತ್ತಾರೆ. ಆಗಿನ ಬಾಂಗ್ರಾ ರಾಜ ಮನೆತನದ ಅರಸ ರಾಜಶೇಖರ ಮತ್ತು ಆತನ ಮಗ ಕುಲಶೇಖರನಿಗೂ ಬೆರ್ಮೆ ಹಾಗೂ ಮತ್ತವನ ಕರಾಳ ಕತ್ತಲಿನ, ನಿರಾಳ ಅನ್ನಿಸುವಷ್ಟು ಸ್ಫಟಿಕ ಶುದ್ಧ ನೀರಿನ ಈ ಕಾಂತಾರದ ಕಾಡಿಗೂ ಹಳೆಯ ನಂಟಿದೆ. ತನ್ನ ತಾತ ಈ ಈಶ್ವರನ ಹೂದೋಟ ಎಂದು ಕರೆಯಲ್ಪಡುವ ಕಾಡಿನಲ್ಲೇ ಕಳೆದು ಹೋದದ್ದು. ಆ ಭಯ ಈಗಲೂ ಮೂರನೆಯ ತಲೆಮಾರಿನ ಬಾಂಗ್ರಾ ರಾಜರಿಗೂ ಇದೆ. ಬಾಂಗ್ರಾ ರಾಜ್ಯದ ಸದ್ಯದ ಅರಸ ಮಗ ವಿಲಾಸಿ. ಕುಡಿಯುತ್ತಾ ಮಾನಿನಿಯರ ಮಜಾ ಮಾಡುತ್ತಾ ಬದುಕುತ್ತಿರುವ ವ್ಯಕ್ತಿ.

ಈ ಸಾಮಂತ ರಾಜ್ಯಕ್ಕೆ ಬೆರ್ಮೆ ಮತ್ತವನ ತಂಡ ಅನಿರೀಕ್ಷಿತವಾಗಿ ಭೇಟಿಯಾಗುತ್ತದೆ. ಕಾಡಿನ ತಮ್ಮದೇ ಸಾಂಬಾರ ಉತ್ಪನ್ನಗಳು ನಾಡಿನಲ್ಲಿ ವ್ಯಾಪಾರವಾಗುವ, ಅದನ್ನು ಪೋರ್ಚುಗೀಸರು ಸೇರಿ ಹಲವರು ಕೊಂಡುಕೊಳ್ಳುವ, ವಿದೇಶದಿಂದ ಹತ್ತಾರು, ಕಾಡಿನ ಜನ ಕಂಡೂ ಕೇಳಿರದ ವಸ್ತುಗಳ, ಆಯುಧಗಳ ವ್ಯಾಪಾರವನ್ನು ಬೆರ್ಮೆ ಮತ್ತವನ ತಂಡ ಗಮನಿಸುತ್ತಾರೆ. ಸೀದಾ ಬಾoಗ್ರಾ ನಾಡಿಗೆ ಬಂದು ತಾವೂ ವ್ಯಾಪಾರ ಶುರು ಮಾಡುತ್ತಾರೆ. ಕಥಾನಾಯಕ ಬೆರ್ಮೆ ಭಂಡ ಅಷ್ಟೇ ಅಲ್ಲ ಹುಂಬ. ಸಾಮಾನ್ಯ ರಾಜ ವಂಶದ ಪೇಟೆ ಪಟ್ಟಣಗಳನ್ನು ಕೂಡಾ ನಾಶ ಮಾಡುವಷ್ಟು, ಯಾರಿಗೂ ಹೆದರದ ಧೈರ್ಯವಂತ. ಈ ಸಂದರ್ಭದಲ್ಲಿ ಅಲ್ಲಿ ಬಡವರನ್ನು ಜೀತದಾಳಾಗಿ ದುಡಿಸಿಕೊಳ್ಳುವ ವಿಚಾರ ಕೂಡಾ ಬೆರ್ಮೆಯ ಅರಿವಿಗೆ ಬರುತ್ತದೆ. ರಾಜವಂಶದ ಮೇಲೆಯೇ ತಿಕ್ಕಾಟ ಜೋರಾಗುತ್ತದೆ. ಅದರ ಜತೆಗೆ ಚಂದ್ರನ ಬೆಳಕಿನ ಬಣ್ಣದ, ಬೆತ್ತಲೆ ಕೊರಳ ರಾಜಕುಮಾರಿ ಕನಕವತಿಗೆ ಬಾಹುಬಲಿಯ ಮೇಲೆ ಸಣ್ಣಗೆ ಪ್ರೇಮ ಮೊಳೆಯುತ್ತದೆ. ಅದು ನಿಜಕ್ಕೂ ಪ್ರೀತಿಯಾ, ರಾಜ ತಂತ್ರದ ಒಂದು ಭಾಗವೇ ಅನ್ನೋದನ್ನು ನೀವು ಥಿಯೇಟರಿಗೆ ಹೋಗಿಯೇ ನೋಡಬೇಕು!

