ನಮ್ಮೆಲ್ಲರ DNA ಒಂದೇ- ಆರೆಸ್ಸೆಸ್ ಭಾಗವತ್; DNA ಒಂದೇ ಆಗಿರಬೇಕು ಅನ್ನೋ ರೂಲ್ ಯಾಕೆ?!

Share the Article

ನವದೆಹಲಿ: ಮತ್ತೊಮ್ಮೆ DNA ಯ ಪ್ರಸ್ತಾಪ ಬಂದಿದೆ. ಅವಿಭಜಿತ ಭಾರತದಲ್ಲಿ 40,000 ವರ್ಷಗಳಿಂದಲೂ ಎಲ್ಲರ ಡಿಎನ್‌ಎ ಒಂದೇ. ಇಲ್ಲಿ ಜನರನ್ನು ಪೂರ್ವಜರ ಸಾಮಾನ್ಯ ಸಂಪ್ರದಾಯಗಳು ಒಂದುಗೂಡಿಸುತ್ತವೆ. ಸೌಹಾರ್ದತೆ ನಮ್ಮ ಸಂಸ್ಕೃತಿಯಾಗಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ ಹೇಳಿದ್ದಾರೆ. ಆರೆಸ್ಸೆಸ್‌ಗೆ 100 ವರ್ಷ ತುಂಬುವ ಹಿನ್ನೆಲೆಯಲ್ಲಿ ಡೆಲ್ಲಿಯಲ್ಲಿ ನಡೆಯುವ 3 ದಿನಗಳ ಉಪನ್ಯಾಸ ಸರಣಿಗೆ ಚಾಲನೆ ಕೊಡುತ್ತಾ, ದೇಶವನ್ನು “ವಿಶ್ವಗುರು’ವನ್ನಾಗಿ ಮಾಡುವುದು ಆರೆಸ್ಸೆಸ್‌ನ ಉದ್ದೇಶ. ಹಿಂದೂಗಳು ಸಂಘರ್ಷಕ್ಕಿಂತ ಸಮನ್ವಯದಲ್ಲಿ ಅವರಿಗೆ ಹೆಚ್ಚು ನಂಬಿಕೆ – ಹೀಗೆಂದು ಭಾಗವತ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಮಧ್ಯೆ ‘ನಮ್ಮ ಡಿಎನ್ಎ ಒಂದೇ’ ಅನ್ನುವ ಪದ ಬಳಕೆ ಆಗಾಗ ನಡೆಯುತ್ತಿದೆ. ಒಂದೇ DNA ಇದ್ದರೆ ಒಂದೇ ಥರ ಜನರು ಇರ್ತಾರಾ? ಅವರ ಆಚಾರ ಆಹಾರ ವಿಚಾರ ಇತ್ಯಾದಿ ಒಂದೇ ಥರ ಇರುತ್ತಾ? ಒಂದೇ ಥರ ಇರಬೇಕು ಅಂತ ನಾವ್ಯಾಕೆ ಅಂದುಕೋಬೇಕು?

ಎಲ್ಲರ DNA ಒಂದೇ ಯಾಕೆ ಬೇಕು?

ಒಂದು ವೇಳೆ DNA ಒಂದೇ ಥರ ಇದ್ದವರು ಒಂದೇ ರೀತಿಯಲ್ಲಿ ವರ್ತಿಸಿದರೆ ಒಳ್ಳೆಯದೇ. ಪರಸ್ಪರ ಆಚಾರ ವಿಚಾರ ಒಂದೇ ಥರ ಇದ್ರೆ ಸಹಬಾಳ್ವೆ ಸುಲಭ. ಸಂಘರ್ಷಕ್ಕೆ ಅವಕಾಶ ಇಲ್ಲದೆ, ಸರಳ ಜೀವನ ನಡಿಗೆ ತಾನೇ ಎಲ್ಲರಿಗೂ ಬೇಕಾಗಿರೋದು? ಆರೆಸ್ಸೆಸ್ ಮುಖ್ಯಸ್ಥರ ಮನಸ್ಸಿನ ಭಾವ ಮತ್ತು ಆಕಾoಕ್ಷೆ ಒಳ್ಳೆಯದೇ. ಈ ಹಿಂದೆ ಕೂಡಾ ಹಲವು ಬಾರಿ ಅವರು ಒಳ್ಳೆಯ ಸಂದೇಶ ನೀಡಿದ್ದಾರೆ. ಇಲ್ಲಿ ವಿಷಯ ಅದಲ್ಲ.

