Mangaluru: ಈಜುಕೊಳದಲ್ಲಿ ಮುಳುಗಿ ಸಾವಿಗೀಡಾದ ರಾಷ್ಟ್ರೀಯ ಈಜುಪಟು

Share the Article

Mangaluru: ನಗರದ ಮಂಗಳ ಸ್ಟೇಡಿಯಂ ಸಮೀಪ ಇರುವ ಮಹಾನಗರಪಾಲಿಕೆಯ ಈಜುಕೊಳದಲ್ಲಿ ಈಜು ತರಬೇತುದಾರರಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದ ರಾಷ್ಟ್ರೀಯ ಈಜುಪಟು ಕೆ.ಚಂದ್ರಶೇಖರ (52) ಭಾನುವಾರ ಬೆಳಗ್ಗೆ ಈಜುತ್ತಿದ್ದ ಸಮಯದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಚಂದ್ರಶೇಖರ್‌ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಂಟ್ವಾಳ ತಾಲೂಕು ಸೂರಿಕುಮೇರು ಮೂಲದವರಾದ ಚಂದ್ರಶೇಖರ್‌ ರೈ ಅವರು ಮಂಗಳೂರಿನ ಕುದ್ರೋಳಿ ಸಮೀಪ ವಾಸವಾಗಿದ್ದರು. ಇವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ಈಜುಕೊಳದಲ್ಲಿ ಗುತ್ತಿಗೆ ಆಧಾರದಲ್ಲಿ ಲೈಫ್‌ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು. ಮೂರು ವರ್ಷದ ಹಿಂದೆ ನಗರದ ಮಂಗಳೂರು ಮಹಾನಗರಪಾಲಿಕೆ ಈಜುಕೊಳದ ನಿರ್ವಹಣೆ ಮಾಡುತ್ತಿದ್ದರು. ಇವರು ಜೀವರಕ್ಷಕರಾಗಿಯೂ, ಈಜು ತರಬೇತುದಾರರಾಗಿಯೂ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ರವಿವಾರ ಅವರು ಬೆಳಗ್ಗೆ ಕೆಲಕಾಲ ಈಜುಕೊಳದಲ್ಲಿ ಅಭ್ಯಾಸ ಮಾಡುವುದಾಗಿ ಹೇಳಿ ಮೊಬೈಲ್‌ ಫೋನನ್ನು ಕಾವಲುಗಾರನಿಗೆ ನೀಡಿದ್ದು, ನಂತರ ಡೈವ್‌ ಮಾಡಿದ್ದರು. ಆ ಮೇಲೆ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ

ಇವರು 2023 ರಲ್ಲಿ ಒಂದೇ ಉಸಿರಿನಲ್ಲಿ 28 ಬಾರಿ ಮುಂಭಾಗಕ್ಕೆ ತಿರುಗಿ ಚಂದ್ರಶೇಖರ ರೈ ವರ್ಲ್ಡ್‌ ವೈಡ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಇವರು ಸ್ಥಾನ ಪಡೆದಿದ್ದರು. ಇದಕ್ಕೂ ಮೊದಲು ಎರಡು ಬಾರಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸ್ಥಾನ ಗಳಿಸಿದ್ದರು.

ವೆನ್ಲಾಕ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಚಂದ್ರಶೇಖರ್‌ ಅವರ ಸಹೋದರ ರಾಧಾಕೃಷ್ಣ ರೈ ತಿಳಿಸಿದ್ದಾರೆ.

Comments are closed.