ರಂಗರತ್ನ ಬಿರುದಾಂಕಿತ ಪ್ರಸನ್ನ ಶೆಟ್ಟಿ ಕಲಾಸಾಧಕನ ಕಿರು ಪರಿಚಯ

ಶ್ರೀ ಪ್ರಸನ್ನ ಶೆಟ್ಟಿ ಬೈಲೂರು ಅವರು ಕಲೆ, ಹಾಸ್ಯ, ರಂಗಭೂಮಿ ಮತ್ತು ಸಿನಿರಂಗದ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರು. 1980ರಲ್ಲಿ ಕೌಡೂರು ಕುಂಜದ ಬೆಟ್ಟಿನಲ್ಲಿ ದಿ| ಜಗನ್ನಾಥ ಶೆಟ್ಟಿ ಮತ್ತು ಪ್ರೇಮ ಶೆಟ್ಟಿ ದಂಪತಿಗಳ ಮೂರನೇ ಪುತ್ರನಾಗಿ ಜನಿಸಿದ ಇವರು ಬಾಲ್ಯದ ಸರಳ ಬದುಕಿನಿಂದಲೇ ಶ್ರಮ, ಹಠ ಮತ್ತು ಪ್ರತಿಭೆಯಿಂದ ಬದುಕನ್ನು ಕಟ್ಟಿಕೊಂಡರು. ಬೈಲೂರು ಮೈನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರಿನಲ್ಲಿ ಪ್ರೌಢ ಹಾಗೂ ಪಿ.ಯು.ಸಿ ಪೂರ್ಣಗೊಳಿಸಿ, ಬಳಿಕ ಕಾರ್ಕಳ ಬೋರ್ಡ್ ಹೈಸ್ಕೂಲ್‌ನಲ್ಲಿ ವೃತ್ತಿ ತರಬೇತಿ ಪಡೆದರು. ನಂತರ ಪಿಗ್ಮಿ ಕಲೆಕ್ಷನ್ ಹಾಗೂ ಗೂಡ್ಸ್ ಟೆಂಪೋ ಚಾಲಕರಾಗಿ ಜೀವನ ಆರಂಭಿಸಿದರೂ, ಇವರ ಹೃದಯದಲ್ಲಿ ಅಡಗಿದ್ದ ಕಲೆಪ್ರೇಮವನ್ನು ಯಾವುದೂ ತಡೆಯಲಿಲ್ಲ.