ಮುಖ್ಯಸ್ಥರು ಹೇಳಿದಂತೆ, ನಮ್ಮ ಎಲ್ಲರ DNA ಒಂದೇ ಆಗಿದ್ದರೆ, ಯಾಕೆ ನಮ್ಮ ನಮ್ಮಲ್ಲೇ ಈ ಪರಿ ಭಿನ್ನಾಭಿಪ್ರಾಯ? ನಮ್ಗೆ ಪಕ್ಕದ ಮನೆಯವರನ್ನೇ ಕಂಡ್ರೆ ಆಗಲ್ಲ. ಆಫೀಸಿನಲ್ಲಿ ಕೂಡಾ ನೂರಾರು ಅಭಿಪ್ರಾಯ ಭೇದ! ಒಬ್ಬ ಹೇಳಿದ್ದನ್ನು, ಸರಿ ಇದ್ರೂ ಒಪ್ಪಿಕೊಳ್ಳಲು ಆಗದಂತಹ ಮನಸ್ಥಿತಿ ನಮ್ಮಲ್ಲಿ ಬೆಳೆದು ಬಿಟ್ಟಿದೆ. ಎಲ್ಲಾದರೂ ಅಪಘಾತ ಆದ್ರೆ ಬೇರೆ ಧರ್ಮದವರು ಒಂದು ಪರ ವಹಿಸ್ತಾರೆ. ಯಾರದು ಸರಿ, ಯಾರಿಂದ ತಪ್ಪಾಗಿದೆ ಅನ್ನೋದು ಮುಖ್ಯವಾಗದೆ ಯಾರು ಯಾವ ಧರ್ಮ ಅನ್ನೋದೇ ಡಿಸೈಡಿಂಗ್ ಫ್ಯಾಕ್ಟರ್ ಆಗುತ್ತೆ. ಇದು ಇವತ್ತಿನ ನಮ್ಮ ಗ್ರೇಟ್ DNA ಯ ಹಣೆಬರಹ!!

ಮನುಷ್ಯನಲ್ಲಿ ಒಂದೇ DNA ಇದ್ದ ಕೂಡಲೇ ಸಮಾನ ಸಾಮಾಜಿಕ ನಡವಳಿಕೆ ಇರುತ್ತೆ ಅಂತ ಹೇಳಲು ಆಗಲ್ಲ. ಸಮಾನ ಅವಳಿ ಮಕ್ಕಳಲ್ಲಿ ಒಂದೇ ರೀತಿಯ ಯೋಚನಾ ವಿಧಾನ ಮತ್ತು ದೈಹಿಕ ಸಾಮ್ಯತೆಗಳಿರುತ್ತವೆ. ಕಾಲ ಕಳೆದಂತೆ, ಅವರಿಬ್ಬರ ಅನುಭವಗಳು ಬೆಳೆದಂತೆ ಬೇರೆಯ ಯೋಚನಾ ವಿಧಾನ ರೂಪಿಸಿಕೊಳ್ಳುತ್ತಾರೆ. 40 ಸಾವಿರ ವರ್ಷ ಅಥವಾ ಅದಕ್ಕಿಂತಲೂ ಹಿಂದಿನ DNA ಹಿಡಿದುಕೊಂಡು ನಾವೆಲ್ಲ ಒಂದೇ ಎಂದು ಟೆಕ್ನಿಕಲ್ ಆಗಿ ಹೇಳಿ ಬೀಗಬಹುದು! ಜತೆಗೆ, ನಮ್ಮೆಲ್ಲರ DNA ಒಂದೇ ಅನ್ನುವ ನೆಪದಲ್ಲಿ ಸಮಾಜದಲ್ಲಿ ಸಾಮರಸ್ಯ ಮೂಡಿಸಲು, ಸಹಬಾಳ್ವೆ ರೂಪಿಸಲು ಪ್ರಯತ್ನಿಸಬಹುದು. ಆರೆಸಸ್ ನಾಯಕರು ಮಾಡಿದ್ದೇ ಅದನ್ನು: ಅದು ಸ್ವಾಗತಾರ್ಹ ವಿಚಾರ.

ಸವಕಲು DNA ಯ ಎಳೆ ಹಿಡಿದು ಕೂತ್ರೆ ಸಾಲಲ್ಲ!

