ಅಮೆರಿಕದ ಹೆಚ್‌-1ಬಿ ವೀಸಾಗೆ ಚೀನಾದ ಕೆ-ವೀಸಾ ಟಕ್ಕರ್‌; ವಿಶ್ವ ಪ್ರತಿಭೆಗಳಿಗೆ ಚೀನಾದ ಆಹ್ವಾನ!

Share the Article

ನವದೆಹಲಿ: ‘ಅಮೆರಿಕ ಮೊದಲು’ ಎನ್ನುವ ಮೂಲಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್-1ಬಿ ವೀಸಾಗೆ (H-1B Visa) ತನ್ನ ದೇಶಕ್ಕೆ ಹೆಚ್ಚಾಗಿ ಬರುತ್ತಿದ್ದ ವಿದೇಶಿಗರ ನಿರ್ಬಂಧಕ್ಕೆ ಮುಂದಾಗಿದ್ದಾರೆ. ಹೆಚ್-1ಬಿ ವೀಸಾ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಅಮೆರಿಕದಲ್ಲಿ ಕೆಲಸ ಮಾಡಿ ಹಣ ಸಂಪಾದಿಸಬೇಕೆಂಬ ಟೆಕ್ಕಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ. ಟ್ರಂಪ್ ನಿಲುವಿನಿಂದ ಭಾರತ, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳ ಟೆಕ್ ಆಕಾಂಕ್ಷಿಗಳಿಗೆ ಹೊಡೆತ ಬಿದ್ದಿದೆ. ಇಂಥಹ ಸಂದರ್ಭದಲ್ಲಿ ಅಮೆರಿಕಕ್ಕೆ ಟಕ್ಕರ್ ಕೊಡಲು ಚೀನಾ ಸರ್ಕಾರವು‘ಕೆ-ವೀಸಾ’ (K Visa) ಜಾರಿಗೆ ತರಲು ಸಿದ್ಧತೆ ಮಾಡಿಕೊಂಡಿದೆ.

ನಮ್ಮ ದೇಶಕ್ಕೆ ಬನ್ನಿ, ಒಂದೊಳ್ಳೆಯ ಉದ್ಯೋಗ ನೀಡುತ್ತೇವೆಂದು ವಿದೇಶಗಳ ಎಕ್ಸ್ಪರ್ಟ್ ಗಳಿಗೆ ಆಹ್ವಾನ ನೀಡಲು ಚೀನಾದಿಂದ ಯೋಜನೆ ಸಿದ್ದವಾಗಿದೆ. ಈ ನಡೆ ವಿಶ್ವ ಪ್ರತಿಭಾ ಸ್ಪರ್ಧೆಗೆ ಅನುವು ಮಾಡಿಕೊಟ್ಟ ಹಾಗಾಗಿದೆ. ಕೆ ವೀಸಾ ಅಂದ್ರೆ ಏನು, ಭಾರತೀಯರಿಗೆ ಇದರಿಂದ ಏನು ಲಾಭ, ಜಾರಿ ಎಂದು? ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಸಣ್ಣ ವಿವರ.

H-1B ವರ್ಸಸ್ K ವೀಸಾ
ತನ್ನ H-1B ವೀಸಾಗಳಿಗೆ ಬರೋಬ್ಬರಿ 100,000 ಡಾಲರ್ ಶುಲ್ಕ ವಿಧಿಸಿ ಜಾಗತಿಕ ತಂತ್ರಜ್ಞರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಚ್ಚಿ ಬೀಳಿಸಿದ್ದಾರೆ. ಈ ಸಂದರ್ಭ ಚೀನಾವು ವಿಶ್ವದ ಅತ್ಯುತ್ತಮ ಪ್ರತಿಭೆಗಳನ್ನು ಸ್ವಾಗತಿಸುತ್ತದೆ ಎಂದು ಸೈಲೆಂಟಾಗಿ ಅಮೆರಿಕಾ ಕೈ ಬಿಟ್ಟರೆ ನಾನಿದ್ದೇನೆ ಎಂದಿದೆ. ಅದಕ್ಕೆ ಕೆ-ವೀಸಾ ಜಾರಿಗೆ ಕ್ರಮವಹಿಸಿದೆ. ದೇಶದ 13 ನೇ ಸಾಮಾನ್ಯ ವೀಸಾವಾಗಿ ಕೆ-ವೀಸಾವನ್ನು ಚೀನಾ ಪರಿಚಯಿಸಲಿದೆ. STEM (Science, technology, engineering, and mathematics) ಕ್ಷೇತ್ರದಲ್ಲಿ ಕನಿಷ್ಠ ಪದವಿ ಹೊಂದಿರುವ, ಸಂಶೋಧನೆ, ಶಿಕ್ಷಣ – ತಂತ್ರಜ್ಞಾನ ನಾವೀನ್ಯತೆಯಲ್ಲಿ ತೊಡಗಿಸಿಕೊಂಡಿರುವ ವಿದೇಶಿ ಯುವ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರತಿಭೆಗಳಿಗೆ ಈ ವೀಸಾದಡಿ ಅವಕಾಶ ಸಿಗಲಿದೆ.

