Health tips: ಉಣುಗು ಸಾಯಿಸಲು ಅಪಾಯಕಾರಿ ವಿಷ ಸಿಂಪಡಿಸಬೇಡಿ – ಹೊಮಿಯೋಪತಿಯಲ್ಲಿದೆ ಒಳ್ಳೆಯ ಪರಿಹಾರ – ಪಶುವೈದ್ಯ ಪ್ರಸನ್ನ ಹೆಗಡೆ

Health tips: ಉಣುಗಿನ ಕಾಟ ಬೇಸಿಗೆಯಲ್ಲಿ ಹೆಚ್ಚಾದರೂ, ಹೊರಗೆ ಮೇಯಲು ಹೋಗುವ ಆಕಳಿಗೆ ಎಲ್ಲಾ ಕಾಲದಲ್ಲೂ ಕಚ್ಚುತ್ತಿರುತ್ತದೆ. ಕೆಲವು ದೊಡ್ಡ ಜಾತಿಯ ಉಣಗು ಹೊಟ್ಟೆ ತುಂಬಾ ರಕ್ತ ಕುಡಿದು ಉದುರಿ ಹೋಗುತ್ತದೆ. ಇದರಿಂದ ಆಕಳಿಗೆ ಹೆಚ್ಚಿನ ಅಪಾಯ ಇಲ್ಲ. ಆದರೆ ಸಣ್ಣ ಜಾತಿಯ ಉಣಗು ದೇಹದ ಮೇಲೆ ಉಳಿದುಕೊಳ್ಳುತ್ತದೆ.

ಕುತ್ತಿಗೆ ಸುತ್ತಲೂ, ಕಿವಿ ಮೇಲೆ, ಕಣ್ಣಿನ ರೆಪ್ಪೆಯ ಮೇಲೂ ಕಚ್ಚಲು ಪ್ರಾರಂಭಿಸುತ್ತದೆ. ಇಡೀ ದೇಹದ ಮೇಲೂ ತಮ್ಮ ವಾಸ ಸ್ಥಾನ ವಿಸ್ತರಿಸಿಕೊಳ್ಳುತ್ತಾ ಹೋಗುತ್ತವೆ. ನಿರಂತರವಾಗಿ ಕಚ್ಚುತ್ತಾ ಜಾನುವಾರಿಗೆ ಚಿತ್ರಹಿಂಸೆ ಕೊಡುತ್ತದೆ. ಇದರಿಂದಾಗಿ ಜಾನುವಾರಿನ ಆರೋಗ್ಯ ದುರ್ಬಲಗೊಳ್ಳುತ್ತದೆ. ಚರ್ಮದಲ್ಲಿ ಕಜ್ಜಿ ಪ್ರಾರಂಭವಾಗುತ್ತದೆ. ಕೂದಲುಗಳು ಒರಟಾಗಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತವೆ. ಉಣುಗನ್ನು ಸಾಯಿಸಲು ಅಪಾಯಕಾರಿ ವಿಷ ಸಿಂಪಡಿಸಬೇಡಿ. ಗಾಯಗೊಂಡಿರುವ ಚರ್ಮಕ್ಕೆ ವಿಷ ತಾಗಿದರೆ ಅಪಾಯ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ
ಪರಾವಲಂಬಿ ಜೀವಿಯಾದ ಉಣಗು ಇಷ್ಟೋಂದು ದೊಡ್ಡ ಪ್ರಮಾಣದಲ್ಲಿ ದೇಹವನ್ನು ಆಕ್ರಮಿಸುತ್ತಿದೆ ಎಂದರೆ, ಉಣುಗುಗಳಿಗೆ ಜೀವಿಸಲು ಪೂರಕವಾದ ಆಹಾರ, ವಾತಾವರಣ ಆಕಳಿನ ದೇಹದಲ್ಲಿ ಸಿಗುತ್ತಿದೆ ಎಂದೇ ಅರ್ಥ. ಆರೋಗ್ಯವಂತ ಸಧೃಡ ದೇಹವನ್ನು ಯಾವುದೇ ವೈರಸ್, ಬ್ಯಾಕ್ಟೀರಿಯಾ ಕೂಡಾ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಅಂದರೆ ಇಲ್ಲಿ ದನಕರುಗಳ ಆರೋಗ್ಯದಲ್ಲಿ ವ್ಯತ್ಯಾಸ ಆಗಿದೆ ಎಂದು ಸುಲಭವಾಗಿ ಊಹಿಸಬಹುದು.