ಆದರೆ, ಮನುಷ್ಯನ DNA, ಬಣ್ಣ, ದೈಹಿಕ ಗಾತ್ರ, ಮುಖದ ಶೇಪು, ತಲೆಯ ಕ್ರಾಪು, ಆರ್ಥಿಕ ಸವಲತ್ತು, ಸ್ಟೇಟಸ್ ಮತ್ತು ಪ್ರಕೃತಿ ಇಟ್ಟು ಕಳಿಸಿದ ಲಿಂಗ ಕೂಡಾ ಒಂದೇ ಆಗಿದ್ರೆ ಮಾತ್ರ ನಮ್ಮವರಾ? ಇಲ್ಲದಿದ್ದರೆ ನಮ್ಮವರಲ್ಲವೆ?

ಮನುಷ್ಯ ಸಹಬಾಳ್ವೆ ಬಾಳಲು ಸಾವಿರಾರು ವರ್ಷಗಳ ಹಿಂದಿನ DNA ಯ ಹಳೆಯ ಎಳೆಯನ್ನ ಎಳೆದು ತರುವ ಅಗತ್ಯವಿಲ್ಲ. ನಮ್ಮ ಥರಾನೇ ಇನ್ನೊಬ್ಬ, ಅವನ ಥರಾನೇ ಇನ್ನೊಬ್ಬಳು ಅನ್ನುವ ಮಾನವೀಯ ಪ್ರಜ್ಞೆ ಒಂದಿದ್ದರೆ ಸಾಕು: DNA ಯ ನೂಲು ಸವಕಲಾಗಿ ಬಿಚ್ಚಿಕೊಂಡರೂ, ಜನರೆಲ್ಲರೂ ಪರಸ್ಪರ ಗೌರವಿಸಿಕೊಂಡು ಬಾಳುತ್ತಾರೆ.

ಈಗ ಪ್ರಪಂಚ ಬದಲಾಗುತ್ತಿದೆ. ನಾವು ವಿಶ್ವ ಗುರುವಾಗಲು ಹೊರಟವರು. ಯಾವುದೋ ದೇಶದ, ಅದ್ಯಾವುದೋ ಮೂಲ ಧರ್ಮದ, ‘ಅನಾಮಿಕ DNA’ ಒಂದರ ವ್ಯಕ್ತಿಯೊಬ್ಬ ಇನ್ಯಾವುದೋ ದೇಶಕ್ಕೆ ವಲಸೆ ಹೋಗಿ ಅಲ್ಲಿನ ಜನರ ಮನಸ್ಸು ಗೆದ್ದು ಅಧ್ಯಕ್ಷ, ಪ್ರಧಾನಿ ಅಥವಾ ಯಾವುದೇ ದೊಡ್ಡ ಅಧಿಕಾರಿಯಾಗ್ತಾನೆ. ಇಂಥ ಸಂದರ್ಭದಲ್ಲಿ DNA ಯೇ ಆತನ ಶತ್ರು. ಆದರೂ ಆತ/ಆಕೆ ತನ್ನ ಸಹನೆ, ಅಕ್ಕರೆ ಮತ್ತು ಜನರನ್ನು ತನ್ನವರಾಗಿಸಿಕೊಳ್ಳುವ ಕಲೆಯಿಂದ ಜನರ ಮನಸ್ಸಿನಲ್ಲಿ ಇನ್ನೊಂದು ಹೊಸ DNA ಮೂಡಿಸುತ್ತಾರೆ. ಆ ನವೀನ DNA ಯ ಹೆಸರು ಎಲ್ಲರಿಗೂ ಸಮಾನ ಅವಕಾಶ ನೀಡುವ ಮಾನವೀಯತೆ. ವಿಶ್ವ ಗುರು ಆಗುವ ಮುನ್ನ ನಾವೆಲ್ಲ, ನಮ್ಮ ದೇಶದಲ್ಲಿ ಈ ಯೂನಿವರ್ಸಲ್ DNA ರೂಪಿಸಿಕೊಳ್ಳಬೇಕು. ಆಗ ವಿಶ್ವದ ದಂಡ ಯಾತ್ರೆಯ ಹಾದಿ ಸುಗಮ. ಏನಂತೀರಿ? ನಿಮ್ಮ ಅಭಿಪ್ರಾಯವನ್ನು hosakannada@gmail.com ಗೆ ಬರೆದು ತಿಳಿಸಿ. ವಂದನೆಗಳು, ನಿಮ್ಮ ಸುದರ್ಶನ್ ಬೆಳಾಲ್.

Mangalore: ಮಂಗಳೂರಿನಲ್ಲೂ ನಡೆಯಲಿದೆ ಸಂಪುಟ ಸಭೆ: ಸ್ಪೀಕರ್ ಖಾದ‌ರ್ ಮಾಹಿತಿ!

Comments are closed.