Mangaluru: ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರಾಣಿಹತ್ಯೆಗೆ ಸಂಚು!?: ದೂರು ದಾಖಲು!

Share the Article

Mangaluru: ಪಿಲಿಕುಳ ಜೈವಿಕ ಉದ್ಯಾನವನದ ವನ್ಯಮೃಗಗಳಿಗೆ ಸರಬರಾಜು ಮಾಡುವ ಮಾಂಸದಲ್ಲಿ ಕೊಳೆತ ಅಥವಾ ವಿಷಪೂರಿತ ಮಾಂಸ ಬೆರೆಸಿ, ಪ್ರಾಣಿಗಳನ್ನು ಕೊಲ್ಲಲು ಹುನ್ನಾರ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಉದ್ಯಾನವನದ ವೈದ್ಯಾಧಿಕಾರಿ ಡಾ. ದಿವ್ಯಾಗಣೇಶ್‌ ಅವರು ಆಗಸ್ಟ್ 8ರಂದು ಪೊಲೀಸರಿಗೆ ದೂರು ನೀಡಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.

ಹಿಂದಿನ ಮಾಂಸ ಸರಬರಾಜು ಟೆಂಡ‌ರ್ ಹೊಂದಿದ್ದ ಖಾದ‌ರ್ ಅವರ ಪರವಾಗಿ ಅಬ್ಬಾಸ್ ಮತ್ತು ಹನೀಫ್ ಎಂಬುವವರು ಈ ಹಿಂದೆ ಮಾಂಸ ವಿತರಣೆ ಮಾಡುತ್ತಿದ್ದರು. ಆಗಸ್ಟ್ 2025ರಿಂದ ಹೊಸ ಟೆಂಡರುದಾರರು ಮಾಂಸ ಸರಬರಾಜು ಮಾಡಲು ಆರಂಭಿಸಿದ್ದಾರೆ. ಆಗಸ್ಟ್ 7ರಂದು, ಆರೋಪಿ ಹನೀಫ್ ಅವರು ಉದ್ಯಾನವನದ ನೌಕರ ಹರೀಶ್ ಅವರಿಗೆ ದೂರವಾಣಿ ಕರೆ ಮಾಡಿ “ಹೊಸ ಟೆಂಡರುದಾರರು ಪೂರೈಸುವ ಮಾಂಸದೊಂದಿಗೆ ಅನ್ಯ ಮಾಂಸ (ಕೊಳೆತ ಅಥವಾ ವಿಷಕಾರಿ) ಬೆರೆಸಿ, ಪ್ರಾಣಿಗಳು ಅದನ್ನು ತಿರಸ್ಕರಿಸುವಂತೆ ಮಾಡಬೇಕು. ಹೀಗೆ ಮಾಡಿ ಹೊಸಬರ ಟೆಂಡ‌ರ್ ರದ್ದುಗೊಳಿಸಿ, ಉದ್ಯಾನವನದ ಪ್ರಾಣಿಗಳನ್ನು ಕೊಲ್ಲುವ ಹುನ್ನಾರ ನಡೆಸಲಾಗಿದೆ.” ಎಂದು ತಿಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಸ್ತುತ ಟೆಂಡ‌ರ್ ಪಡೆದಿರುವವರನ್ನು ಅನರ್ಹಗೊಳಿಸುವುದು ಮತ್ತು ಉದ್ಯಾನವನದ ಪ್ರಾಣಿಗಳಿಗೆ ಹಾನಿ ಮಾಡುವ ಮೂಲಕ ವಿಧ್ವಂಸಕ ಕೃತ್ಯ ಎಸಗುವುದು ಈ ಸಂಚಿನ ಪ್ರಮುಖ ಉದ್ದೇಶವಾಗಿದೆ ಎಂದು ವೈದ್ಯಾಧಿಕಾರಿ ಡಾ. ದಿವ್ಯಾಗಣೇಶ್ ಅವರು ತಮ್ಮ ದೂರಿನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

Dharmasthala Case: ವಿಧಾನ ಸೌಧಕ್ಕೆ ಆಗಮಿಸಿದ್ದ ಎಸ್‌ಐಟಿ ತಂಡದ ಅಧಿಕಾರಿ – ಗೃಹಸಚಿವ, ಸಿಎಂರನ್ನು ಭೇಟಿಯಾದ ತನಿಖಾಧಿಕಾರಿ ಅನುಚೇತ್

Comments are closed.