SL Bhyrappa: ಕುಟುಂಬ ಕಲಹಕ್ಕೆ ಬೇಸತ್ತಿದ್ದ ಭೈರಪ್ಪ? ಪುತ್ರರು ಅಂತ್ಯಸಂಸ್ಕಾರ ಮಾಡಕೂಡದು ಅಂದದ್ದು ಅದಕ್ಕಾ?

Share the Article

ಮೈಸೂರು: ಸಾಹಿತಿ ಎಸ್.ಎಲ್. ಭೈರಪ್ಪ ಅವರು ಬರೆದಿದ್ದಾರೆ ಎನ್ನಲಾದ ವಿಲ್ ಒಂದು ವೈರಲ್ ಆಗಿದ್ದು, ಅದರಲ್ಲಿ, ತಮ್ಮ ಅಂತ್ಯಸಂಸ್ಕಾರವನ್ನು ಮಕ್ಕಳು ಮಾಡಬಾರದೆಂದು ಉಲ್ಲೇಖಿಸಲಾಗಿದೆ. ಭೈರಪ್ಪನವರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದರು ಎನ್ನಲಾಗಿದೆ. ಈ ವಿಲ್ ಪತ್ರ ವೈರಲ್ ಆಗುವ ಮೂಲಕ ಸಾಧಕ ಲೇಖಕನ ಕೌಟುoಬಿಕ ಜೀವನ ಅಷ್ಟೇನೂ ಚೆನ್ನಾಗಿರಲಿಲ್ಲ ಅನ್ನುವ ಮಾಹಿತಿಗಳು ಲಭ್ಯವಾಗುತ್ತಿವೆ. ಮುಖ್ಯವಾಗಿ ತಮ್ಮ ಪುತ್ರರ ಬಗ್ಗೆ ಎಸ್ ಎಲ್ ಭೈರಪ್ಪನವರು ಬೇಸರಿಸಿಕೊಂಡಿದ್ದರು ಮತ್ತು ಅದಕ್ಕಾಗಿ ಪುತ್ರರಿಗೆ ಈ ಹಿಂದೆ ನೀಡಿದ್ದ ಉಡುಗೊರೆ ರೂಪದ ಹಣವನ್ನು ಅವರಿಂದ ಪಡೆಯಲು ವಿಲ್ ಅನ್ನು ಮತ್ತೊಮ್ಮೆ ಬದಲಿಸಿದ್ದರು.

ಅಷ್ಟೇ ಅಲ್ಲ, ಯಾವುದೇ ಕಾರಣಕ್ಕೂ ನನ್ನ ಇಬ್ಬರು ಮಕ್ಕಳಾದ ಉದಯಶಂಕರ್‌ ಹಾಗೂ ರವಿಶಂಕರ್‌ ಅವರಿಗೆ ನನ್ನ ಅಂತ್ಯಸಂಸ್ಕಾರ ಮಾಡುವ ಅವಕಾಶ ನೀಡಬಾರದು ಎಂದು ಎಸ್‌ಎಲ್‌ ಭೈರಪ್ಪ ಅವರು ಬರೆದಿದ್ದು ಎನ್ನಲಾದ ವಿಲ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸೆಪ್ಟೆಂಬರ್ 24 ರಂದು ಬುಧವಾರ ಹೃದಯಸ್ತಂಭನದಿಂದ ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದ ಮೇರು ಸಾಹಿತಿ ಹಾಗೂ ಕಾದಂಬರಿಕಾರ ಎಸ್‌ಎಲ್‌ ಭೈರಪ್ಪ ಅವರು ಕಳೆದ ಜೂನ್‌ 18ರಂದು ತಮ್ಮ ವಿಲ್‌ನಲ್ಲಿ ತಿದ್ದುಪಡಿ ಮಾಡಿದ್ದರು ಎಂದು ಅವರ ಅಭಿಮಾನಿ ಎಂದು ಹೇಳಿಕೊಂಡ ಫಣೀಶ್‌ ಎನ್ನುವವರು ಪ್ರದರ್ಶನ ಮಾಡಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಇದರ ಪ್ರದರ್ಶನ ಮಾಡಿದ ಬೆನ್ನಲ್ಲಿಯೇ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಭೈರಪ್ಪ ತಮ್ಮ ವಿಲ್‌ನಲ್ಲಿನ ತಿದ್ದುಪಡಿಯಲ್ಲಿ ಏನಿದೆ?