ಒಂದು ಬಾರಿ ಕುತೂಹಲಕ್ಕೆ, ಹಳೆಯ ಕಾಂತಾರ ಚಿತ್ರದ ಜತೆ ಕಂಪೇರ್ ಮಾಡಿ ನೋಡುವುದಕ್ಕಾದರೂ ಈ ಚಿತ್ರವನ್ನು ನೋಡಬೇಕು! ಈ ಬೆರ್ಮೆ ಯಾರು, ಆತನನ್ನು ಕಾಡಲ್ಲಿ ಬಾಳೆ ಎಲೆಯಲ್ಲಿ ಇಟ್ಟು ಹೋದವರು ಯಾರು? ರುದ್ರ ಗುಳಿಗ. ರಾಹು ಗುಳಿಗ, ಕತ್ತಲ ಕಾಣ ಗುಳಿಗ, ರಾಜ ಗುಳಿಗ ಎಲ್ಲವೂ ಆಗಿ ಬರುವ ‘ಬೆರ್ಮೆ’ ದೈವದ ಮಗ ಎಂಬುದು ಗೊತ್ತಾಗುತ್ತದೆ. ಈತನನ್ನು ಸ್ಪಷ್ಟವಾಗಿ ಕಾಲದಿಂದ ಕಾಲಕ್ಕೆ ದೈವವೇ ಕಾಯುತ್ತಿದ್ದು, ಆತನನ್ನು ಸೋಲಿಸಲು ಸಾಮಾನ್ಯರಿಂದ ಸಾಧ್ಯವಿಲ್ಲ ಎಂಬುದೂ ಅತ್ಯಂತ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆತನನ್ನು ಹಣಿದು ಮುರಿದು ಹಾಕಲು ಸ್ತ್ರೀ ಅಸ್ತ್ರ ಪ್ರಯೋಗವಾಗುತ್ತದೆ. ಮುಂದೇನಾಗುತ್ತದೆ ಅನ್ನೋದನ್ನು ನೀವೇ ಚಿತ್ರಮಂದಿರದಲ್ಲಿ ನೋಡಿಕೊಳ್ಳಿ.

ಈ ಹಿಂದೆ ವರಹಾರೂಪo ಹಾಡು ಕದ್ದ ಆರೋಪ ಕಾಂತಾರ ಚಿತ್ರದ ಮೇಲಾಗಿತ್ತು. ಅದು ಕೋರ್ಟು ಮೆಟ್ಟಲೂ ಏರಿ ದೈವದ ಕೃಪೆಯಿಂದ (?!)ಕಾಂತಾರ ಚಿತ್ರಕ್ಕೆ ಜಯವಾಗಿತ್ತು. ಆದರೆ ಈ ಸಾರಿ ಕೂಡಾ ಕಳ್ಳತನದ ಆಪಾದನೆ ಬಂದರೆ ಅಚ್ಚರಿಯಿಲ್ಲ. ಯುದ್ಧದ ಸನ್ನಿವೇಶಗಳನ್ನು ಬಾಹುಬಲಿ 1 ಚಿತ್ರದಿಂದ ಭಟ್ಟಿ ಇಳಿಸಲಾಗಿದೆ. ಬಾಹುಬಲಿಯ ರಾಜಮನೆತನದ ಮಾಸ್ ಡಿಸ್ತ್ರಕ್ಷನ್ ವೆಪನ್ ಬಳಸುವ ವ್ಯೂಹ ಮತ್ತು ತಂತ್ರಗಾರಿಕೆ ಕಾಂತಾರ 1 ಚಿತ್ರದಲ್ಲಿ ಬಳಕೆ ಮಾಡಲಾಗಿದೆ. ಪ್ರಕೃತಿಯ ದೃಶ್ಯಗಳಲ್ಲಿ ಕೂಡಾ ಬಾಹುಬಲಿಯ ಹೋಲಿಕೆಯಿದೆ.

