Dharmasthala Case- ED ತನಿಖೆಗೆ ಸಂಸದ ಕೋಟಾ ಒತ್ತಾಯ; ಹೆಗ್ಗಡೆಯ ಈ ಅಕ್ರಮಗಳ ಮೇಲೆ ತನಿಖೆ ಯಾಕಿಲ್ಲ?- ಸೋಮನಾಥ್ ನಾಯಕರ ಈ ಪ್ರಶ್ನೆಗಳಿಗೆ ಉತ್ತರಿಸುವಿರೇ ‘ಸರಳ’ ಸಂಸದರೇ?

ರಾಜ್ಯ ಕಂಡ ಉತ್ತಮ ನಡತೆಯ, ಸರಳ ಜೀವಿ, ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಪತ್ರವೊಂದು ಬಂದಿದೆ. ಶ್ರೀ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ (?) ಮಾಡುವವರ ಮೇಲೆ E.D ತನಿಖೆ ಮಾಡಲು ಗೃಹಮಂತ್ರಿಗೆ ಅವರು ಬರೆದ ಪತ್ರಕ್ಕೆ ಸಾಮಾಜಿಕ ಹೋರಾಟಗಾರ, ನಾಗರಿಕ ಸೇವಾ ಟ್ರಸ್ಟ್, ಗುರುವಾಯನಕೆರೆ ಇದರ ಸಂಚಾಲಕ ಸೋಮನಾಥ ನಾಯಕ್ ಕೆ. ಇವರು ಈ ಪ್ರತಿ ಪತ್ರ ಬರೆದಿದ್ದು, ಅವರು ಕೋಟಾ ಶ್ರೀನಿವಾಸ ಪೂಜಾರಿಯವರ ಮೇಲೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಕೋಟಾ ಶ್ರೀನಿವಾಸ ಪೂಜಾರಿ ನಮ್ಮವರು. ಕೋಟಾರದ್ದು ಒಳ್ಳೆಯವರ ಕೋಟಾ!! ಹಾಗಾಗಿ ಈ ಸರಳ ಸಜ್ಜನ ಎಂದು ಜನರು ನಂಬುವ ರಾಜಕಾರಣಿ ಈ ಪ್ರಶ್ನೆಗೆ ಉತ್ತರಿಸಲೇ ಬೇಕಿದೆ. ಹಾಗಿದ್ರೆ ಈಗ ನೋಡೋಣ, ಕೋಟಾರಿಗೆ ಸೋಮನಾಥ್ ಬರೆದ ಪತ್ರದಲ್ಲಿ ಏನಿದೆ ಎಂದು.

ಮಾನ್ಯ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ನಮಸ್ಕಾರಗಳು.
ಶ್ರೀ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ (?) ಮಾಡುವವರ ಮೇಲೆ E.D ತನಿಖೆ ಮಾಡಲು ಗೃಹಮಂತ್ರಿಗೆ ನೀವು ಬರೆದ ಪತ್ರ ನೋಡಿದೆ. ತನಿಖೆ ಆಗಲಿ. ಅವರ್ಯಾರಿಗೂ ಈ ಉದ್ದೇಶಕ್ಕೆ ವಿದೇಶಿ ಹಣ ಬರುತ್ತಿಲ್ಲವೆಂದು ನಮಗೆ ನಂಬಿಕೆ ಇದೆ. ಸತ್ಯ ಹೊರಬರಲಿ.
ಶ್ರೀ ವೀರೇಂದ್ರ ಹೆಗ್ಗಡೆಯವರ ಮೇಲೂ ಇ.ಡಿ. ತನಿಖೆಗೆ ನೀವು ಯಾಕೆ ಪತ್ರ ಬರೆದಿಲ್ಲ? ಪ್ರಧಾನಿ ಮೋದಿ, ಕೇಂದ್ರ ಸಚಿವರು ಹಾಗೂ ಎಲ್ಲಾ ಸಂಸದರಿಗೆ (ನಿಮಗೂ) ನಾವು ಈಮೇಲ್ ಮಾಡಿದ ಮನವಿಯಲ್ಲಿ ಹೆಗ್ಗಡೆಯವರ ಅಕ್ರಮಗಳ, 18 ಕಾನೂನು ಉಲ್ಲಂಘನೆಗಳ ಸಮಗ್ರ ದಾಖಲೆಗಳನ್ನು ಲಗತ್ತಿಸಿದ್ದೆವು. ಇವುಗಳಲ್ಲಿರುವುದು ಸರಕಾರಿ ದಾಖಲೆಗಳು, ಆದೇಶಗಳು. ಇವುಗಳು ಸುಳ್ಳಾ? ದೇವಸ್ಥಾನದ 1050 ಎಕ್ರೆ ಭೂಮಿಯನ್ನು ಹೆಗ್ಗಡೆಯವರು ತನ್ನ ಸ್ವಂತ ಕುಟುಂಬಕ್ಕೆ ಮಾಡಿಕೊಂಡದ್ದು, ದೇವಳದ ಅಡಿಸ್ಥಳ 1.72 ಎಕ್ರೆಯೂ ಅಣ್ಣಪ್ಪ ಬೆಟ್ಟದ 3.90 ಎಕ್ರೆಯೂ ಹೆಗ್ಗಡೆಯವರ ಹೆಸರಿನಲ್ಲಿರುವುದು ಸುಳ್ಳಾ? ಭಾರೀ ಭೂಮಾಲಕರಾದರೂ ಭೂರಹಿತ ಎಂದು ಸುಳ್ಳು ಹೇಳಿ ಹರ್ಷೇoದ್ರ ಕುಮಾರ್ 7.59 ಎಕ್ರೆ ದರ್ಖಾಸ್ತು ಪಡೆದದ್ದು ಸುಳ್ಳಾ?