ಹೊಮಿಯೋಪತಿಯ ಹೆಚ್ಚುಗಾರಿಕೆ ಇಂತಹ ಸಂದರ್ಭದಲ್ಲಿ ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ಯಾವುದೇ ಬಾಹ್ಯ ಲೇಪನವಿಲ್ಲದೇ ಸಣ್ಣ ಸಣ್ಣ ಬಿಳಿ ಕಾಳನ್ನು ತಿನ್ನಿಸುವುದರ ಮೂಲಕ ಉಣುಗನ್ನು ಜಾನುವಾರಿನ ದೇಹ ಬಿಟ್ಟು ಹೋಗುವಂತೆ ಮಾಡಬಹುದು. ಲಕ್ಷಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸೂಕ್ತ ಔಷಧಿ (ಹೆಚ್ಚಿನ ಸಂದರ್ಭದಲ್ಲಿ ಗ್ರಾಫೈಟಿಸ್ ಎನ್ನುವ ಔಷಧಿ) ಕೊಡಬೇಕು. ಕೇವಲ ಬೆಳಿಗ್ಗೆ ಒಂದು ಬಾರಿಯಂತೆ ಹತ್ತರಿಂದ – ಹದಿನೈದು ದಿನಗಳವರೆಗೆ ಹಾಕಬೇಕು.
ಉಣುಗು ತೀರಾ ಹೆಚ್ಚಾಗಿ ಕಣ್ಣು, ಕಿವಿ, ಕೆಚ್ಚಲು, ಕುತ್ತಿಗೆ ಎಲ್ಲಾ ಕಡೆ ಆವರಿಸಿದ್ದರೆ ದಿನಕ್ಕೆ ಎರಡು ಬಾರಿ ಔಷಧ ಹಾಕಬೇಕಾಗಬಹುದು. ಒಂದುವಾರದೊಳಗೆ ಔಷಧಿಯ ಪರಿಣಾಮ ಕಾಣಲಾರಂಭಿಸಿ ಹದಿನೈದರಿಂದ – ಇಪ್ಪತ್ತು ದಿನಗಳೊಳಗೆ ದನಕರುಗಳ ಉಣುಗಿನ ಸಮಸ್ಯೆ ನಿವಾರಣೆ ಮಾಡಬಹುದು. ಒಂದು ತಿಂಗಳ ನಂತರ ದನಕರುಗಳ ಚರ್ಮ ನುಣುಪಾಗಿ ಕೂದಲು ಹೊಳಪಾಗುತ್ತದೆ. ಇಲ್ಲಿ ಈ ಔಷಧಿಯ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಸರಿಯಾಗಿ ನೋಡಿ, ಕೊಟ್ಟಿಗೆಯ ಗೋಡೆಯ ಮೇಲೆ, ಅಟ್ಟದ ದಬ್ಬೆಯ ಮೇಲೆ, ದನಕರು ಕಟ್ಟುವ ಹಗ್ಗ ದೊಣಕಲು ಮೇಲೂ ಉಣುಗಿನ ವಾಸ ಸ್ಥಾನ ಆಗಿರಬಹುದು. ಮೊದಲು ಅದನ್ನು ವಿಷ ಸಿಂಪಡಿಸಿ ನಾಶ ಮಾಡಬೇಕು.
Comments are closed.