ಒಂದು ಸಣ್ಣ ಘಟನೆ, ಒಂದು ದೊಡ್ಡ ಪಾಠ ಮತ್ತು ಅಪಾರ ಗೌರವ : ಉತ್ತರದ ಮಹಿಳೆಗೆ ಬೆಂಗಳೂರಲ್ಲಾದ ಆ ಅನುಭವ ಏನು..?

Bangalore Police: ಉತ್ತರದಿಂದ ಬಂದು ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡಿಗರಿಂದ ದೌರ್ಜನ್ಯ ನಡೆಯಿತು ಎಂದು ಆಪಾದಿಸುವವರಿಗೆ ಕೊರತೆ ಇಲ್ಲ. ಆದರೆ ಉತ್ತರ ಭಾರತದ ಮಹಿಳೆಯೊಬ್ಬರು ಇದಕ್ಕೆ ತೀರ ವಿರುದ್ಧವಾದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಕಳೆದು ಹೋದ ಮೊಬೈಲ್ ಫೋನ್ ಮರಳಿ ಸಿಕ್ಕರೆ ನಮ್ಮ ಅದೃಷ್ಟ ಅನ್ನಬಹುದು.

ಸಾಮಾನ್ಯವಾಗಿ ಕಳೆದು ಹೋಯಿತು ಇನ್ನು ಅದು ನಮಗೆ ಸಿಗಲ್ಲ ಎನ್ನುವ ಹತಾಶೆಯಲ್ಲಿಯೇ ಬಹಳ ಮಂದಿ ಇರುತ್ತಾರೆ. ಆದರೆ ಶನಿವಾರ ಮಹಿಳೆಯೊಬ್ಬರಿಗೆ ತಾವು ಕಳೆದುಕೊಂಡ ಫೋನ್ ಕ್ಷಣ ಮಾತ್ರದಲ್ಲಿ ಪೊಲೀಸರ ಸಮಯ ಪ್ರಜ್ಞೆಯಿಂದ, ತ್ವರಿತ ಕಾರ್ಯದಿಂದ ದೊರಕಿದ್ದು, ಇದಕ್ಕೆ ಮಹಿಳೆ ತನ್ನ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಅಸಲಿಗೆ ಆಗಿದ್ದೇನೆಂದು ಆ ಮಹಿಳೆ ತನ್ನ ಫೇಸ್ಬುಕ್ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.
ಕಳೆದ ಶನಿವಾರ ರಾತ್ರಿ 9:40 ರ ಸುಮಾರಿಗೆ, ನಾನು ಫೀನಿಕ್ಸ್ ಮಾರ್ಕೆಟ್ ಸಿಟಿಯ ಫನ್ ಝೋನ್ನಲ್ಲಿದ್ದೆ. ಅದು ಮುಚ್ಚುವ ಸಮಯವಾದ್ದರಿಂದ, ಬೆರಳೆಣಿಕೆಯಷ್ಟು ಜನರು ಮಾತ್ರ ಇದ್ದರು. ನಾನು ಕಾರ್ ಗೇಮ್ ಆಡುವುದನ್ನು ಮುಗಿಸಿ, ನಂತರ ಫೋಟೋ ತೆಗೆದುಕೊಂಡೆ. ನನ್ನ OnePlus 12R ಅನ್ನು ಪಕ್ಕದಲ್ಲಿ ಬಿಟ್ಟು, ಅಗತ್ಯ ಪರಿಶೀಲನೆಗಾಗಿ ಒಳಗಡೆ ಹೋದೆ.
ನಾನು ನನ್ನ ಸಂಖ್ಯೆಗೆ ಹಲವು ಬಾರಿ ಕರೆ ಮಾಡಲು ಪ್ರಯತ್ನ ಪಟ್ಟೆ, ಅದು ರಿಂಗ್ ಆಗಿದೆ, ಅಂದರೆ ಕಾರ್ಯನಿರತವಾಗಿತ್ತು. ಆಗ ನನಗೆ ತಿಳಿಯಿತು ಯಾರೋ ಅದನ್ನು ತೆಗೆದುಕೊಂಡಿದ್ದು ಕೂಡಲೇ ನಾನು ಫನ್ ಸಿಟಿ ಭದ್ರತಾ ತಂಡವನ್ನು ಸಂಪರ್ಕಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆ.
ಅಷ್ಟರಲ್ಲಿ, ನನ್ನ ಸ್ನೇಹಿತ ಬೇಗನೆ 100 (ತುರ್ತು ಸಹಾಯವಾಣಿ) ಗೆ ಡಯಲ್ ಮಾಡಿ ದೂರು ದಾಖಲಿಸಿದನು. ನನ್ನ ಆಶ್ಚರ್ಯಕ್ಕೆ, ಕೆಲವೇ ನಿಮಿಷಗಳಲ್ಲಿ, ಹತ್ತಿರದ ಪೊಲೀಸ್ ಠಾಣೆ ತಲುಪಿತು. ಒಬ್ಬ ಅಧಿಕಾರಿ ನನ್ನನ್ನು ಸಂಪರ್ಕಿಸಿ, ಎಲ್ಲಾ ವಿವರಗಳನ್ನು ಸಂಗ್ರಹಿಸಿದರು, ಮತ್ತು ಕೇವಲ 10 ನಿಮಿಷಗಳಲ್ಲಿ, ಮತ್ತೆ ಕರೆ ಮಾಡಿ, ನಿಮ್ಮ ಫೋನ್ ಅನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದ್ದಾರೆ.!