ಲೇವಾದೇವಿ ಕಾಯ್ದೆಯ ಲೈಸನ್ಸ್ ಇಲ್ಲದೆ ಕಾನೂನುಬಾಹಿರವಾಗಿ SKDRDP ಟ್ರಸ್ಟ್ ನಿಂದ ಬೃಹತ್ ಪ್ರಮಾಣದ ಲಾಭದಾಯಕ ಬಡ್ಡಿ ವ್ಯವಹಾರ ಮಾಡಿದ್ದಕ್ಕೆ ಕ್ರಿಮಿನಲ್ ಕೇಸ್ ನಡೆಯುತ್ತಿರುವುದು ಸುಳ್ಳಾ? 2017 ರಲ್ಲಿ ರಚನೆಯಾದ SKDRDP ಬಿ.ಸಿ. ಟ್ರಸ್ಟ್ ಗೆ ವಿವಿಧ ಬ್ಯಾಂಕ್ ಗಳು 5.25% ಕಮಿಷನ್ ಕೊಟ್ಟು, ಇದನ್ನು SHG ಯ ಬಡ ಸದಸ್ಯರ ಮೇಲೆ ಹೇರುತ್ತಿರುವುದು ಸುಳ್ಳಾ? ಮಂಜುನಾಥ ಸ್ವಾಮಿ ದೇವಸ್ಥಾನವನ್ನು The Institute at Dharmasthala ಎಂದು ಹಾಗೂ ಇದು “ಸಾರ್ವಜನಿಕ” ಎ0ದು ದೃಢಪತ್ರ ಸಲ್ಲಿಸಿ, 100% ಆದಾಯಕರ ವಿನಾಯ್ತಿ ಪಡೆದದ್ದು ಸುಳ್ಳಾ? ಹೀಗಿದ್ದರೂ, ಹಿಂದು ಧಾರ್ಮಿಕ ದತ್ತಿ ಕಾಯ್ದೆಯ ಸೆ.53 ರಂತೆ ನೋಂದಾಯಿಸಲು ನಿರಾಕರಿಸಿದ್ದು ಸುಳ್ಳಾ?ದೇವಳದ 3000 + ಕಾರ್ಮಿಕರಿಗೆ ಪ್ರೊವಿಡೆಂಟ್ ಫಂಡ್ ಕೊಡಲು ನಿರಾಕರಿಸಿ ಹೈಕೋರ್ಟ್ ಮೆಟ್ಟಲೇರಿದ್ದು ಸುಳ್ಳಾ? 2017ರ ಈ ರಿಟ್ ಪಿಟಿಷನ್ ನಲ್ಲಿ ಹೈಕೋರ್ಟ್ ಹೆಗ್ಗಡೆಯವರಿಗೆ ‘ವಾಗ್ದಂಡನೆ’ ಮಾಡಿದ್ದು ಸುಳ್ಳಾ?