ಇವರ ರಂಗಭೂಮಿ ಪಯಣ 9ನೇ ತರಗತಿಯಲ್ಲಿ “ಸುಳಿಕ್ ತಿಕ್ಕಿನ ಬದುಕ್” ನಾಟಕದ ಮೂಲಕ ಆರಂಭವಾಯಿತು. ನಂತರ ಯುವಕ ಮಂಡಲಗಳಲ್ಲಿ ಹಾಸ್ಯಪಾತ್ರಗಳ ಮೂಲಕ ಜನಮನ ಗೆದ್ದ ಇವರು, ನಮನ ಕಲಾವಿದೇರ್ ತಂಡದಲ್ಲಿ ಹತ್ತು ವರ್ಷಗಳ ಕಾಲ ಕಲಾವಿದ ಹಾಗೂ ನಿರ್ದೇಶಕರಾಗಿ ದುಡಿದು ತಮ್ಮ ಕಲೆಯ ಮೂಲಕ ಗುರುತಿಸಿಕೊಂಡರು. ಕಳೆದ ಹದಿನೈದು ವರ್ಷಗಳಿಂದ ರಂಗತರಂಗ ಕಾಪು ನಾಟಕ ತಂಡದಲ್ಲಿ ಪ್ರಧಾನ ಹಾಸ್ಯ ಕಲಾವಿದ, ನಾಟಕ ರಚನೆಕಾರ ಮತ್ತು ನಿರ್ದೇಶಕರಾಗಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಜನರ ಮನರಂಜನೆಗೆ ಕಾರಣರಾಗಿದ್ದಾರೆ. 2014ರಲ್ಲಿ ಗ್ರಾಮೀಣ ಕಲಾವಿದರನ್ನು ಬೆಳೆಸುವ ಉದ್ದೇಶದಿಂದ ಚೈತನ್ಯ ಕಲಾವಿದರು ಬೈಲೂರು ಎಂಬ ತಂಡವನ್ನು ಸ್ಥಾಪಿಸಿ, ಬಲೆ ತೆಲಿಪಾಲೆ, ಮೇ-22, ಸ್ಟಾರ್, ತೂಯಿನಾಯೆ ಪೋಯೆ, ಬುದ್ದಿ ಚಪ್ಪಟ್, ಪಿರ ಪೊಂಡುಗೆ, ಜುಟ್ಟು ಮೀಸೆ, ವಾರ್ಡ್ ನಂಬರ್–2, ಅಧ್ಯಕ್ಷರ್ ಮೊದಲಾದ ಒಂಬತ್ತು ನಾಟಕಗಳನ್ನು ಬರೆದು ನಿರ್ದೇಶಿಸಿದರು. ಮೇ-22 ಮತ್ತು ಸ್ಟಾರ್ ನಾಟಕಗಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಗಳು ಲಭಿಸಿದ್ದು ಇವರ ಕಲಾತ್ಮಕತೆ ಮತ್ತು ಸೃಜನಶೀಲತೆಯನ್ನು ಪ್ರತಿಬಿಂಬಿಸಿದೆ. ಅದಲ್ಲದೆ ಇವರ ಅಷ್ಟೇಮಿ ನಾಟಕ ಜನಪ್ರಿಯತೆ ಪಡೆದಿದ್ದು ಕೇವಲ ಒಂದು ವರ್ಷದೊಳಗೆ 125 ಪ್ರದರ್ಶನಗಳನ್ನು ಕಂಡು ತುಳು ನಾಟಕರಂಗದ ಇತಿಹಾಸದಲ್ಲಿ ಸ್ಮರಣೀಯ ಸಾಧನೆ ಆಗಿದೆ.

ರಂಗಭೂಮಿಯಿಂದ ಹೊರಟ ಇವರ ಪಯಣ ಟೆಲಿವಿಷನ್ ಲೋಕದತ್ತ ಸಾಗಿದ್ದು, 2013ರಲ್ಲಿ ನಮ್ಮ ಟಿವಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಸೀಸನ್ 1, 2, 3, 4ರಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿ ಪ್ರಶಂಸ ಕಾಪು ತಂಡದ ಕೀರ್ತಿಯನ್ನು ಹೆಚ್ಚಿಸಿದರು. ಬಳಿಕ ಕನ್ನಡ ಕಲರ್ಸ್ ವಾಹಿನಿಯ ಮಜಾ ಭಾರತ ಶೋ ಮುಖಾಂತರ ಮನೆಮಾತಾದರು. ಈ ಯಶಸ್ಸು ಇವರಿಗೆ ಚಿತ್ರರಂಗದ ಬಾಗಿಲು ತೆರೆಯಿತು. ಚಾಲಿ ಪೋಲಿಲು, ಎಕ್ಕಸಕ, ಗಿರ್ಗಿಟ್, ರಾಜ್ ಸೌಂಡ್ಸ್ ಅಂಡ್ ಲೈಟ್ಸ್, ಸರ್ಕಸ್ ಸೇರಿದಂತೆ 15ಕ್ಕೂ ಹೆಚ್ಚು ತುಳು ಚಿತ್ರಗಳಲ್ಲಿ ಅಭಿನಯಿಸಿ ಜನರ ಮನಸೂರೆಗೊಂಡರು. ಕೇವಲ ನಟರಾಗಿ ಮಾತ್ರವಲ್ಲ, ಸಂಭಾಷಣಕಾರರಾಗಿ ಕೂಡ ತಮ್ಮದೇ ಆದ ಮೆರಗು ತೋರಿದರು. ಗಿರ್ಗಿಟ್ ಚಿತ್ರದ ಮೂಲಕ ಸಂಭಾಷಣೆ ಬರೆದು ಜನಮನ ಸೆಳೆದ ಇವರು ನಂತರ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಹಾಗೂ ಸರ್ಕಸ್ ಚಿತ್ರಗಳಿಗೆ ಸಂಭಾಷಣೆ ಬರೆದು ಭಾರೀ ಯಶಸ್ಸು ಸಾಧಿಸಿದರು. ಇವರ ಈ ಕೃತಿಗಳಿಗೆ ಕೋಸ್ಟಲ್ ವುಡ್ ಫಿಲ್ಮ್ ಅವಾರ್ಡ್‌ನಲ್ಲಿ ಬೆಸ್ಟ್ ಡೈಲಾಗ್ ರೈಟರ್ ಪ್ರಶಸ್ತಿ ದೊರೆತಿದ್ದು, ತುಳು ಸಿನಿರಂಗದಲ್ಲಿ ಹೊಸ ಕ್ರಾಂತಿಯ ಸಂಕೇತವಾಯಿತು.