ಇದಾದ ಸ್ವಲ್ಪ ಸಮಯದ ನಂತರ, ಪೊಲೀಸರು ಹತ್ತಿರದಲ್ಲೇ ಇದ್ದ ಮಗುವಿನ ಜೊತೆ ಒಬ್ಬ ಮಹಿಳೆಯಿಂದ ಅದನ್ನು ವಶಪಡಿಸಿಕೊಂಡಿದ್ದಾರೆ ಮತ್ತು ವೈಟ್ಫೀಲ್ಡ್ನ ಮಹದೇವಪುರ ಪೊಲೀಸ್ ಠಾಣೆಯಿಂದ ಅದನ್ನು ಸಂಗ್ರಹಿಸಲು ನನ್ನನ್ನು ಕೇಳಿದ್ದಾರೆ ಎಂದು ನನಗೆ ಹೇಳಲಾಯಿತು. ನಂತರ ಆ ಮಹಿಳೆ ತನ್ನ ಮಗು ಫೋನ್ ಎತ್ತಿಕೊಂಡು “ಅದರೊಂದಿಗೆ ಆಟವಾಡುತ್ತಿದೆ” ಎಂದು ಹೇಳಿದ್ದಾರೆ. ಏನೇ ಇರಲಿ, ನನ್ನ ಫೋನ್ ಇಷ್ಟು ಬೇಗ ಮರಳಿ ಸಿಕ್ಕಿದ್ದರಿಂದ ನನಗೆ ಸ್ವಲ್ಪ ನಿರಾಳವಾಯಿತು.
ಇನ್ನೂ ಮುಂದುವರಿದು ಮಹಿಳೆ ಪೊಲೀಸರಿಗೆ ಅಪಾರ ಗೌರವವನ್ನು ಸಲ್ಲಿಸುತ್ತಾ, ಹೀಗೆ ಬರೆದಿದ್ದಾರೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕಳೆದುಹೋದ ಫೋನ್ ಪ್ರಕರಣವನ್ನು ಇಷ್ಟು ವೇಗ, ದಕ್ಷತೆ ಮತ್ತು ವೃತ್ತಿಪರತೆಯಿಂದ ಪರಿಹರಿಸಲಾಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಕರ್ನಾಟಕದವರಲ್ಲದ ವ್ಯಕ್ತಿಗಳಿಗೆ ಬೆಂಗಳೂರಿನಲ್ಲಿ ಭಾಷಾ ಅಡೆತಡೆಗಳು ಅಥವಾ ಪಕ್ಷಪಾತ ನಡೆಯುವ ಬಗ್ಗೆ ಜನರು ನಕಾರಾತ್ಮಕ ವಿಷಯಗಳನ್ನು ಹೇಳುವುದನ್ನು ನಾನು ಕೇಳಿದ್ದೇನೆ. ಆದರೆ ಇಲ್ಲಿ ನನ್ನ ಕಠಿಣ ಕ್ಷಣದಲ್ಲಿ, ನಾನು ದಯೆ, ಬೆಂಬಲ ಮತ್ತು ವೃತ್ತಿಪರತೆಯನ್ನು ಮಾತ್ರ ಅನುಭವಿಸಿದೆ. ಫೋನ್ ಕಳೆದು ಹೋದ ಸಂದರ್ಭದಲ್ಲಿ ನಾನು ಮಾತನಾಡಿದ ಪ್ರತಿಯೊಬ್ಬ ಅಧಿಕಾರಿಗಳು ಗೌರವಾನ್ವಿತವಾಗಿ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಅನುಭವವು ಬೆಂಗಳೂರು ನಗರ ಪೊಲೀಸ್, ಮಹಾದೇವಪುರ ಪೊಲೀಸ್ ಠಾಣೆ, ವೈಟ್ಫೀಲ್ಡ್ ಬಗ್ಗೆ ನನಗೆ ಅಪಾರ ಗೌರವವನ್ನುಂಟುಮಾಡಿದೆ. ನಿಮ್ಮ ತ್ವರಿತ ಕ್ರಮ ಮತ್ತು ಸಮರ್ಪಣೆಗೆ ಹೃತ್ಪೂರ್ವಕ ಧನ್ಯವಾದಗಳು. ಒತ್ತಡದ ರಾತ್ರಿಯನ್ನು ನೀವು ಪ್ರತಿದಿನ ಮಾಡುವ ಒಳ್ಳೆಯ ಕೆಲಸದ ಮರೆಯಲಾಗದಂತೆ ಪರಿವರ್ತಿಸಿದ್ದೀರಿ ಎಂದು ಮಹಿಳೆ ಬರೆದಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆಗಳು ಲಭಿಸಿವೆ. ಜೊತೆಗೆ ʼʼಇದಕ್ಕೆ ಪ್ರತಿಯಾಗಿ ಒಂದಷ್ಟು ಕನ್ನಡವನ್ನು ಕಲಿಯುವ ಮತ್ತು ಸಾಧ್ಯವಾದರೆ ಕನ್ನಡದಲ್ಲೂ ಒಂದೆರಡು ಅಕ್ಷರ ಬರೆದು ಹಂಚಿಕೊಳ್ಳುವಷ್ಟು ನಿಮ್ಮ ಸಮನ್ವಯತೆಯೂ ಇರಲಿ. ವಲಸಿಗರಿಂದ ನಾವ ಬಯಸುವುದು ಅಷ್ಟೇʼʼ ಎನ್ನುವ ಸಲಹೆಗಳನ್ನೂ ನೆಟ್ಟಿಗರು ನೀಡಿದ್ದಾರೆ.
ಇದನ್ನೂ ಓದಿ;Tata Motors ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ, 4.60 ಲಕ್ಷಕ್ಕೆ ಹೊಸ ಕಾರು!
Comments are closed.