ಗ್ರಾಚುವಿಟಿ ಕಾಯ್ದೆ ಪ್ರಕಾರ ತನ್ನ ಸಂಸ್ಥೆಗಳನ್ನು ಹಲವು ದಶಕಗಳ ಕಾಲ ನೋಂದಣಿ ಮಾಡದೆ, ನಮ್ಮ ದೂರಿನ ಬಳಿಕ ಕೊನೆಗೂ 6 ಸಂಸ್ಥೆಗಳನ್ನು 2021 ರಲ್ಲಿ ನೋಂದಣಿ ಮಾಡಬೇಕಾಗಿ ಬಂದದ್ದು ಸುಳ್ಳಾ? ದೇವಳದ ಆಸ್ತಿ, ಆದಾಯ (ರೂ.550-600 ಕೋಟಿ?), ಖರ್ಚು ಗುಪ್ತವಾಗಿಟ್ಟರುವುದು ಸುಳ್ಳಾ? ದೇವಳದ ಸ್ವಚ್ಛತಾ ಕರ್ಮಿ ದಲಿತರಿಗೆ ಮನೆ ಅಡಿಸ್ಥಳ ತಲಾ 3 ಸೆಂಟ್ಸ್ ನಷ್ಟೂ ಭೂಹಕ್ಕು ಕೊಡದ್ದು, ಅವರು ಜೋಪಡಿಯಲ್ಲಿ ವಾಸಿಸುತ್ತಿರುವುದು ಸುಳ್ಳಾ? ದಲಿತರಿಗೆ ತಲಾ ಒಂದು ಎಕ್ರೆ ಭೂಮಿ ಕೊಡಿಸುವಿಕೆ ಧರ್ಮಸ್ಥಳದಿಂದಲೇ ಆರಂಭಿಸೋಣ ಎಂದು ನೀವು ರಾಜ್ಯದಲ್ಲಿ ಮಂತ್ರಿಯಾಗಿದ್ದಾಗ ನಮ್ಮ ನಿಯೋಗಕ್ಕೆ ಭರವಸೆ ನೀಡಿದ್ದು ಸುಳ್ಳಾ? ನ್ಯಾಯದಾನ ಮಾಡುವ ಹೆಗ್ಗಡೆಯವರೇ ವಾದಿ/ ಪ್ರತಿವಾದಿಯಾಗಿ ವಿವಿಧ ಕೋರ್ಟ್ ಗಳಲ್ಲಿ 334 + ಸಿವಿಲ್ & ಕ್ರಿಮಿನಲ್ ಕೇಸ್ ಗಳಿರುವುದು ಸುಳ್ಳಾ?
1.ಸುಮಾರು 2500 ಎಕ್ರೆ ಭೂಹಗರಣ ಹಾಗೂ 2. ಹತ್ತಾರು ಸಾವಿರ ಕೋಟಿ ರೂಪಾಯಿ ಆರ್ಥಿಕ ಹಗರಣ ಕಣ್ಣೆದುರಿಗೇ ಇದ್ದರೂ ನೀವೇಕೆ ಕಣ್ಣು ಮುಚ್ಚಿ ಕುಳಿತ್ತಿದ್ದೀರಿ? ನಿಮ್ಮ ಪಕ್ಷ ಏಕೆ ಅವರನ್ನು ರಕ್ಷಿಸಲು ಧಾವಿಸುತ್ತಿದೆ?
ತಾನು ಪಾರದರ್ಶಕ, ಸ್ವಚ್ಛ, ಯಾವುದೇ ತನಿಖೆಗೆ ಸಿದ್ಧ ಎಂದು ಹೇಳುವ ಹೆಗ್ಗಡೆಯವರ ಮೇಲೆ ಇ.ಡಿ. ತನಿಖೆ ಮಾಡಿಸಲು ನೀವು ಕೇಂದ್ರ ಗೃಹ ಮಂತ್ರಿಗೆ ಪತ್ರ ಬರೆಯಲೇಬೇಕಲ್ಲವೇ? ಹೆಗ್ಗಡೆಯವರು ಅದನ್ನು ಖಂಡಿತಾ ಸ್ವಾಗತಿಸುತ್ತಾರಲ್ಲವೇ? ನಿಮ್ಮ ಪಕ್ಷದ ಕೇಂದ್ರ ಸರಕಾರ ಅವರನ್ನು ರಾಜ್ಯಸಭಾ ಸದಸ್ಯರಾಗಿ ನೇಮಿಸಿರುವುದರಿಂದ ಅವರ ಮೇಲಿನ ಕಳಂಕ ನಿವಾರಿಸುವುದು ನಿಮ್ಮ ಜವಾಬ್ದಾರಿಯಲ್ಲವೇ? ಅದು ಸಾಧ್ಯವಾಗುವುದು ಸಮಗ್ರ ತನಿಖೆಯಿಂದ ಮಾತ್ರವಲ್ಲವೇ?
ಇದು ಕೆ.ಸೋಮನಾಥ ನಾಯಕ್ ಅಧ್ಯಕ್ಷ, ನಾಗರಿಕ ಸೇವಾ ಟ್ರಸ್ಟ್ ರವರು ಕೋಟಾ ಶ್ರೀನಿವಾಸ್ ಪೂಜಾರಿ ತವರಿಗೆ ಹಾಕಿದ ಪ್ರಶ್ನೆ.
Comments are closed.