ಕನಕವತಿ ಬೆರ್ಮೆ ಪ್ರೀತಿಯಲ್ಲಿ ಕೂಡಾ ಬಾಹುಬಲಿ ಅವಂತಿಕಾ ನೆನಪಾಗುತ್ತಾರೆ. ಬಾಹುಬಲಿ 1 ರ ಕಾಳಕೇಯ ಟ್ರೈಬಲ್ ರಾಜನ ಹುಚ್ಚು ಯುದ್ದೋನ್ಮಾದದ ಕೇಕೆ ಕೂಡಾ ಕಾಪಿ. ಜತೆಗೆ ಯಶ್ ನಟನೆಯ ಕೆಜಿಎಫ್ ಸಿನೆಮಾದ ಕಥೆಯ ಛಾಪು ಎದ್ದು ಕಾಣುತ್ತಿದೆ. ಆದರೆ ಈ ಹೈಲೈಟ್ ಇರೋದು ಚಿತ್ರದ ಮೇಕಿಂಗ್ ನಲ್ಲಿ. ಕಾಡು ನೀರು ಝರಿ ಎಲ್ಲವೂ ನೀಟ್ ಆಂಡ್ ಕ್ಲಿಯರ್! ಅರವಿಂದ್ ಕಶ್ಯಪ್ ಛಾಯಾಚಿತ್ರಗ್ರಹಣ ಇಡೀ ಚಿತ್ರದ ಹೈಲೆಟ್.

ಸೈನಿಕನಾಗಿ ಕಾಮಿಡಿಯನ್ ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಕೆಲವೆಡೆಯಷ್ಟೆ ನಗಿಸುತ್ತಾರೆ. ವಾಸ್ತು ಶಿಲ್ಪಿ ದೀಪಕ್ ರೈ ಪಾತ್ರಧಾರಿ ‘ಕಟ್ಟಿದವನಿಗೆ ಕೆಡವಲು ಗೊತ್ತಿಲ್ಲವೆ?’ ಅನ್ನುವ ಕಾಮಿಡಿ ಇಷ್ಟವಾಗುತ್ತದೆ. ಅಲ್ಲಲ್ಲಿ ಬೇವರ್ಸಿ ಬಂದು ಹೋಗುತ್ತದೆ. ಬೇವರ್ಸಿಗಿಂತ ಒಂದಷ್ಟು ಸಣ್ಣ ಹುದ್ದೆಯಾದ ‘ದರಬೇಸಿ’ ಧಾರಾಳ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ದೃಶ್ಯಗಳ ವೈಭವವನ್ನು ಹೆಚ್ಚಿಸಿದೆ. ಆದರೆ ಹಾಡುಗಳು ಯಾಕೋ ನೆನಪಿನಲ್ಲಿ ಉಳಿಯುವುದೇ ಇಲ್ಲ. ನವೀನ್ ಡಿ ಪಡೀಲ್ ರಂತಹಾ ಬೃಹನ್ ಪ್ರತಿಭೆಯ ಕೈಯಲ್ಲಿ ಕೂಡಾ ನಗಿಸಲು ನಿರ್ದೇಶಕರು ವಿಫಲರಾಗಿದ್ದಾರೆ. ದಿವಂಗತ ರಾಕೇಶ್ ಪೂಜಾರಿ ಕೂಡಾ ಇದೇ ಸಾಲಿಗೆ ಸೇರುತ್ತಾರೆ.

