Dharmasthala:ಮಾಧ್ಯಮ ನಿರ್ಬಂಧ: ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಹರ್ಷೇಂದ್ರ ಕುಮಾರ್!

Share the Article

Dharmasthala: ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬರು ನೀಡಿದ ದೂರಿನ ತನಿಖೆಯನ್ನು ಎಸ್‌ಐಟಿ ತಂಡ ನಡೆಸುತ್ತಿದೆ. ಈ ವಿಷಯವನ್ನು ಮುಂದಿಟ್ಟುಕೊಂಡು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿರುವ ಕುಟುಂಬದ ವಿರುದ್ದ ಅವಹೇಳನಕಾರಿ ವಿಷಯಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಹರ್ಷೇಂದ್ರ ಕುಮಾರ್ ಡಿ ಬೆಂಗಳೂರಿನ ನ್ಯಾಯಾಲಯ ಮೊರೆ ಹೋಗಿದ್ದರು.

ನ್ಯಾಯಾಲಯ ಯೂಟ್ಯೂಬ್ ಚಾನೆಲ್‌ಗಳು ಸೇರಿದಂತೆ ಮಾಧ್ಯಮಗಳು ಧರ್ಮಸ್ಥಳ ದೇವಾಲಯ ಮತ್ತು ಅದರ ಆಡಳಿತ ನೋಡಿಕೊಳ್ಳುತ್ತಿರುವ ಕುಟುಂಬದ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ ನಿರ್ಬಂಧ (ಗ್ಯಾಗ್ ಆರ್ಡರ್) ವಿಧಿಸಿತ್ತು. ಈ ನಿರ್ಬಂಧವನ್ನು ಆಗಸ್ಟ್ 1ರಂದು ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿದೆ.

ಆದರೆ ಧರ್ಮಸ್ಥಳ ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿರುವ ಕುಟುಂಬದ ವಿರುದ್ಧ ಅವಹೇಳನಕಾರಿ ವಿಷಯವನ್ನು ಪ್ರಕಟಿಸದಂತೆ ಯೂಟ್ಯೂಬ್ ಚಾನೆಲ್‌ಗೆ ವಿಧಿಸಿದ್ದ ನಿರ್ಬಂಧವನ್ನು ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಧರ್ಮಸ್ಥಳ ದೇವಾಲಯದ ಅಧೀನ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಹರ್ಷೇಂದ್ರ ಕುಮಾರ್ ಡಿ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ರಜಾ ಅವಧಿಯ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತಂತೆ ಸುಪ್ರೀಂ ಕೋರ್ಟ್ ನಾಳೆ (ಆ.8) ಅರ್ಜಿ ವಿಚಾರಣೆ ನಡೆಸಲಿದೆ ಎಂದು livelaw.in ವರದಿ ಮಾಡಿದೆ.

ಗುರುವಾರ (ಆ.7) ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ, ನ್ಯಾಯಮೂರ್ತಿಗಳಾದ ಎಸ್‌ಸಿ ಶರ್ಮಾ ಮತ್ತು ವಿನೋದ್ ಚಂದ್ರನ್ ಅವರ ಪೀಠದ ಮುಂದೆ ವಿಷಯ ಪ್ರಸ್ತಾಪಿಸಿದ ಹರ್ಷೇಂದ್ರ ಕುಮಾರ್ ಪರ ವಕೀಲ, “ಹಲವಾರು ಯೂಟ್ಯೂಬ್ ಚಾನೆಲ್‌ಗಳು ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿರುವ ಕುಟುಂಬದ ವಿರುದ್ದ ಅವಹೇಳನಕಾರಿ ವಿಷಯ ಪ್ರಸಾರ ಮಾಡುತ್ತಿವೆ” ಎಂದು ಹೇಳಿದರು.

“8 ಸಾವಿರ ಯೂಟ್ಯೂಬ್ ಚಾನೆಲ್‌ಗಳು ದೇವಸ್ಥಾನದ ಆಡಳಿತದ ವಿರುದ್ದ ಅವಹೇಳನಕಾರಿ ವಿಷಯಗಳನ್ನು ಪ್ರಸಾರ ಮಾಡುತ್ತಿವೆ. ಆದ್ದರಿಂದ, ಅರ್ಜಿಯನ್ನು ನಾಳೆ ವಿಚಾರಣೆಗೆ ಪರಿಗಣಿಸಿ” ಎಂದು ವಕೀಲ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, “ಈ ವಿಷಯವನ್ನು ಈಗಾಗಲೇ ನಾಳೆಗೆ ಪಟ್ಟಿ ಮಾಡಲಾಗಿದೆ” ಎಂದರು.

ಸದ್ಯ ಹರ್ಷೇಂದ್ರ ಕುಮಾರ್ ಪರ ವಕೀಲರು 8 ಸಾವಿರ ಯೂಟ್ಯೂಬ್ ಚಾನೆಲ್‌ಗಳು ಅವಹೇಳನಕಾರಿ ವಿಷಯ ಪ್ರಸಾರ ಮಾಡುತ್ತಿವೆ ಎಂದು ಸಿಜೆಐ ಪೀಠದ ಮುಂದೆ ಹೇಳಿದ್ದಾರೆ. ಆದರೆ ಯಾವುದೇ ನಿರ್ದಿಷ್ಟ ಯೂಟ್ಯೂಬ್ ಚಾನಲ್ ವಿರುದ್ದ ಮಾತ್ರ ಹರ್ಷೇಂದ್ರ ಕುಮಾರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರಾ? ಅಥವಾ ಎಲ್ಲಾ ಮಾಧ್ಯಮಗಳ ವಿರುದ್ದ ಅರ್ಜಿ ಸಲ್ಲಿಸಿದ್ದಾರಾ? ಎಂಬುವುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: Madenuru Manu: ಮಡೆನೂರು ಮನು-ಸಂತ್ರಸ್ತೆ ಕಾಂಪ್ರಮೈಸ್‌: ಕೇಸ್‌ ವಾಪಸ್‌

Comments are closed.