SL Bhyrappa: ‘ಸೂಳೆ ಮನೆಗೆ ಹೋಗಿದ್ಯಾ’ ಅಂತ ಆ ಹಿರಿಯರು ಕೇಳಿದ್ರು, ಭೈರಪ್ಪ ನಾಚಿಕೊಂಡ್ರು- ಹಾಗಿತ್ತು ಎಸ್.ಎಲ್ ಭೈರಪ್ಪ ಭೀಮಕಾಯ ಕಾದಂಬರಿ

Share the Article

SL Bhyrappa: ಇನ್ನು ಕೇವಲ ಆರು ರನ್ ಹೊಡೆದಿದ್ದರೆ ಎಸ್ ಎಲ್ ಭೈರಪ್ಪನವರು ಸೆಂಚುರಿ ಬಾರಿಸುತ್ತಿದ್ದರು. ನರ್ವಸ್ ನೈಂಟಿ ಭೈರಪ್ಪನವರನ್ನು ಕೂಡಾ ಕಾಡಿತ್ತು. 94 ರನ್ನುಗಳನ್ನು ಬೀಸಿ ಹೊಡೆದವರಿಗೆ ಇನ್ನಾರು ರನ್ ಹೊಡೆಯಲು ಕಷ್ಟವೇ? ಅಂತ ಭೈರಪ್ಪನವರ ಚಟುವಟಿಕೆ ಆರೋಗ್ಯ ಗಮನಿಸಿದವರು ಹೇಳುತ್ತಿದ್ದರು. ಆದರೆ ಕ್ರಿಕೆಟ್ ಆಟದಂತಲ್ಲ ನೋಡಿ ವಿಧಿಯ ಆಟ? ಮೊನ್ನೆ ಭೈರಪ್ಪ ಭೌತಿಕವಾಗಿ ಔಟ್ ಆಗಿದ್ದಾರೆ. ಜೀವನ ಪೂರ್ತಿ ಬರೆಯುತ್ತಲೇ ಇದ್ದ, ಅದಕ್ಕಾಗಿ ತಪಸ್ಸಿನಂತೆ ಧೇನಿಸುತ್ತಲೆ ಹೋದ ಭೈರಪ್ಪ ಕಾಲ ಭೈರವನ ಪದತಲ ಸೇರಿಕೊಂಡಿದ್ದಾರೆ. ಅವರು ‘ಆವರಣ’ ತೊರೆದು ನಡೆಯುತ್ತಲೇ ಅವರ ಬದುಕಿನ ಅನಾವರಣ ಒಂದೊಂದಾಗಿ ಆಗುತ್ತಿದೆ.: ಇದೂ ಅಂಥದ್ದೇ ಒಂದು ವಿಶೇಷ ಸಮಾಚಾರ.

ಭೈರಪ್ಪನವರ ಸೂಳೆ ಮನೆ ಸಹವಾಸ?

ಅದು ಎಸ್.ಎಲ್. ಭೈರಪ್ಪನವರ ಮೊದಲನೆಯ ಕೃತಿ; 1952 ರಲ್ಲಿ ಪ್ರಕಟವಾದ ಭೀಮಕಾಯ ಭೈರಪ್ಪನವರ ಮೊದಲ ಕಾದಂಬರಿ. ಅದಾಗಲೇ ಅವರಿಗೆ ಕೇವಲ 18 ವರ್ಷ. ಎಲ್ಲರಿಗೂ 18 ವರ್ಷ ಅಂದರೆ ಉಕ್ಕುವ ಸೊಕ್ಕಿನ ಯೌವ್ವನದ ಕಾಲ. ಆ ಕಾಲದಲ್ಲಿ ಅವರು ಭೀಮಕಾಯ ಬರೆದದ್ದು. ಅದೂ ಗಟ್ಟಿಮೈಯ ಧೃಡ ಸಂಕಲ್ಪದ ಪಹಿಲ್ವಾನ ಒಬ್ಬ ‘ಅಂಥ’ ಸ್ತ್ರೀ ಒಬ್ಬಳ ಸಹವಾಸಕ್ಕೆ ಬಿದ್ದು ಹಾಳಾಗಿ ಹೋದ ಕಥೆ. ಅಷ್ಟೇ ಅಲ್ಲ, ತನ್ನ ‘ಕೊರಾಪಿಟ್’ ಅನ್ನುವ ಕುಸ್ತಿಯ ಪದವಿಯನ್ನು ಕೂಡಾ ಕಳೆದು ಕೊಳ್ಳುವ, ಅವಮಾನಿತನಾಗಿ ಸೋತು ನಿಲ್ಲುವ ಯುವಕನ ಕಥೆ ಈ ಭೀಮಕಾಯ.