ಇದೀಗ ಚೀನಾದಲ್ಲಿ ಅಸ್ತಿತ್ವದಲ್ಲಿರುವ ಇತರ ವೀಸಾಗಳಿಗೆ ಹೋಲಿಸಿದರೆ, ಕೆ-ವೀಸಾ ಭಿನ್ನವಾಗಿರಲಿದೆ. ಈ ವೀಸಾ ಹೊಂದಿರುವವರು ಬಹು ವಲಯಗಳಿಗೆ ಪ್ರವೇಶದ ಜತೆಗೆ, ವಿಸ್ತೃತ ಮಾನ್ಯತೆ ಮತ್ತು ದೀರ್ಘಾವಧಿಯ ವಾಸ್ತವ್ಯಗಳನ್ನು ಹೊಂದಬಹುದು. ಇದರ ವ್ಯಾಪ್ತಿಯು ವಿಸ್ತಾರವಾಗಿದೆ. ಉದ್ಯಮಶೀಲತೆ, ವ್ಯವಹಾರ, ಶೈಕ್ಷಣಿಕ ಸಂಶೋಧನೆ ಮತ್ತು ಸಾಂಸ್ಕೃತಿಕ ಅಥವಾ ವೈಜ್ಞಾನಿಕ ಕ್ಷೇತ್ರ ಈ ವೀಸಾದ ವ್ಯಾಪ್ತಿಗೆ ಬರುತ್ತವೆ.

ಕೆ ವೀಸಾ ಜಾರಿ ಯಾವಾಗ?
ಕೆ-ವೀಸಾ ಇದೇ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಆದರೆ ಇದರ ಅರ್ಹತಾ ಮಾನದಂಡಗಳನ್ನು ಚೀನಾದ ಅಧಿಕಾರಿಗಳು ಇನ್ನೂ ಅಂತಿಮಗೊಳಿಸಿಲ್ಲ. ಆದರೆ, ಪ್ರಮುಖ ಷರತ್ತುಗಳನ್ನು ಒಳಗೊಂಡಿರುತ್ತವೆ. ಮಾನ್ಯತೆ ಪಡೆದ ಸಂಸ್ಥೆಯಿಂದ STEM ಪದವಿ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಅಥವಾ ಗಣಿತ), ಸಂಶೋಧನೆ ವಲಯದವರಿಗೆ ವೀಸಾ ಸಿಗಲಿದೆ. ಅಸ್ತಿತ್ವದಲ್ಲಿರುವ ಅನೇಕ ಕೆಲಸದ ವೀಸಾಗಳಿಗಿಂತ ಇದು ಭಿನ್ನ.

ಆದರೆ, ವಯಸ್ಸಿನ ಮಿತಿ, ವಾಸ್ತವ್ಯದ ಅವಧಿ, ದೀರ್ಘಾವಧಿಯ ನಿವಾಸ ಅಥವಾ ಶಾಶ್ವತ ಪೌರತ್ವಕ್ಕೆ ಮಾರ್ಗಗಳು ಮತ್ತು ಉದ್ಯಮದ ವಿವರಗಳನ್ನು ಇನ್ನೂ ಅಂತಿಮ ಆಗಿಲ್ಲ. ವಿಶೇಷವಾಗಿ ಭಾರತಕ್ಕೆ ಇದು ವರದಾನವಾಗುವ ಸಾಧ್ಯತೆ ಇದೆ. ಭಾರತದ ಪದವೀಧರರು US ತಂತ್ರಜ್ಞಾನ ವಲಯದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಚೀನಾದ ವೀಸಾವು ಸ್ಪರ್ಧೆ ಮತ್ತು ಅವಕಾಶ ಎರಡನ್ನೂ ಪ್ರತಿನಿಧಿಸುತ್ತದೆ.

Comments are closed.