ವಿದೇಶದಲ್ಲಿಯೂ ಇವರ ಕೀರ್ತಿ ಹರಡಿದ್ದು, ದುಬೈ, ಮಸ್ಕತ್, ಕುವೈಟ್, ಕತಾರ್, ಬೆಹರೈನ್ ಸೇರಿದಂತೆ 25ಕ್ಕೂ ಹೆಚ್ಚು ಬಾರಿ ವಿದೇಶ ಪ್ರವಾಸ ಮಾಡಿ ಅಲ್ಲಿ ನೆಲೆಸಿರುವ ಕನ್ನಡ–ತುಳು ಅಭಿಮಾನಿಗಳ ಹೃದಯವನ್ನೂ ಗೆದ್ದಿದ್ದಾರೆ. ಅನೇಕ ಸಂಘ–ಸಂಸ್ಥೆಗಳಿಂದ ಸನ್ಮಾನ ಹಾಗೂ ಗೌರವವನ್ನು ಸ್ವೀಕರಿಸಿ ಕಲಾರಂಗದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದಾರೆ.

ಇಂದಿಗೂ ಹಾಸ್ಯ, ಸಂಭಾಷಣೆ ಮತ್ತು ಅಭಿನಯಗಳ ಮೂಲಕ ನೂರಾರು ಹೃದಯಗಳಲ್ಲಿ ನಗುವನ್ನು ಮೂಡಿಸುತ್ತಿರುವ ಪ್ರಸನ್ನ ಶೆಟ್ಟಿ, ತಮ್ಮ ಪತ್ನಿ ಪ್ರಿಯಾ ಶೆಟ್ಟಿ ಹಾಗೂ ಪುತ್ರ ಪಾರ್ಥ್ ಜೊತೆಗೆ ಸುಖಸಮೃದ್ಧ ಜೀವನ ನಡೆಸುತ್ತಿದ್ದಾರೆ. ಅವರ ಜೀವನಯಾನ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸಿನ ಶಿಖರ ತಲುಪಲಿ ಎಂದು ಹಾರೈಸುತ್ತೇವೆ.
ಕಲೆ ಎಂದರೆ ಕೇವಲ ರಂಜನೆ ಅಲ್ಲ, ಅದು ಸಮಾಜದ ಹೃದಯಕ್ಕೆ ಜೀವ ತುಂಬುವ ಶಕ್ತಿ.”
ಲೇಖನ .ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಇದನ್ನೂ ಓದಿ:ಧರ್ಮಸ್ಥಳ ತನಿಖೆ: ಬೇಗ ತನಿಖೆ ಮುಗಿಸಲು SIT ಗೆ ಸೂಚನೆ – ಗೃಹ ಸಚಿವ ಜಿ. ಪರಮೇಶ್ವರ್
Comments are closed.