ಸೋತು ತನಗಾಗಲ್ಲ ಅಂತ ಯೋಚಿಸುತ್ತಲೇ ಮತ್ತೆ ಎದ್ದು ಮುಂಜಾನೆಗಳಲ್ಲಿ ಗರಡಿ ಮನೆಯಲ್ಲಿ ಗರಗರ ತಿರುಗಿ, ಮಣಭಾರತ ತೂಕ ಎತ್ತಿ, ಬಸ್ಕಿ ಹೊಡೆದು, ಸಾಮು ಮಾಡಿ ಸ್ತ್ರೀ ವ್ಯಾಮೋಹದಿಂದ ಹೊರಕ್ಕೆ ಬಂದ ಸಾಹಸಿಗ ಯುವಕನ ಕಥೆ ಭೀಮ ಕಾಯ ಕಾದಂಬರಿಯ ಕಥಾವಸ್ತು.

ಅಲ್ಲಿ ಸೂಳೆಮನೆಯ ಆ ಮಹಿಳೆಯ ಮನೆಯ ವರ್ಣನೆಯನ್ನು ಅದೆಷ್ಟು ಅಚ್ಚುಕಟ್ಟಾಗಿ ಎಸ್ ಎಲ್ ಭೈರಪ್ಪನವರು ವಿವರಿಸಿದ್ದರೆಂದರೆ, ಆ ಕಾದಂಬರಿಯನ್ನು ಓದಿದ ಹಿರಿಯರೊಬ್ಬರು ಕೇಳಿದ್ದರು: “ನಿಜಕ್ಕೂ ನೀನು ವೇಶ್ಯಾವಾಟಿಕೆ ಮನೆಗೆ ಭೇಟಿ ನೀಡಿದ್ದೀಯ ಎಂದು?”. ಆ ಮಟ್ಟಿಗೆ ಕಲ್ಪಿಸಿ ತುಲನಾತ್ಮಕವಾಗಿ ಬರೆಯುವ ತಾಕತ್ತು ಎಸ್ ಎಲ್ ಭೈರಪ್ಪನವರಿಗೆ 18 ರ ಸಣ್ಣ ಪ್ರಾಯದಲ್ಲಿಯೇ ಸಿದ್ಧಿತವಾಗಿತ್ತು.

ಆ ಕಲೆ, ನಿರಂತರ ಪ್ರಯತ್ನ, ಜೀವನ ಪೂರ್ತಿ ಅಧ್ಯಯನ ಭೈರಪ್ಪನವರ ಬದುಕಾಗಿತ್ತು. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಹಲವಾರು ಕಡೆ ಆಧ್ಯಾಪನ ವೃತ್ತಿ ಮಾಡುತ್ತಲೇ ಸಾಹಿತ್ಯ ಕೆತ್ತಿದವರು ಪ್ರಸಿದ್ದ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪನವರು.

ಇದನ್ನೂ ಓದಿ:Delhi: ದೆಹಲಿ ಪ್ರಬಲ ಸ್ವಾಮೀಜಿಯ ಕಾಮಪುರಾಣ ಬಹಿರಂಗ – ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ತೀಟೆ ತೀರಿಸಿಕೊಳ್ಳಲು ಫಾರಿನ್ ಟ್ರಿಪ್ ಆಫರ್

ಇದೀಗ ಭೈರಪ್ಪ ಬ್ರಹ್ಮ ಲೀನ. ಅವರ ಪುಸ್ತಕಗಳು, ಅವರ ಕಾದಂಬರಿಗಳ ಮಾರಾಟ, ಹುಡುಕಾಟ ಮತ್ತು ಓದು ಭರದಿಂದ ಸಾಗಿದೆ. ದಿನನಿತ್ಯ ಭೈರಪ್ಪನವರ ಬಗ್ಗೆ ಜನರಿಗೆ ತಿಳಿಯದೇ ಇದ್ದ ಹೊಸ ಹೊಸ ವಿಚಾರಗಳು ಹೊಸ ಓದುಗರಿಗೆ ಪರಿಚಯ ಆಗುತ್ತಿದೆ. ಈ ಸುಖೀ ಓದು ಮುಂದುವರೆಯಲಿ. ಅವರ ಪುಸ್ತಕ ಕೊಂಡು ಕೊಂಡು ಓದೋಣ, ಅದುವೇ ಅವರಿಗೆ ನಾವು ಸಲ್ಲಿಸುವ ಅಕ್ಷರ ಶ್ರದ್ದಾoಜಲಿ.

Comments are closed.