“2022ರ ಮಾರ್ಚ್ 15 ರಂದು ನಾನು ಉಯಿಲು ಮಾಡಿದ್ದೆ. ಅದಾದ ಬಳಿಕ 2025ರ ಜನವರಿ 30 ರಂದು ಉಯಿಲಿನ ಮೂರನೇ ಪುಸ್ತಕದ ದಸ್ತಾವೇಜನ್ನು ತಿದ್ದುಪಡಿ ಮಾಡಲು ಬಯಸಿದ್ದೆ. 2025ರ ಫೆಬ್ರವರಿ 10 ರಂದು ಇದನ್ನು ನೋಂದಾಯಿಸಿಕೊಂಡಿದ್ದೇನೆ.”

“ಆ ನಂತರದ ಅವಧಿಯಲ್ಲಿ ನನ್ನ ಕುಟುಂಬದಲ್ಲಿ ಕೆಲ ವಿದ್ಯಮಾನಗಳ ಹಿನ್ನಲೆಯಲ್ಲಿ ಅದರಲ್ಲೂ ವಿಶೇಷವಾಗಿ ನನ್ನ ಪತ್ನಿ ಬಿಎಸ್‌ ಸರಸ್ವತಿ ಹಾಗೂ ಪುತ್ರರಾದ ಎಸ್‌ಬಿ ರವಿಶಂಕರ್‌ ಹಾಗೂ ಎಸ್‌ಬಿ ಉದಯಶಂಕರ್‌ ಅವರು ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ನನ್ನ ಬುದ್ಧಿಮತ್ತೆ ಮತ್ತು ನೆನಪಿನ ಶಕ್ತಿ ಕುಂಠಿತವಾಗುತ್ತಿರುವುದರಿಂದ ಅವರುಗಳನ್ನು ನನ್ನ ಪೋಷಕರಾಗಿ ನೇಮಿಸಬೇಕೆಂದು ಆರೋಪಿಸಲಾಗಿ ನಾನೂ ಕೂಡ ಈ ಪ್ರಕರಣದಲ್ಲಿ ಸ್ವ ಇಚ್ಛೆಯಿಂದ ಪ್ರತಿವಾದಿಯಾಗಿ ಹಾಜರಾಗಿದ್ದು, ಅವರುಗಳ ಆರೋಪಗಳಿಗೆ ಉತ್ತರ ನೀಡುತ್ತಿದ್ದೇನೆ. ಆದ್ದರಿಂದ 2025ರ ಜನವರಿ 30ರಂದು ಮಾಡಿದ ಉಯಿಲಿನ ತಿದ್ದುಪಡಿ ಪತ್ರದಲ್ಲಿನ ಕೆಲವು ಅಂಶಗಳನ್ನು ಮತ್ತೊಮ್ಮೆ ತಿದ್ದುಪಡಿ ಮಾಡಲು ಬಯಸಿ ಈ ಉಯಿಲಿನ ತಿದ್ದುಪಡಿ ಪತ್ರವನ್ನು ಬರೆಸುತ್ತಿದ್ದೇನೆ”

