

Wild Animals: ಮಲೆನಾಡು ಕರಾವಳಿಯ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ಆತಂಕವನ್ನೇ ಉಂಟು ಮಾಡ್ತಿದೆ. ಒಂದೆಡೆ ಹವಾಗುಣ ವೈಪರಿತ್ಯದಿಂದ ಮಳೆಗಾಲದಲ್ಲಿ ಸುರಿವ ವಿಪರೀತ ಮಳೆ, ಬೆಳೆಗಳ ಮೇಲೆ ಎಲೆ ಚುಕ್ಕಿ ಸೊರಗು ರೋಗ, ಕೊಳೆ ರೋಗಗಳನ್ನ ಹೆಚ್ಚಿಸಿದೆ.
0
ಇನ್ನೊಂದೆಡೆ ಅವೈಜ್ಞಾನಿಕ ಅಭಿವೃದ್ಧಿಯಿಂದ ಆಗುವ ಭೂಕುಸಿತ ಹೊಳೆಯಲ್ಲಿ ಹೆಚ್ಚುವ ಹೊಳು ನದಿ ಪಾತ್ರವನ್ನೇ ಬದಲಿಸುತ್ತದೆ. ಸಣ್ಣ ಸಣ್ಣ ಮಳೆಗೂ ಪ್ರವಾಹ, ಹೆಚ್ಚುತ್ತಿರುವ ಹೂಳು ನದಿಯಲ್ಲಿನ ಜೀವ ಸಂಕುಲಗಳನ್ನ ಅಪಾಯ ಮತ್ತು ನಾಶವಾಗುವಂತೆ ಮಾಡುತ್ತಿದೆ.
ಮಲೆನಾಡು ಬದಲಾದ ಪರಿಸರ ವೈಪರಿತ್ಯಕ್ಕೆ ತನ್ನನ್ನು ಹೊಂದಿಸಿಕೊಳ್ಳಲು ಪ್ರಯಾಸ ಪಡುತ್ತಿರುವಾಗ ಅದಕ್ಕಿ೦ತಲೂ ಅಘಾತಕಾರಿಯಾದ ವಿದ್ಯಮಾನವೊಂದು ಕಾಡು ಪ್ರಾಣಿಗಳ ಆಗಮನದಿಂದ ಆಗ್ತಿದೆ. ಎತ್ತಿನಹೊಳೆಯಂತಹ ಅವೈಜ್ಞಾನಿಕ ಅಭಿವೃದ್ಧಿ ಮಾದರಿ ಆನೆಗಳು ನೆಲೆ ಕಳೆದುಕೊಳ್ಳಲು ಕಾರಣವಾಗಿದೆ. ನೆಲೆ ಕಳೆದುಕೊಂಡ ಆನೆಗಳು ಹೊಸ ನೆಲೆಗಳನ್ನ ಹುಡುಕುತ್ತಾ ಮಲೆನಾಡು, ಕರಾವಳಿಯ ಊರಿನ ಕಡೆ ಬರ್ತಿದಾವೆ.
ಮಲೆನಾಡಿಗರು ತೋಟಕ್ಕೆ ಕೊಳೆ ಬಂದ್ರೆ ಔಷಧಿ ಹೊಡೆದು ನಿಯಂತ್ರಿಸಬಹುದು. ಆನೆ ಬಂದ್ರೆ ಎಂತ ಮಾಡುದು. ಈ ಅರಣ್ಯ ಇಲಾಖೆಯವರಿಗೆ ಸೂಕ್ಷ್ಮತೆಯಿಲ್ಲದೆ ಪಟಾಕಿ ಹೊಡೆಯೋದು ಮುಂತಾದ ದಾಂದಲೆ ಎಬ್ಬಿಸಿ ಅವನ್ನ ರೊಚ್ಚಿಗೆಬ್ಬಿಸ್ತಿದಾರೆ. ಅವುಗಳ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸರಿಯಾದ ಮಾದರಿಯಲ್ಲಿ ಅವುಗಳನ್ನ ಸ್ಥಳಾಂತರ ಮಾಡುವ ಕ್ರಮ ಯ್ಯಾಕೆ ಮಾಡೋದಿಲ್ಲ.
ಇನ್ನು ನವರಾತ್ರಿ ಬೇರೆ ಬಂತು. ಭಕ್ತರ ದಂಡು ಮಲೆನಾಡಿಗೆ ಪ್ರವಾಹದ ರೀತಿ ಬರುತ್ತೆ. ಅವರಿಗೆ ಇಲ್ಲಿನ ಯಾವ ಸಮಸ್ಯೆಗಳು ಸಮಸ್ಯೆಗಳೇ ಅಲ್ಲ. ಒಂದು ದಿನಕ್ಕೆ ಕಾಣುದನ್ನೇ ಸತ್ಯ ಅಂದುಕೊಳ್ತಾರೆ. ಮಲೆನಾಡು ಬಾರಿ ಚಂದ ಅಂದುಕೊಂಡು ಹೋಗ್ತಾರೆ.
ನಮ್ಮ ಸರ್ಕಾರಗಳಿಗೆ ಮಲೆನಾಡಿನ ಮೂಲ ಸಮಸ್ಯೆಗಳು ಅರ್ಥವೇ ಆಗೋದಿಲ್ಲ. ಕಾರಣ ಇಲ್ಲಿನ ಕಡಿಮೆ ಸಂಖ್ಯೆಯ ಮತ್ತು ಗಟ್ಟಿ ಧ್ವನಿ ಇರದ ಜನಪ್ರತಿನಿಧಿಗಳು. ಇನ್ನು ಹೋರಾಟಗಳು ಇತ್ತೀಚಿಗಂತೂ ಅಂದಂದೇ ಹುಟ್ತಾವೆ. ಅಂದಂದೇ ಸಾಯ್ತಾವೆ. ದೀರ್ಘ ಬಾಳಿಕೆಯ ಜನ ಸಂಘಟನೆಗಳು ಇಲ್ಲಿನ ಸಮಸ್ಯೆಯನ್ನ ಸರ್ಕಾರಕ್ಕೆ ಮುಟ್ಟಿಸಲು ಬೇಕಿದೆ. ಅದು ಎ೦ದು ಸಾಧ್ಯವಾಗುತ್ತೋ ಅಂದು ಮಲೆನಾಡಿನ ಸಮಸ್ಯೆಗೆ ಪರಿಹಾರ ದ ದಾರಿ ತೆರೆದುಕೊಳ್ಳುತ್ತೆ.













