Kodagu: ಆಟೋ ರಿಕ್ಷಾದಲ್ಲಿ ಮಗುವಿಗೆ ಜನ್ಮವಿತ್ತ ಮಹಿಳೆ!

Kodagu: ಪ್ರಸವಕ್ಕಾಗಿ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿಯೊಬ್ಬರು ಮಾರ್ಗಮಧ್ಯದಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.

ಸುಂಟಿಕೊಪ್ಪ ಸಮೀಪದ ಕಾಂಡನಕೊಲ್ಲಿಯ ನಿವಾಸಿ ದಾಸ ಎಂಬುವವರ ಪತ್ನಿ ಲಕ್ಷ್ಮಿ ಎಂಬವರಿಗೆ ಇಂದು ಬೆಳಿಗ್ಗೆ ದಿಢೀರ್ ಆಗಿ ಪ್ರಸವ ವೇದನೆ ಕಾಣಿಸಿಕೊಂಡಿದೆ. ಅವರನ್ನು ಮಾದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಲೆಂದು ಮನೆಯವರು ಆಟೋ ರಿಕ್ಷಾಕ್ಕಾಗಿ ಬೆಳಿಗ್ಗೆ 10.15 ರ ಸಮಯದಲ್ಲಿ ಸುಂಟಿಕೊಪ್ಪ ಆಟೋ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಸಿ. ಸುನಿಲ್ ರವರಿಗೆ ಕರೆ ಮಾಡಿದ್ದಾರೆ.
ತಕ್ಷಣ ಸಿ.ಸಿ. ಸುನಿಲ್ ರವರು ತಮ್ಮ ಆಟೋ ರಿಕ್ಷಾದಲ್ಲಿ ಕಾಂಡನಕೊಲ್ಲಿಗೆ ದೌಡಾಯಿಸಿದ್ದಾರೆ. ಆಟೋ ರಿಕ್ಷಾದಲ್ಲಿ ಗರ್ಭಿಣಿ ಹಾಗೂ ಇತರೆ ಮಹಿಳೆಯರೊಂದಿಗೆ ಮಾದಾಪುರ ಆಸ್ಪತ್ರೆಗೆ ತೆರಳುತ್ತಿದ್ದಾಗ ಮಾರ್ಗಮಧ್ಯದ ಹಟ್ಟಿಹೊಳೆ ಕಳೆದು ಒಂದು ಕಿ.ಮೀ. ದೂರ ಕ್ರಮಿಸುವಷ್ಟರಲ್ಲಿ ಗರ್ಭಿಣಿ ಲಕ್ಷ್ಮಿ ಆಟೋ ರಿಕ್ಷಾದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ತಾಯಿ ಮಗುವನ್ನು ಮಾದಾಪುರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಮಾದಾಪುರ ಆಸ್ಪತ್ರೆಯ ಸಿಬ್ಬಂದಿಗಳ ತುರ್ತು ಸ್ಪಂದನೆ ಮತ್ತು ಸಕಾಲಿಕ ಚಿಕಿತ್ಸೆಯಿಂದಾಗಿ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
Comments are closed.