ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಗೆ ದೊಡ್ಡ ಮುಖಭಂಗ: ಸಚಿವ ಚೆಲುವರಾಯ ಸ್ವಾಮಿ

ಮಂಡ್ಯ: ‘ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯವರಿಗೆ ದೊಡ್ಡ ಮುಖಭಂಗವಾಗಿದೆ. ಧರ್ಮಸ್ಥಳದ ಸೌಜನ್ಯ ಸತ್ತಾಗ ಇದೇ ಆರ್. ಅಶೋಕ್ ಗೃಹ ಸಚಿವರಾಗಿದ್ದರು. ಅವರು ಅಂದೇ ಸೂಕ್ತ ತನಿಖೆ ಮಾಡಬಹುದಿತ್ತು. ಧರ್ಮಸ್ಥಳದ ಬಗ್ಗೆ ಮಾತನಾಡಲು ಬಿಟ್ಟಿದ್ದು ಮಹಾಪರಾಧ’ ಎಂದು ರಾಜ್ಯದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಅವರು ಭಾನುವಾರ ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿ, ‘ಧರ್ಮಸ್ಥಳದ ವಿರುದ್ಧ ಆರೋಪ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್.ಅಶೋಕ್ ಮುಂತಾದವರೆಲ್ಲಈಗ ಮಾತನಾಡುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಸೌಜನ್ಯ ಹೋರಾಟ ನಡೆಯುವಾಗ ಇವರೆಲ್ಲ ಎಲ್ಲಿ ಹೋಗಿದ್ದರು. ಇವರದೇ ಸರ್ಕಾರವಿತ್ತಲ್ಲಾ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ನಾವು ಎಸ್‌ಐಟಿ ರಚನೆ ಮಾಡಿದಾಗ ಬಾಯಿ ಮುಚ್ಚಿಕೊಂಡಿದ್ದು ಈಗ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯೋಕೆ ನೋಡ್ತಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ತನಿಖೆ ಕ್ರಮ ಆಗಬೇಕು ಎಂದಾಗ ಬಿಜೆಪಿಯವರಿಗೆ ಒಮ್ಮೆಲೇ ಜ್ಞಾನೋದಯವಾಗಿದೆ. ಎಸ್‌ಐಟಿ ಮೂಲಕ ನಮ್ಮ ಸರ್ಕಾರ ಸತ್ಯವನ್ನು ಹೊರಗೆ ತಂದಿದೆ. ಇನ್ನು ಮುಂದೆಯಾದರೂ ಬಿಜೆಪಿಯವರು ಧರ್ಮಧ ವಿಚಾರದಲ್ಲಿ ರಾಜಕಾರಣ ಮಾಡೋದನ್ನು ಬಿಡಲಿ ಎಂದು ಅವರು ಹೇಳಿದರು.

ಡಿ.ಕೆ.ಶಿ.ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಡಿ.ಕೆ.ಶಿವಕುಮಾರ್ ಬಿಜೆಪಿಗೆ ಹೋಗುವುದಾಗಿದ್ದರೆ ಎಂದೋ ಹೋಗಿರುತ್ತಿದ್ದರು. ಅವರಿ ಕಾಂಗ್ರೆಸ್‌ನಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದಲ್ಲದೇ, ಈಗ ಉತ್ತಮ ಕೆಪಿಸಿಸಿ ಅಧ್ಯಕ್ಷರು ಅಂತ ಹೆಸರು ಪಡೆದಿದ್ದಾರೆ. ಅವರೇಕೆ ಬಿಜೆಪಿಗೆ ಸೇರ್ತಾರೆ. ಸಂದರ್ಭ ಬಂದಾಗ ಅವರೂ ಸಿಎಂ ಆಗುತ್ತಾರೆ. ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ’ ಎಂದಿದ್ದಾರೆ ಸಚಿವ ಚೆಲುವರಾಯ ಸ್ವಾಮಿ.
Comments are closed.