ಬಾಂಗ್ರಾ ರಾಜ ಮನೆತನದ ಅರಸರಾಗಿ ಜಯರಾಮ್ ಮತ್ತು ಅವರ ಮಗ ಕುಲಶೇಖರನಾಗಿ ಗುಲ್ ನ್ ದೇವಯ್ಯ ಕಾಣಿಸಿಕೊಂಡಿದ್ದಾರೆ. ಕೊನೆಗೂ ತುಂಬಾ ಇಷ್ಟ ಆಗೋದು ಕನಕವತಿಯಾಗಿ ರುಕ್ಮಿಣಿ ವಸಂತ್. ಚಿತ್ರ ನೋಡಿ ಬಂದ ಮೇಲೆ ಕೂಡಾ ಆ ಪಾತ್ರ ನೆನಪಾಗುತ್ತದೆ. ಚಿತ್ರದ ನಿರ್ದೇಶಕ, ನಾಯಕ ನಟ ಕಾಂತಾರಾ 1 ಚಿತ್ರದುದ್ದಕ್ಕೂ ವ್ಯಾಪಿಸಿಕೊಂಡಿದ್ದಾರೆ. ಭಾವನೆಗಳಲ್ಲಿ ಕಟ್ಟಿ ಕೊಡಬೇಕಿದ್ದ ಸಿನಿಮಾವನ್ನು ಹಿಂಸೆಯಲ್ಲಿ ಹೊಡೆದಾಟದಲ್ಲಿ ಮೇಲಕ್ಕೆತ್ತಲು ನೋಡಿದ್ದಾರೆ ರಿಷಬ್ ಶೆಟ್ಟಿ. ಕೊನೆಯ ಪಕ್ಷ ನಲಿಕೆ, ಪರವ ಪಂಬದ ಇತ್ಯಾದಿ ಭೂತಾರಾಧನೆಯ ಸಮುದಾಯದ ಸಾಮಾನ್ಯ ನಲಿಕೆಯನ್ನು (ನಾಟ್ಯ) ಕೂಡಾ ಚಿತ್ರದಲ್ಲಿ ಹೈಲೈಟ್ ಮಾಡಿಲ್ಲ. ನಟನೆಯಲ್ಲಿ ರಿಶಬ್ ಶೆಟ್ಟಿ ಪಾಸ್, ಮೇಕಿಂಗ್ ಫಸ್ಟ್ ಕ್ಲಾಸ್, ಭಾವನಾತ್ಮಕ ಚಿತ್ರವಾಗಿ ಕಾಂತಾರ 1 ಫೇಲ್. ಸಾಂದ್ರ ಕಥೆ ಇಲ್ಲದ್ದೇ ಈ ಚಿತ್ರದ ಪಾಲಿನ ವಿಲನ್. ಹಳೆಯ ಕಾಂತರದ ಗುಳಿಗ ಮತ್ತಿತರ ದೈವಗಳು, ಅವುಗಳ ನರ್ತನ ನಮಗೆ ಇಷ್ಟವಾದ ಹಾಗೆ ಕಾಂತಾರ 1 ರಲ್ಲಿ ಮನಸ್ಸಿಗೆ ಹತ್ತಿರ ಆಗೋದಿಲ್ಲ. ಹಾಗಿದ್ರೂ ಭಾವುಕರಲ್ಲದ, ಹೊಡೆದಾಡುವ, ಕ್ರೈಮ್ ಬಯಸುವ ಮನಸ್ಸುಗಳಿಗೆ ಈ ಚಿತ್ರ ಇಷ್ಟ ಆದರೂ ಆದೀತು.

ವಿಮರ್ಶೆ: ಸುದರ್ಶನ್ ಬಿ ಪ್ರವೀಣ್, ಬೆಳಾಲು

Comments are closed.