Oil Price: ಟ್ರಂಪ್ ತೆರಿಗೆ ಆಟ- ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 8ರಿಂದ 10 ರೂ ಹೆಚ್ಚಳ?

Oil Price: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಡುತ್ತಿರುವ ತೆರಿಗೆ ಆಟಕ್ಕೆ ಭಾರತದಲ್ಲಿ ಪೆಟ್ರೋಲ್ ಬೆಲೆ 8 ರಿಂದ 10 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ.

ಹೌದು, ಡೊನಾಲ್ಡ್ ಟ್ರಂಪ್ ರಷ್ಯಾದೊಂದಿಗೆ ವ್ಯಾಪಾರ ಮಾಡುವ ದೇಶಗಳಿಗೆ 100% ದ್ವಿತೀಯಕ ತೆರಿಗೆ ವಿಧಿಸುವ ಧಮಕಿಯನ್ನು ನೀಡಿದ್ದಾರೆ. ಈ ಧಮಕಿಯಿಂದ ಭಾರತದ ಕಚ್ಚಾ ತೈಲ ಪೂರೈಕೆಯ ಮೇಲೆ ಅನಿಶ್ಚಿತತೆ ಉಂಟಾಗಬಹುದೇ ಎಂಬ ಪ್ರಶ್ನೆ ಎದುರಾಗಿದೆ.
ಅಂದಹಾಗೆ ಭಾರತ ಮತ್ತು ಚೀನಾವು ರಷ್ಯಾದಿಂದ ತೈಲ ಖರೀದಿಸುವ ಪ್ರಮುಖ ದೇಶಗಳಾಗಿವೆ. ರಷ್ಯಾವು ಭಾರತಕ್ಕೆ ತೈಲ ಪೂರೈಕೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದು, ಒಟ್ಟು ಆಮದಿನ 35% ರಷ್ಯಾದಿಂದ ಬರುತ್ತದೆ. ಭಾರತದ ಖಾಸಗಿ ಕ್ಷೇತ್ರದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರ ಎನರ್ಜಿಯಂತಹ ರಿಫೈನರಿಗಳು ರಷ್ಯಾದ ತೈಲ ಖರೀದಿಯಲ್ಲಿ ಸುಮಾರು 50% ಭಾಗವಹಿಸುತ್ತವೆ. ಟ್ರಂಪ್‌ನ ತೆರಿಗೆ ಧಮಕಿಯು ಒಂದು ವೇಳೆ ಜಾರಿಗೆ ಬಂದರೆ, ರಷ್ಯಾದ ಕಚ್ಚಾ ತೈಲ ಆಮದು ಭಾರತಕ್ಕೆ ಲಾಭದಾಯಕವಾಗದಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಇನ್ನು ರಷ್ಯಾವು ದಿನಕ್ಕೆ 4.5-5.0 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ರಫ್ತು ಮಾಡುತ್ತದೆ, ಇದು ಜಾಗತಿಕ ಬಳಕೆಯ ಸುಮಾರು 5% ಆಗಿದೆ. ಈ ತೆರಿಗೆ ಧಮಕಿಯು ಭಾರತದ ಆರ್ಥಿಕತೆ ಮತ್ತು ಇಂಧನ ವೆಚ್ಚದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಭಾರತದಲ್ಲಿ ತೈಲದ ಬೆಲೆ 8ರಿಂದ 10 ರೂ ಹೆಚ್ಚಳವಾಗಬಹುದು ಎನ್ನಲಾಗಿದೆ.
Comments are closed.