TET: ಬಿಕಾಂ, ಎಂಕಾಂ ಪದವೀಧರರು TET ಮಾಡಿದ್ರೂ ನೇಮಕಾತಿಗೆ ಪರಿಗಣಿಸದ ಸರ್ಕಾರ

TET: ಬಿಕಾಂ, ಎಂಕಾಂ ಪದವಿ ನಂತರ ಬಿಇಡಿ ಮಾಡಿ ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಪಾಸಾದರೂ ಅವರಿಗೆ ಶಿಕ್ಷಕರಾಗುವ ಅವಕಾಶ ಸರ್ಕಾರ ನೀಡಿಲ್ಲ. ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಯಲ್ಲಿಇವರನ್ನು ಪರಿಗಣಿಸದೆ ಇರುವ ಕಾರಣಕ್ಕೆ ರಾಜ್ಯಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ವಂಚಿತ ರಾಗಿದ್ದಾರೆ.

ಬಿಕಾಂ, ಎಂಕಾಂ ನಂತರ ಬಿಇಡಿ ಪೂರೈಸಿರುವವರನ್ನು ಅತಿಥಿ ಶಿಕ್ಷಕರಾಗಿ ನೇಮಿಸಿಕೊಳ್ಳುತ್ತದೆ. ಆದರೆ ಸರ್ಕಾರಿ ನೇಮಕಾತಿಗೆ ಮಾತ್ರ ಅವಕಾಶವಿಲ್ಲ. ಸಿಆರ್ (ಕೇಡರ್ ರೆಕ್ರುಟ್‌ಮೆಂಟ್) ರೂಲ್ ತಿದ್ದುಪಡಿ ಮಾಡಿ ನೇಮಕಾತಿಯಲ್ಲಿ ಅವಕಾಶ ನೀಡಬೇಕೆಂದು ಒತ್ತಾಯಿಸಿದರೂ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದ ಕಾರಣ, ಈ ಪದವೀಧರರು ನಿರುದ್ಯೋಗಿಗಳಾಗುತ್ತಿದ್ದಾರೆ.
”ಬಿಕಾಂ, ಎಂಜಿನಿಯರಿಂಗ್ ಪದವೀಧರರಿಗೆ 2015ರಲ್ಲಿಸರ್ಕಾರ ಬಿಇಡಿ ಮಾಡಲು ಅವಕಾಶ ನೀಡಿತು. ನಂತರ 2020ರಲ್ಲಿಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಲು ಕೂಡ ಅವಕಾಶ ನೀಡಿದೆ. ಆದರೆ ಶಿಕ್ಷಕರ ನೇಮಕಾತಿಗೆ ಮಾತ್ರ ಪರಿಗಣಿಸುತ್ತಿಲ್ಲ. ಬಿಕಾಂ ಪದವೀಧರರು ಬಿಇಡಿನಲ್ಲಿ ಇಂಗ್ಲಿಷ್ ಹಾಗೂ ಸಮಾಜ ವಿಜ್ಞಾನವನ್ನೂ ಎರಡು ಮುಖ್ಯ ವಿಷಯವನ್ನಾಗಿ ಅಯ್ಕೆ ಮಾಡಿಕೊಂಡು ಓದಿರುತ್ತಾರೆ. ತರಬೇತಿ ಅವಧಿಯಲ್ಲೂ ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನ ಬೋಧಿಸುತ್ತೇವೆ, ಅದಕ್ಕೆ ಅಂಕಗಳನ್ನು ಕೂಡ ಪಡೆಯುತ್ತೇವೆ. ಮೂರು ವರ್ಷ ಬಿಕಾಂ ಪದವಿ ಮಾಡುವಾಗ ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ ಅಧ್ಯಯನ ಮಾಡಿರುತ್ತೇವೆ. ನಂತರ ಎರಡು ವರ್ಷ ಬಿಇಡಿ ಮಾಡುತ್ತೇವೆ, ಆದರೂ ಶಿಕ್ಷಕಾಗುವ ಕನಸಿಗೆ ಈ ಓದು ಸಾರ್ಥಕತೆ ಇಲ್ಲದಂತಾಗಿದೆ. ಸಮಾಜ ವಿಜ್ಞಾನ ವಿಷಯದಲ್ಲಿ ವ್ಯವಹಾರ ಅಧ್ಯಯನ ಪಠ್ಯ ಇದೆ, ಇದರ ಬೋಧನೆಗಾದರು ನಮ್ಮನ್ನು ನೇಮಿಸಿಕೊಳ್ಳಬೇಕಿತ್ತು,” ಎನ್ನುವುದು ವಂಚಿತರ ವಾದ.
Comments are closed.