ಬೆಳ್ತಂಗಡಿ SIT ಕಛೇರಿಗೆ ರಾತ್ರೋರಾತ್ರಿ ತಿಮರೋಡಿ ದೌಡು, ದೂರು ಸಲ್ಲಿಕೆ!

Share the Article

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ವಿವಿಧ ವಸತಿ ಗೃಹಗಳಲ್ಲಿ 2006 ರಿಂದ 2010 ರ ಅವಧಿಯಲ್ಲಿ ಸಂಭವಿಸಿದ 4 ಅಪರಿಚಿತ ಸಾವುಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು, ಇವು ಸಂಭಾವ್ಯ ಕೊಲೆ ಪ್ರಕರಣಗಳಾಗಿರುವ ಸಾಧ್ಯತೆ ಹೆಚ್ಚಿರುವುದರಿಂದ ವಿಶೇಷ ತನಿಖಾ ದಳ (SIT) ಯು ಈ ಬಗ್ಗೆ ತಕ್ಷಣ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸೌಜನ್ಯ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ಬೆಳ್ತಂಗಡಿಯ ಎಸ್.ಐ.ಟಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.

ನಿನ್ನೆ, ಗುರುವಾರ ರಾತ್ರಿ ಅವರು ಬೆಳ್ತಂಗಡಿ ಎಸ್ ಐ ಟಿ ಕಚೇರಿಗೆ ಭೇಟಿ ನೀಡಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳನ್ನು ಆಧರಿಸಿ ಈ ದೂರನ್ನು ನೀಡಿದ್ದಾರೆ. ಜತೆಗೆ ಮಾಹಿತಿ ಹಕ್ಕಿನಲ್ಲಿ ಪಡೆದಿದ್ದ ದಾಖಲೆಗಳನ್ನು ಕೂಡಾ ನೀಡಿರುವುದಾಗಿ ವರದಿಯಾಗಿದೆ.

ತಿಮರೋಡಿ ನೀಡಿರುವ ದೂರಿನಲ್ಲಿ ಧರ್ಮಸ್ಥಳದ ಗಾಯತ್ರಿ, ಶರಾವತಿ ಮತ್ತು ವೈಶಾಲಿ ವಸತಿ ಗೃಹಗಳಲ್ಲಿ ನಡೆದ ನಾಲ್ಕು ಸಾವುಗಳನ್ನು ಪ್ರಸ್ತಾಪಿಸಲಾಗಿದೆ. ಈ ಮರಣಗಳನ್ನು “ಅಪರಿಚಿತ ಶವ”ಗಳೆಂದು ಘೋಷಿಸಿ ಅಲ್ಲಿನ ಗ್ರಾಮ ಪಂಚಾಯತ್ ಮೂಲಕ ತರಾತುರಿಯಲ್ಲಿ ಸಮಾಧಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣಗಳಲ್ಲಿ ಕೇವಲ ಅಸ್ವಾಭಾವಿಕ ಮರಣ ವರದಿ (UDR) ಎಂದು ಮಾತ್ರ ದಾಖಲಿಸಲಾಗಿದ್ದು, ಇವುಗಳ ಬಗ್ಗೆ ಹತ್ಯೆ ಅಥವಾ ಆತ್ಮಹತ್ಯೆಯ ಸಂಶಯವಿದ್ದರೂ ಕೂಡಾ ಎಫ್.ಐ‌.ಆರ್ ದಾಖಲಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Comments are closed.