Private Road: ಖಾಸಗಿ ರಸ್ತೆಗೆ ಸರ್ಕಾರಿ ಹಣದಲ್ಲಿ ಕಾಮಗಾರಿ : ಆಕ್ರೋಶಗೊಂಡ ಸ್ಥಳೀಯರಿಂದ ಶಾಸಕರ ಮಧ್ಯಪ್ರವೇಶಕ್ಕೆ ಒತ್ತಾಯ

Private Road: ಮಡಿಕೇರಿಯ ತಿತಿಮತಿಯಲ್ಲಿ ಸರಕಾರದ ಹಣದಲ್ಲಿ ಖಾಸಗಿ ರಸ್ತೆ ಅಭಿವೃದ್ಧಿಗೊಳಿಸಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಕೇವಲ ಇಬ್ಬರು ವ್ಯಕ್ತಿಗಳ ಮನೆಗೆ ತೆರಳುವ ಖಾಸಗಿ ರಸ್ತೆಯನ್ನು ರೂ. 5 ಲಕ್ಷ ಮೊತ್ತದ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಿದ ಪ್ರಕರಣ ಬಿಜೆಪಿಯವರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ಇದು ಆಡಳಿತ ಪಕ್ಷದ ಮುಖಂಡರ ನಡುವೆ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿದೆ.

ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಪ್ರಮುಖ ಗುರಿಯಾಗಿಸಿಕೊಂಡು ಈ ಕಾಮಗಾರಿ ನಡೆದಿದೆ ಎನ್ನುವುದು ಬಿಜೆಪಿ ಮುಖಂಡರ ವಾದವಾಗಿದೆ. ಆದರೆ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ತಿತಿಮತಿಯ ಕಾಂಗ್ರೆಸ್ ಮುಖಂಡರು, ಸ್ಥಳೀಯ ಪ್ರಮುಖರನ್ನು ಗಣನೆಗೆ ತೆಗೆದುಕೊಳ್ಳದೆ ಈ ಕಾಮಗಾರಿ ಕೈಗೊಳ್ಳಲಾಗಿದೆ. ಎಲ್ಲಿಂದಲೋ ಬಂದು ಇಲ್ಲಿ ರಾಜಕಾರಣ ಮಾಡುವುದಾದರೆ ಸ್ಥಳೀಯ ಕಾಂಗ್ರೆಸಿಗರಿಗೆ ಏನು ಕೆಲಸ ಎಂದು ಪ್ರಶ್ನಿಸಿದ್ದಾರೆ. ಆದ್ದರಿಂದ ಶಾಸಕರು ಈ ಕುರಿತು ಕೂಡಲೆ ಮಧ್ಯ ಪ್ರವೇಶಿಸಿ ಸರಕಾರದ ಹಣ ದುರುಪಯೋಗವಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಸಾರ್ವಜನಿಕ ರಸ್ತೆಗಳು ಅಭಿವೃದ್ಧಿಗಾಗಿ ಕಾದಿದೆ. ಕೆಲವು ಗ್ರಾಮೀಣ ರಸ್ತೆಗಳಂತೂ ವಾಹನ ಸಂಚಾರಕ್ಕಿರಲಿ ಮನುಷ್ಯರು ನಡೆದಾಡಲು ಕೂಡ ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಹೀಗಿರುವಾಗ ದುಸ್ತಿತಿಯಲ್ಲಿರುವ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದನ್ನು ಬಿಟ್ಟು ಹೆದ್ದಾರಿಗೆ ಹೊಂದಿಕೊಂಡಂತಿರುವ ಖಾಸಗಿ ರಸ್ತೆಯನ್ನು ಸರ್ಕಾರದ ಹಣದಲ್ಲಿ ಅಭಿವೃದ್ಧಿಪಡಿಸಿದ್ದು ದುರುಪಯೋಗವಲ್ಲದೆ ಮತ್ತೇನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಈ ಖಾಸಗಿ ರಸ್ತೆಗೆ ಕಾಂಕ್ರೀಟ್ ಹಾಕಲು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಯಾವುದೇ ಹಣ ಬಿಡುಗಡೆಯಾಗಿರುವುದಿಲ್ಲ. ಅಲ್ಲದೆ ಖಾಸಗಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಸರ್ಕಾರದ ನಿಯಮಾವಳಿಯಂತೆ ಅವಕಾಶವಿರುವುದಿಲ್ಲ. ಇದು ಕೇವಲ ಶಾಸಕರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಖಾಸಗಿ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದು ಜನವಿರೋಧಿ ನೀತಿಯಾಗಿದೆ ಎಂದು ಬಿಜೆಪಿ ಪ್ರಮುಖರು ಆರೋಪಿಸಿದ್ದಾರೆ.
ಈ ಕಾಮಗಾರಿಯನ್ನು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಗುತ್ತಿಗೆದಾರರೊಬ್ಬರಿಂದ ಮುಂಗಡವಾಗಿ ಮಾಡಿಸಲಾಗಿದೆ ಎಂಬ ಮಾಹಿತಿ ಇದೆ. ಈ ರೀತಿಯಾಗಿ ಸಾರ್ವಜನಿಕರ ಹಣ ದುರ್ಬಳಕೆ ಆಗುತ್ತಿರುವ ಕುರಿತು ಶಾಸಕರು ಕೂಡಲೇ ಮಧ್ಯಪ್ರವೇಶಿಸಿ ಸ್ಥಳೀಯ ಕಾಂಗ್ರೆಸ್ ಪ್ರಮುಖರಿಗೆ ಎಚ್ಚರಿಕೆ ನೀಡಬೇಕು. ತಿತಿಮತಿ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಕಣ್ಣಿಟ್ಟಿರುವ ಕೆಲವು ಕಾಂಗ್ರೆಸಿಗರ ನಡೆಯನ್ನು ನಿಯಂತ್ರಿಸಬೇಕು. ಅಲ್ಲದೆ ಖಾಸಗಿ ರಸ್ತೆಗೆ ಅಭಿವೃದ್ಧಿಪಡಿಸಿದ ಕಾಮಗಾರಿಯ ಬಿಲ್ಲನ್ನು ಕೂಡಲೇ ತಡೆಹಿಡಿಯಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಖಾಸಗಿ ರಸ್ತೆ ಅಭಿವೃದ್ಧಿ ಕುರಿತಂತೆ ಸ್ಥಳೀಯ ಜನರಲ್ಲಿ ತೀವ್ರ ಗೊಂದಲವಿದೆ. ಆದ್ದರಿಂದ ಈ ಕುರಿತು ಸಂಬಂಧಿಸಿದವರು ಸ್ವಷ್ಟತೆ ನೀಡಬೇಕಾಗಿದೆ. ಒಂದು ವೇಳೆ ಖಾಸಗಿಯವರೇ ತಮ್ಮ ಸ್ವಂತ ಖರ್ಚಿನಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ಸಂಬಂಧಿಸಿದವರು ಈ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Puttur: ಪುತ್ತೂರು: ನೆಹರುನಗರ ಶ್ರೀ ಸಾಯಿ ವೆಲ್ಡಿಂಗ್ ವರ್ಕ್ಸ್ ಮಾಲಕ ವಿಶ್ವಾಸ್ ಆತ್ಮ*ಹತ್ಯೆ
Comments are closed.