D K Shivkumar: ಧರ್ಮಸ್ಥಳ ಪ್ರಕರಣ – ದಿಢೀರ್ SIT ರಚನೆ ಯಾಕೆ? ಡಿಕೆಶಿ ಹೇಳಿದ್ದೇನು..?

D K Shivkumar : ಧರ್ಮಸ್ಥಳ ಅಪರಾಧ ಕೃತ್ಯಗಳ ಪ್ರಕರಣ ರಾಜ್ಯ ಮಾತ್ರವಲ್ಲದೆ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲಿ ನೋಡಿದರೂ ಇದೇ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಸಾಕಷ್ಟು ಮಂದಿ ಈ ವಿಚಾರದ ಕುರಿತು ನ್ಯಾಯಯುತ ತನಿಖೆಯಾಗಲಿ ಎಂದು ಆಗ್ರಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ಎಸ್ಐಟಿ ತಂಡವನ್ನು ರಚಿಸಿ ಪ್ರಕರಣದ ತನಿಖೆಗೆ ಆದೇಶಿಸಿದೆ.

ಆದರೆ ಆಶ್ಚರ್ಯದ ವಿಚಾರವೇನೆಂದರೆ ಆರಂಭದಲ್ಲಿ ನ್ಯಾಯವಾದಿಗಳು, ಹೋರಾಟಗಾರರೆಲ್ಲರೂ ಎಸ್ಐಟಿ ರಚನೆ ಮಾಡಿ, ಈ ಪ್ರಕರಣದ ತನಿಖೆ ಮಾಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದಾಗ ಸರ್ಕಾರವು ಎಸ್ಐಟಿ ರಚನೆ ಸಾಧ್ಯವಿಲ್ಲ ಎಂದು ಹೇಳುತ್ತಿತ್ತು. ಅಲ್ಲದೆ “ಎತ್ತು ಮರಿ ಹಾಕಿತೆಂದು ಕೊಟ್ಟಿಗೆ ರೆಡಿ ಮಾಡಲು ಸಾಧ್ಯನಾ? ಯಾರೋ ಹೇಳಿದ ಮಾತ್ರಕ್ಕೆ ಎಸ್ಐಟಿ ರಚನೆ ಸಾಧ್ಯವಿಲ್ಲ” ಎಂದು ಮುಖ್ಯಮಂತ್ರಿಗಳು ಕೂಡ ಬಹಿರಂಗವಾಗಿಯೇ ಹೇಳಿಕೆ ನೀಡಿದರು. ಇದರಿಂದಾಗಿ ಹೋರಾಟಗಾರರೆಲ್ಲರೂ ಭಾರಿ ನಿರಾಸೆಗೊಂಡಿದ್ದರು. ಆದರೆ ಆಶ್ಚರ್ಯಕರವಾದ ಬೆಳವಣಿಗೆ ಎಂಬಂತೆ ನಿನ್ನೆ ದಿನ ರಾಜ್ಯ ಸರ್ಕಾರವು, ಸದ್ದು ಗದ್ದಲವಿಲ್ಲದೆ ದಿಢೀರ್ ಎಂದು ನಾಲ್ಕು ಜನ ಅಧಿಕಾರಿಗಳನ್ನು ಒಳಗೊಂಡ ಎಸ್ಐಟಿ ತಂಡವನ್ನು ರಚಿಸಿ ತನಿಖೆಗೆ ಆದೇಶ ಹೊರಡಿಸಿಯೇ ಬಿಟ್ಟಿತು. ಅದು ಕೂಡ ಹೋರಾಟಗಾರರು ಸೂಚಿಸಿದ ಅಧಿಕಾರಿಯ ನೇತೃತ್ವದಲ್ಲಿಯೇ ತಂಡ ರಚನೆಯಾಗಿದೆ !! ಈ ಮಹತ್ವದ ಬೆಳವಣಿಗೆ ಏಕೆ ಎಂಬುದರ ಕುರಿತು ಇದೀಗ ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಹೌದು, ಈ ಸಂಬಂಧ ಇಂದು ಮಾಧ್ಯಮಗಳು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಳಿ ಧರ್ಮಸ್ಥಳ ಪ್ರಕರಣದ ಕುರಿತು ತನಿಖೆ ನಡೆಸಲು ಸಡನ್ ಆಗಿ ಎಸ್ ಐಟಿ ರಚನೆ ಯಾಕೆ ಎಂದು ಕೇಳಿದಾಗ “ಮಾಧ್ಯಮಗಳು ಈ ವಿಚಾರವನ್ನು ದೊಡ್ಡದಾಗಿ ಬಿಂಬಿಸಿದಾಗ ನಾವು ಮಾಧ್ಯಮಗಳಿಗೆ ಗೌರವ ನೀಡಬೇಕಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ನಿಮಗೂ ನಮ್ಮಷ್ಟೇ ಜವಾಬ್ದಾರಿ ಇದೆ. ನಿಮ್ಮ ಹಾಗೂ ವಿರೋಧ ಪಕ್ಷಗಳ ಹಿತವಚನ, ನುಡಿಮುತ್ತುಗಳನ್ನು ನಾವು ಕೇಳಬೇಕು ಎಂದು ತಿಳಿಸಿದರು.
ಅಲ್ಲದೆ ಈ ವಿಚಾರವಾಗಿ ಪರ ವಿರೋಧ ಚರ್ಚೆ ಆಗುತ್ತಿದೆ. ಇದನ್ನು ಗೃಹ ಸಚಿವರು ನಿಭಾಯಿಸುತ್ತಿದ್ದು, ಬಹಳ ಹಿರಿಯ ಅಧಿಕಾರಿಗಳನ್ನು ಎಸ್ ಐಟಿ ತಂಡದಲ್ಲಿ ನಿಯೋಜಿಸಿದ್ದಾರೆ. ತನಿಖೆ ನಂತರ ಸತ್ಯಾಸತ್ಯತೆ ತಿಳಿಯುತ್ತದೆ ಎಂದರು.
Comments are closed.