“ಅದರ ಕ್ರಮವೇನೆಂದರೆ:
ನನ್ನ ಮಗ ಉದಯಶಂಕರನಿಗೆ ನೀಡಿರುವ 50 ಲಕ್ಷ ರೂಪಾಯಿಗಳ ಕೊಡುಗೆಯನ್ನು ಈ ಮೂಲಕ ರದ್ದುಮಾಡುತ್ತಿದ್ದೇನೆ. ಇದರಿಂದಾಗಿ ಈ ಕೊಡುಗೆಯನ್ನು ನಗದೀಕರಿಸಿಕೊಳ್ಳಲು ಆತನಿಗೆ ನೀಡಿರುವ ಅಧಿಕಾರವು ರದ್ದಾಗತಕ್ಕದ್ದು. ನನ್ನ ಕಾಲಾನಂತರ ನನ್ನ ಪಾರ್ಥೀವ ಶರೀರಕ್ಕೆ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಅಂತ್ಯಸಂಸ್ಕಾರಗಳು ನಡೆಯತಕ್ಕದ್ದು. ನನ್ನ ಪಾರ್ಥಿವ ಶರೀರವನ್ನು ನನ್ನ ಹುಟ್ಟೂರಾದ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು, ಸಂತಶಿವರ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ವಿಧಿವತ್ತಾಗಿ ಅಂತ್ಯಸಂಸ್ಕಾರ ಮಾಡತಕ್ಕದ್ದು. ಈ ಅಂತ್ಯಸಂಸ್ಕಾರ ಹಾಗೂ ತ್ಸತಂಬಂಧವಾದ ಕೆಲಸಗಳನ್ನು ಹಲವು ವರ್ಷಗಳಿಂದ ನನ್ನ ಯೋಗಕ್ಷೇಮದ ಬಗ್ಗೆ ಮಗಳಾಗಿ ಕಾಳಜಿ ವಹಿಸುತ್ತಾ, ನನ್ನ ಮಾರ್ಗದರ್ಶನದಲ್ಲಿಯೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಉದಯೋನ್ಮುಖ ಲೇಖಕಿ ಬೆಂಗಳೂರಿನ ಸಹನಾ ವಿಜಯ್‌ಕುಮಾರ್‌ ಮಾಡತಕ್ಕದ್ದು. ಈಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಕೂಡ ಹಿರಿಯರ ಅಂತ್ಯಸಂಸ್ಕಾರ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಯಾವುದೇ ನಿಷೇಧಗಳಿಲ್ಲವೆಂಬ ಬಗ್ಗೆ ನನಗೆ ಮನದಟ್ಟಾಗಿದೆ. ನನ್ನ ಇಬ್ಬರು ಗಂಡು ಮಕ್ಕಳಾದ ಉದಯಶಂಕರ್ ಹಾಗೂ ರವಿಶಂಕರ್‌ ನನ್ನ ಪಾರ್ಥಿವ ಶರೀರಕ್ಕೆ ಅಂತ್ಯಸಂಸ್ಕಾರ ಮಾಡಬಾರದು.”

ಇದನ್ನೂ ಓದಿ:Donald Trump: ಭಾರತದ ಔಷಧಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್!

“ಇದನ್ನು ಬರೆಯುವ ಸಂದರ್ಭದಲ್ಲಿ ನನ್ನ ಪಂಚೇದ್ರಿಯಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ನನ್ನ ಯೋಚನಾ ಶಕ್ತಿ ಹಾಗೂ ಬುದ್ಧಿಶಕ್ತಿ ಸಂಪೂರ್ಣವಾಗಿ ನನ್ನ ಹತೋಟಿಯಲ್ಲಿದೆ. ಇದರಿಂದ ಯಾವುದೇ ರೀತಿಯ ಒತ್ತಾಯ ಅಥವಾ ಒತ್ತಡಕ್ಕೆ ಒಳಗಾಗದೆ ನನ್ನ ಆತ್ಮ ಸಂತೋಷದಿಂದ ಈ ಉಯಿಲಿನ ತಿದ್ದುಪಡಿ ಪತ್ರವನ್ನು ಮಾಡಿಸುತ್ತಿದ್ದೇನೆ.”

ಇದು ಭೈರಪ್ಪನವರು ಬರೆದಿದ್ದಾರೆ ಎನ್ನಲಾದ ಉಯಿಲಿನ ಒಂದು ಭಾಗ. ವಿಲ್ ಬರೆದಿರುವುದು, ಅದನ್ನು ತಿದ್ದುಪಡಿ ಮಾಡಿರುವುದು ಕೂಡಾ ಸತ್ಯ ಅಂತ ಕಾದಂಬರಿಗಾರ್ತಿ ಅನುವಾದಕಿ ಸಹನಾ ವಿಜಯಕುಮಾರ್ ಒಪ್ಪಿಕೊಂಡಿದ್ದಾರೆ. ಈಗ ವಿವಾದ ಬಗೆಹರಿದಿದೆ. ಭೈರಪ್ಪನವರ ಮಕ್ಕಳ ಜತೆ ನಾನು ಸೇರಿ ಮೂವರು ಅಂತ್ಯ ಸಂಸ್ಕಾರ ನೆರವೇರಿಸುತ್ತೇನೆ ಎಂದು ಸಹನಾ ಹೇಳಿಕೊಂಡಿದ್ದಾರೆ.

Comments are closed.